ಕೋಲಾರ: ನೋಡುವುದಕ್ಕೆ ಪುಟಾಣಿ ಮೊಲದಂತೆ ಇರುವ ಪ್ರಾಣಿಯದು. ಎಷ್ಟು ಸುಂದರವಾಗಿದೆಯೋ ಅಷ್ಟೇ ಲಾಭದಾಯಕ ಪ್ರಾಣಿ ಕೂಡಾ. ಆಯಾಸವಿಲ್ಲದೇ, ಹೆಚ್ಚು ಶ್ರಮವಿಲ್ಲದೇ ಹೆಚ್ಚು ಆದಾಯ ತರಬಲ್ಲ ಕೃಷಿ. ಆದಾಯದ ಮೂಲವಾದ ಇಂಟರೆಸ್ಟಿಂಗ್ ಟಿಪ್ಸ್ ಇಲ್ಲಿದೆ ಓದಿ..
ಸುಮ್ಮನೇ ನೋಡುತ್ತಿದ್ದರೆ, ಇದು ಪಕ್ಕಾ ಮೊಲದ ರೀತಿಯಲ್ಲಿ ಕಂಡುಬರುವ ಪಾಕೆಟ್ ಫ್ರೆಂಡ್ಲೀ ಪೆಟ್. ಇಂತಹದ್ದೊಂದು ದೃಶ್ಯ ಕಂಡು ಬಂದಿದ್ದು, ಕೋಲಾರ ತಾಲೂಕಿನ ಹೊದಲವಾಡಿಯಲ್ಲಿ. ಈ ಊರಿನ ನಿವಾಸಿಯಾದ ಅಜಯ್ ಎಂಬುವವರು ಬಿ.ಇ. ಮೆಕ್ಯಾನಿಕಲ್ ಮಾಡಿಕೊಂಡು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ, ಅಜಯ್ಗೆ ಕೊರೊನಾ ಬಂದ ನಂತರ ತನ್ನ ಬದುಕನ್ನೇ ಬದಲಾಯಿಸಿಕೊಂಡಿದ್ದಾರೆ. ಇನ್ನೊಂದೆಡೆ ಹೋಗಿ ಕೆಲಸ ಮಾಡೋದಕ್ಕೆ ಬದಲಾಗಿ ತಾನೇ ಏನಾದರು ಹೊಸ ರೀತಿಯ ಕೃಷಿಯೊಂದನ್ನು ಆರಂಭಿಸಬೇಕೆಂದು ನಿರ್ಧರಿಸಿ, ಚೆನ್ನೈನ ಸ್ನೇಹಿತರೊಬ್ಬರ ಸಲಹೆಯಂತೆ ಹೊಸ ಹಾಗೂ ಅಪರೂಪದಲ್ಲಿ ಅಪರೂಪ ಎನ್ನುವಂತೆ ಪಾಕೆಟ್ ಫ್ರೆಂಡ್ಲಿ ಪೆಟ್ ಅಥವಾ ಪ್ರಯೋಗ ಪ್ರಾಣಿ, ಗಿನಿ ಪಿಗ್, ಕೆರಿಯಾಸರ್ ಫ್ಲೆಕ್ಸ್ ಎಂದು ಕರೆಯುವ ಈ ಪ್ರಾಣಿಯನ್ನು ಸಾಕಲು ಆರಂಭಿಸಿದ್ದಾರೆ.
ಸಾಕಣೆ ವಿಧಾನ:
ಇನ್ನು, ಇಂತಹದ್ದೊಂದು ಪ್ರಾಣಿಯನ್ನು ಹೇಗೆ ಸಾಕುವುದು ಎನ್ನುವ ಪ್ರಶ್ನೆಎದುರಾದಾಗ, ಯೂ ಟ್ಯೂಬ್ನಲ್ಲಿ ನೋಡಿ ಕಲಿತು ಸಾಕಣೆ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಅಜಯ್ಗೆ ಸಾತ್ ನೀಡಿದ ತಾಯಿ ಯಶೋಧಮ್ಮ ತಮ್ಮ ಒಂದು ಎಕರೆಯ ಒಂದು ಭಾಗದಲ್ಲಿ ಸಣ್ಣದೊಂದು ಶೆಡ್ ನಿರ್ಮಾಣ ಮಾಡಿಕೊಂಡು ಅದರಲ್ಲಿ ಬಿಳಿಯ ಬಣ್ಣದ ನೂರಾರು ಪಾಕೆಟ್ ಪೆಟ್ಗಳನ್ನು ಸಾಕಲು ಪ್ರೇರೇಪಿಸಿದ್ದಾರೆ.
