ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ನೀಡುವ ವಿಚಾರದಲ್ಲಿ ನಡೆದಿದೆ ಎನ್ನಲಾದ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಮುಸ್ಲಿಮರಷ್ಟೇ ಭಾಗಿಯಾಗಿದ್ದಾರೆ ಎನ್ನುವಂತೆ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಬೆಂಬಲಿಗರು ಬಿಂಬಿಸಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯ ಮನೋಹರ್ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಕಚೇರಿಗೆ ದೂರು ನೀಡಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆಗೆ ಕೋಮುಬಣ್ಣ ಬಳಿದ ಆರೋಪವನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಬೆಡ್ ದಂಧೆ ನಡೆಸಿರುವವರ ವಿರುದ್ಧ ಕಠಣಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಬೊಮ್ಮನಹಳ್ಳಿ ಬಿಬಿಎಂಪಿ ವಾರ್ ರೂಮ್‌ನಲ್ಲಿ ಐಎಎಸ್ ಆಧಿಕಾರಿ ವಿ.ಯಶವಂತ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಶಾಸಕ ಸತೀಶ್ ರೆಡ್ಡಿ ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಐಎಎಸ್ ಅಧಿಕಾರಿಗಳ ಸಂಘ ಒತ್ತಾಯಿಸಿದೆ.
ಬಿಜೆಪಿ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಕೊವಿಡ್19 ವಾರ್ರೂಮ್ನಲ್ಲಿ ಕಾರ್ಯನಿರ್ವಹಿಸುವವರ ಬಳಿ ಕ್ಷಮಾಪಣೆ ಕೇಳಿದ್ದಾರೆ ಎಂಬ ವಿಚಾರವನ್ನು ಸ್ವತಃ ತೇಜಸ್ವಿ ಸೂರ್ಯ ಅಲ್ಲಗಳೆದಿದ್ದಾರೆ. ಬಿಬಿಎಂಪಿಯಲ್ಲಿ ಬೆಡ್ ಬ್ಲಾಕಿಂಗ್ ಹಗರಣ ನಡೆದಿರುವುದನ್ನು ಅವರು ಬಹಿರಂಗಗೊಳಿಸಿದ್ದರು. ಈ ಪ್ರಕರಣ ಬಳಿಕ ಪರಸ್ಪರ ವಾಗ್ವಾದಕ್ಕೂ ಕಾರಣವಾಗಿತ್ತು.
ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಲೆಂದು ಕಳೆದ ಮಂಗಳವಾರ ಕೊವಿಡ್ ವಾರ್ ರೂಮ್ಗೆ ತೇಜಸ್ವಿ ಸೂರ್ಯ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ 17 ಮುಸ್ಲಿಂ ಕೆಲಸಗಾರರ ಹೆಸರನ್ನು ಓದಿ ಹೇಳಿದ್ದರು. ಆಸ್ಪತ್ರೆಯ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಅವರು ಭಾಗಿಯಾಗಿದ್ದರು ಎಂದು ತಿಳಿಸಿದ್ದರು. ಕರ್ನಾಟಕವು ಕೊರೊನಾ ಸೋಂಕಿನ ತೀವ್ರಗತಿಯ ಹರಡುವಿಕೆಯಿಂದ ತತ್ತರಿಸಿದೆ. ಈ ವೇಳೆ ಹೀಗೆ ಮಾಡಿರುವುದು ಅಕ್ಷಮ್ಯ ಎಂದು ಜನರು ಕೂಡ ಪ್ರತಿಕ್ರಿಯೆ ನೀಡಿದ್ದರು. ತೇಜಸ್ವಿ ಜೊತೆಯಲ್ಲಿದ್ದ ಶಾಸಕರೊಬ್ಬರು ಇವರನ್ನೆಲ್ಲಾ ಕಾರ್ಪೊರೇಷನ್ಗೆ ಅಪಾಯಿಂಟ್ ಮಾಡಿಕೊಂಡಿದ್ದೀರಾ ಅಥವಾ ಮದರಸಾಗಾ ಎಂಬ ಪ್ರಶ್ನೆಯನ್ನೂ ಎತ್ತಿದ್ದರು.
ಮಂಗಳವಾರದ ಈ ಘಟನೆಯ ಬಳಿಕ, ಅಲ್ಲಿನ ಕೆಲಸಗಾರರ ಹೆಸರು, ಸಂಪರ್ಕ ಸಂಖ್ಯೆ ಹಾಗೂ ವಿಳಾಸ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಟ್ಟಿತ್ತು. ಇದರಿಂದ ಅಲ್ಲಿನ ಕೆಲಸಗಾರರಿಗೆ ಬಹಳಷ್ಟು ಸಮಸ್ಯೆಯೂ ಉಂಟಾಗಿತ್ತು. ನಂತರದ ಬೆಳವಣಿಗೆಯಲ್ಲಿ ತೇಜಸ್ವಿ ಸೂರ್ಯ ಘಟನೆಯ ಕುರಿತು ಕ್ಷಮೆ ಕೇಳಿದ್ದಾರೆ ಅಥವಾ ಇಲ್ಲ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಅಭಿಪ್ರಾಯಗಳು ಹರಿದಾಡಲು ಆರಂಭಿಸಿದ್ದವು.
(Police Complaint Against Mp Tejasvi Surya and Supporters of Satish Reddy)
ಇದನ್ನೂ ಓದಿ: ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಗಾನ್ ಕೇಸ್, ಒನ್ ಟೈಮ್ ಕ್ರಾಪ್: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುಹಕ
ಇದನ್ನೂ ಓದಿ: ಮತ್ತೊಂದು ಮಂತ್ರ ದಂಡ ಪ್ರಯೋಗಿಸಿದ ಸಂಸದ ತೇಜಸ್ವಿ ಸೂರ್ಯ; ನಂದನ್ ನಿಲೇಕಣಿ ನೆರವಿಗೆ ಅಸ್ತು
Published On - 11:16 pm, Fri, 7 May 21