ಬೆಂಗಳೂರಿಗೆ ಪ್ರಧಾನಿ ಮೋದಿ: ಸಾರ್ವಜನಿಕರಿಗೆ ಇಂದು ಟ್ರಾಫಿಕ್ ಕಿರಿಕ್, ಈ ರಸ್ತೆಗಳಲ್ಲಿ ಸಂಚಾರಕ್ಕೆ ನಿಷೇಧ

| Updated By: Rakesh Nayak Manchi

Updated on: Nov 11, 2022 | 7:53 AM

Bangalore: ನಗರಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಸಂಚಾರ ನಿಯಮಗಳಲ್ಲಿ ವ್ಯತ್ಯಯವಾಗಲಿವೆ. ಬೆಳಗ್ಗೆ 8ರಿಂದಲೇ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಭಂಧ ವಿಧಿಸಲಾಗುತ್ತಿದ್ದು, ಶಾಸಕರ ಭವನಕ್ಕೆ ಬೆಳಗ್ಗೆ 6ರಿಂದಲೇ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

ಬೆಂಗಳೂರಿಗೆ ಪ್ರಧಾನಿ ಮೋದಿ: ಸಾರ್ವಜನಿಕರಿಗೆ ಇಂದು ಟ್ರಾಫಿಕ್ ಕಿರಿಕ್, ಈ ರಸ್ತೆಗಳಲ್ಲಿ ಸಂಚಾರಕ್ಕೆ ನಿಷೇಧ
ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಪ್ರಮುಖ ರಸ್ತೆಗಳು ಬಂದ್
Follow us on

ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ (Traffic Problem) ಎದುರಾಗಬಹುದು. ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಬದಲಿ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಮೈಸೂರು ಬ್ಯಾಂಕ್​ ವೃತ್ತ-ಅರಮನೆ ರಸ್ತೆಯಲ್ಲಿ ಸಂಚಾರ ನಿಷೇಧ ಹಿನ್ನೆಲೆ ಕೆಂಪೇಗೌಡ ರಸ್ತೆಯ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಇಂದು ರಿಂಗ್ ರಸ್ತೆಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾರ್ಯಕ್ರಮ ಮುಗಿದ ನಂತರ 2 ಗಂಟೆಗಳ ಕಾಲ ನಿರ್ಬಂಧ ಮುಂದುವರಿಯಲಿದೆ. ಈ ಬಗ್ಗೆ ನಗರಕ್ಕೆ ಆಗಮಿಸುವವರಿಗೆ ಹಾಗೂ ಬಸ್​ಗಳಲ್ಲಿ ಓಡಾಡುವವರಿಗೆ ಮಾರ್ಗಗಳನ್ನು ಸೂಚಿಸಲಾಗಿದೆ. ಸಂಬಂಧಪಟ್ಟ ಎಸ್​​ಪಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಜನರನ್ನು ಕರೆತರಲು ಬೆಂಗಳೂರಿಂದ 1,600 ಬಸ್​​ಗಳು ತೆರಳಿವೆ. ಆ ಎಲ್ಲಾ ಬಸ್​​ಗಳಿಗೂ ಪರ್ಯಾಯ ಮಾರ್ಗ ಸೂಚಿಸಲಾಗಿದೆ ಎಂದು ರವಿಕಾಂತೇಗೌಡ ಅವರು ಹೇಳಿದ್ದಾರೆ.

ಶಾಸಕರ ಭವನಕ್ಕೆ ಸಾರ್ವಜನಿಕರಿಗೆ ನಿರ್ಬಂಧ

ವಿಧಾನಸೌಧದಲ್ಲಿ ಇಂದು ಪ್ರತಿಮೆಗಳಿಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡಲಿರುವ ಹಿನ್ನೆಲೆ ಇಂದು ಬೆಳಗ್ಗೆ 6ರಿಂದ ಶಾಸಕರ ಭವನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತಿದ್ದು, ಎರಡೂ ಪ್ರತಿಮೆಗಳ ಆವರಣದ ಸುತ್ತಮುತ್ತ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.
ಸಮಾವೇಶಕ್ಕೆ ಬರುವ ಗಣ್ಯರು, ಜನರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ

ಇಂದು ಕೆಂಪೇಗೌಡರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಲಿದ್ದು, ಸಮಾವೇಶಕ್ಕೆ ಬರುವ ಗಣ್ಯರು, ಜನರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣ ಸುತ್ತಮುತ್ತ 19 ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, 4 ಗೇಟ್​ಗಳ ಮೂಲಕ 19 ಕಡೆ ವಾಹನಗಳ ಪಾರ್ಕಿಂಗ್​ಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಪಾರ್ಕಿಂಗ್ ಸ್ಥಳ ಗುರುತಿಸಿ ಬೋರ್ಡ್​​​​ಗಳ ಅಳವಡಿಕೆ ಮಾಡಲಾಗಿದೆ. ಸ್ವಂತ ವಾಹನದಲ್ಲಿ ಬರುವವರಿಗೂ ಪ್ರತ್ಯೇಕ ಪಾರ್ಕಿಂಗ್​ ವ್ಯವಸ್ಥೆ ಇದೆ.

ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರ ನಿಯೋಜನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಭುವನಹಳ್ಳಿ ಗೇಟ್ ಬಳಿ ಬೃಹತ್ ಸಮಾವೇಶ ನಡೆಯಲಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. 1,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಪ್ರಧಾನಮಂತ್ರಿ ಸಂಚಾರ; ಯಾವೆಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ?

ಇಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಸಾವರ್ಜನಿಕರ ಸಂಚಾರ ಮಾರ್ಗ ಬದಲಾವಣೆಯಾಗಲಿದೆ. ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್​ಕೋರ್ಸ್ ರಸ್ತೆ, ಸ್ಯಾಂಕಿರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್​ಪೋರ್ಟ್ ಎಲಿವೇಟೆಡ್ ಕಾರಿಡಾರ್​ ರಸ್ತೆ, ಶೇಷಾದ್ರಿ ರಸ್ತೆ-ಮಹಾರಾಣಿ ಕಾಲೇಜು ಬ್ರಿಡ್ಜ್-ರೇಲ್ವೆ ಸ್ಟೇಷನ್ ಪ್ರವೇಶ ದ್ವಾರ, ಕೆ.ಜಿ.ರಸ್ತೆ-ಶಾಂತಲಾ ಜಂಕ್ಷನ್​ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ, ವಾಟಾಳ್ ನಾಗರಾಜ್ ರಸ್ತೆ-ಕೋಡೆ ಅಂಡರ್​ಪಾಸ್​ನಿಂದ ಪಿಎಫ್​ವರೆಗೆ, ಏರ್​ಪೋರ್ಟ್​ ರಸ್ತೆ ಸುತ್ತಲಿನ ಪ್ರದೇಶದ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.

ಬೆಂಗಳೂರು ನಗರದಲ್ಲಿ ಮಾರ್ಗ ಬದಲಾವಣೆ ಮಾಡಿಕೊಂಡಿದ್ದೇವೆ. ಇಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಹಲವೆಡೆ ಸಂಚಾರ ಬಂದ್​ ಆಗಿರಲಿವೆ. ರಾಜಭವನ, ಪ್ಯಾಲೇಸ್ ರೋಡ್​, ರೇಸ್​​ ಕೋರ್ಸ್ ರೋಡ್​​​, ಸ್ಯಾಂಕಿ, ಕ್ವೀನ್ಸ್ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಸಂಚಾರ ಬಂದ್​​​ ಆಗಿರಲಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮನವಿ ಮಾಡಿದ್ದಾರೆ.

ಪ್ರಧಾನಿ ಪ್ರಯಾಣ ಮತ್ತು ಕಾರ್ಯಕ್ರಮದ ಸಮಯ

ಇಂದು ಬೆಳಗ್ಗೆ 9 ಗಂಟೆಗೆ ಹೆಚ್​ಎಎಲ್ ಏರ್​ಪೋರ್ಟ್​ಗೆ ಆಗಮಿಸಲಿರುವ ಮೋದಿ, 9.45ಕ್ಕೆ ಹೆಲಿಕಾಪ್ಟರ್ ಮೂಲಕ ಹೆಚ್​ಎಎಲ್​ನಿಂದ ವಿಧಾನಸೌಧಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ ಶಾಸಕರ ಭವನದಲ್ಲಿ ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ 10 ಗಂಟೆಗೆ ಕೆಎಸ್​​ಆರ್ ರೈಲ್ವೆ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ವಂದೇ ಭಾರತ್, ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 10.45ಕ್ಕೆ ಹೆಬ್ಬಾಳ ಎಎಫ್​​ಟಿಟಿಸಿ ಹೆಲಿಪ್ಯಾಡ್​ಗೆ ರಸ್ತೆ ಮೂಲಕ ಪ್ರಯಾಣ ಬೆಳೆಸಲಿರುವ ಪ್ರಧಾನಿ, 11 ಗಂಟೆಗೆ ಎಎಫ್​ಟಿಟಿಸಿ ಹೆಲಿಪ್ಯಾಡ್​ನಿಂದ ಕೆಂಪೇಗೌಡ ಏರ್​​ಪೋರ್ಟ್​ಗೆ ತೆರಳಲಿದ್ದಾರೆ. ಬೆಳಗ್ಗೆ 11.20ಕ್ಕೆ ಕೆಂಪೇಗೌಡ ಏರ್​​ಪೋರ್ಟ್​​ ತಲುಪುವ ಮೋದಿ 11.30ಕ್ಕೆ ಏರ್​​ಪೋರ್ಟ್ ಟರ್ಮಿನಲ್-2 ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. 12.30ಕ್ಕೆ ಬೃಹತ್ ಸಮಾವೇಶ ಸ್ಥಳಕ್ಕೆ ತಲುಪಲಿದ್ದಾರೆ.

ಮಧ್ಯಾಹ್ನ 12.30ರಿಂದ 1.30ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ, ಮಧ್ಯಾಹ್ನ 1.30ಕ್ಕೆ ರಸ್ತೆ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಕೆಂಪೇಗೌಡ ಏರ್​​​ಪೋರ್ಟ್​​ನಿಂದ ತಮಿಳುನಾಡಿನ ಮಧುರೈಗೆ ತೆರಳಲಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 am, Fri, 11 November 22