ಈ ಪ್ರಾಣಿ ಮುದ್ದಾದ ಪುಟ್ಟ ಪ್ರಾಣಿ. ನೋಡಲು ಎಷ್ಟು ಮುದ್ದಾಗಿದೆಯೋ ಅಷ್ಟೇ ಬೆಲೆ ಬಾಳುವಂತಹ ಪುಟ್ಟ ಪ್ರಾಣಿ. ಇದು ಮೊಲವೂ ಅಲ್ಲ, ಇಲಿಯೂ ಅಲ್ಲ. ಆದರೆ, ಅದೇ ರೀತಿಯಲ್ಲಿರುವ ಈ ಪ್ರಾಣಿ ಅಷ್ಟೇನೂ ಪರಿಚಿತವಲ್ಲದ್ದು. ಹಾಗಾಗಿ ಇದನ್ನ ಪಾಕೆಟ್ ಫ್ರೆಂಡ್ಲಿ ಪೆಟ್ ಎಂದು ಕರೆಯುತ್ತಾರೆ. ದಿನಕ್ಕೆ ಮೂರು ಹೊತ್ತು ಮೆಂತ್ಯ ಸೊಪ್ಪು, ಜೋಳ ಹಾಗೂ ಕೆಲವೊಂದು ತರಕಾರಿಗಳನ್ನು ತಿನ್ನುವ ಈ ಪ್ರಾಣಿ, ನೂರು ಗ್ರಾಂ ತೂಕದಿಂದ ಗರಿಷ್ಟ ಎರಡು ಕೆಜಿಯಷ್ಟು ಬೆಳೆಯುತ್ತೆ ಎಂದು ಪಾಕೆಟ್ ಪೆಟ್ ಸಾಕಣೆ ಮಾಡುತ್ತಿರುವ ಅಜಯ್ ಅಭಿಪ್ರಾಯಪಟ್ಟಿದ್ದಾರೆ.
ಇದರ ಬೆಲೆಯೂ ಕೂಡ ಒಂದು ಸಾವಿರದಿಂದ ನಾಲ್ಕು ಸಾವಿರದವರೆಗಿದೆ. ನೂರು ಗ್ರಾಂ ಇದರ ಮಾಂಸಕ್ಕೆ 400 ರೂ ಬೆಲೆ ಇದೆ. ಈ ಪ್ರಾಣಿಯನ್ನು ಸಾಕುವುದು ಭಾರೀ ಆದಾಯದ ಮೂಲ ಮತ್ತು ಕಡಿಮೆ ಖರ್ಚು, ಜೊತೆಗೆ ಶ್ರಮವೂ ಕಡಿಮೆ ಇದ್ದು ಒಬ್ಬರೇ ಇದನ್ನು ನಿಭಾಯಿಸಬಹುದು. ಇದನ್ನ ಪ್ರಮುಖವಾಗಿ ಹೊಸದಾಗಿ ಕಂಡು ಹಿಡಿಯುವ ಲಸಿಕೆ ಅಥವಾ ಔಷಧಿಗಳನ್ನು ಪ್ರಯೋಗಿಸಲು ಈ ಪ್ರಾಣಿಯನ್ನು ಬಳಸುತ್ತಾರೆ. ಅಷ್ಟೇ ಅಲ್ಲದೆ ಅಸ್ತಮಾ, ಅಲರ್ಜಿಗಳಂತಹ ರೋಗಗಳಿಗೆ ಇದರಿಂದ ಔಷಧಿಗಳನ್ನು ತಯಾರು ಮಾಡಲಾಗುತ್ತದೆ. ಸರಾಸರಿ ಇದರಿಂದ ತಿಂಗಳಿಗೆ 60 ರಿಂದ 80 ಸಾವಿರ ಆದಾಯ ಗಳಿಸವಹುದು ಎಂದು ಅಜಯ್ ಹೇಳಿದ್ದಾರೆ.
ಒಟ್ಟಾರೆ, ಕೋಲಾರ ಜಿಲ್ಲೆಯಲ್ಲೇ ಮೊದಲ ಬಾರಿಗೆ ಮೊದಲ ಪ್ರಯತ್ನ ಎಂಬಂತೆ ಪ್ರಯೋಗ ಪ್ರಾಣಿಯ ಸಾಕಣೆಯ ಪ್ರಯೋಗ ಮಾಡುತ್ತಿರುವ ಅಜಯ್ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಜೊತೆಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಈ ರೀತಿ ಪ್ರಯತ್ನ ನಿಜಕ್ಕೂ ಯುವಕರಿಗೆ ಸ್ಪೂರ್ತಿ ಎಂದು ಅಜಯ್ ತಾಯಿ ಯಶೋಧಮ್ಮ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
Published On - 1:00 pm, Sat, 16 January 21