ಪೊಲೀಸ್ ಕಾನ್​ಸ್ಟೇಬಲ್ ಹುದ್ದೆಯ ನೇಮಕಾತಿ: ಬಯಲಿಗೆ ಬಂತು ಧಾರವಾಡದಲ್ಲಿ ನಡೆದಿದ್ದ ಅಕ್ರಮ

|

Updated on: May 10, 2021 | 7:49 AM

ನೇಮಕಾತಿಗೆ ಶಿವಪ್ಪನ ವಯೋಮಿತಿ ಮೀರಲು ಬಂದಿತ್ತು. ಈ ಬಾರಿ ಪೊಲೀಸ್ ಇಲಾಖೆಗೆ ಸೇರದೇ ಇದ್ದರೆ, ಮತ್ತೆ ಯಾವತ್ತೂ ಆತನಿಗೆ ಪೊಲೀಸ್ ಆಗುವ ಯೋಗವೇ ಇರುತ್ತಿರಲಿಲ್ಲ. ಆದರೆ ತನ್ನ ತಾಯಿಯ ಆಸೆಯಂತೆ ಪೊಲೀಸ್ ಆಗಲೇಬೇಕು ಎಂದು ನಿರ್ಧರಿಸಿದ ಶಿವಪ್ಪ ತನ್ನನ್ನು ಹೋಲುವ ಬೇರೆ ವ್ಯಕ್ತಿಯನ್ನು ದೈಹಿಕ ಪರೀಕ್ಷೆಗೆ ಹಾಜರು ಮಾಡಿಸಿದ್ದ.

ಪೊಲೀಸ್ ಕಾನ್​ಸ್ಟೇಬಲ್ ಹುದ್ದೆಯ ನೇಮಕಾತಿ: ಬಯಲಿಗೆ ಬಂತು ಧಾರವಾಡದಲ್ಲಿ ನಡೆದಿದ್ದ ಅಕ್ರಮ
ಶಿವಪ್ಪ
Follow us on

ಧಾರವಾಡ: ಸರ್ಕಾರಿ ನೌಕರಿ ಸಿಗಬೇಕು ಎಂದು ಎಷ್ಟೋ ಯುವಕರು ಹಗಲು-ರಾತ್ರಿ ಊಟ, ನಿದ್ದೆ ಇಲ್ಲದೇ ಓದುತ್ತಾರೆ. ಸರ್ಕಾರಿ ಕೆಲಸ ಸಿಗುವಲ್ಲಿ ಕೆಲವರು ಯಶಸ್ವಿಯಾದರೆ ಮತ್ತೆ ಕೆಲವರಿಗೆ ನೌಕರಿಯ ಭಾಗ್ಯವೇ ಇರುವುದಿಲ್ಲ. ಆದರೆ ಧಾರವಾಡದಲ್ಲಿ ಓರ್ವ ಯುವಕ ಏನೇ ಆದರೂ ಪೊಲೀಸ್ ಆಗಲೇಬೇಕು ಎಂದು ಪಣತೊಟ್ಟಿದ್ದು, ಆ ಮೂಲಕ ಅಕ್ರಮವಾಗಿ ಇಲಾಖೆಯನ್ನೂ ಪ್ರವೇಶ ಮಾಡಿದ್ದ. ಆದರೆ ಇದೀಗ ಕಳ್ಳರನ್ನು ಹಿಡಿದು ಜೈಲಿಗೆ ಕಳಿಸಬೇಕಾಗಿದ್ದ ಯುವಕ ತಾನೇ ಜೈಲು ಪಾಲಾಗಿದ್ದಾನೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದ ಶಿವಪ್ಪ ಪಡೆಪ್ಪನವರ್ ಪೊಲೀಸ್ ಕಾನ್ಸ್ಟೇಬಲ್ ಆಗಬೇಕು ಎಂದು ಹಲವಾರು ಬಾರಿ ಪ್ರಯತ್ನಿಸಿದ್ದ. ಆತನ ತಾಯಿಗಂತೂ ಮಗ ಪೊಲೀಸ್ ಆಗಲೇಬೇಕು ಎನ್ನುವ ಆಸೆಯಿತ್ತು. ಆದರೆ ಎಷ್ಟೇ ಬಾರಿ ಪರೀಕ್ಷೆಗೆ ಹಾಜರಾದರೂ ಶಿವಪ್ಪ ದೈಹಿಕ ಪರೀಕ್ಷೆ ಇಲ್ಲವೇ ಲಿಖಿತ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತಿದ್ದ. 2020ರ ಡಿಸೆಂಬರ್​ನಲ್ಲಿ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದಿದ್ದ ಸಿವಿಲ್ ಕಾನ್ಸ್ಟೆಬಲ್ ನೇಮಕಾತಿಯಲ್ಲಿ ಕೊನೆಗೂ ಪಾಸಾಗಿ ಇದೇ ಏಪ್ರಿಲ್ 3 ರಂದು ಇಲಾಖೆಗೆ ಸೇರ್ಪಡೆಯಾಗಿದ್ದ. ಆದರೆ ನೇಮಕಾತಿ ವೇಳೆ ಈತ ನೀಡಿದ್ದ ಬೆರಳಚ್ಚು ಹಾಗೂ ಕರ್ತವ್ಯಕ್ಕೆ ಹಾಜರಾದ ಬಳಿಕ ನೀಡಿದ ಬೆರಳಚ್ಚಿನಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂತು. ಈ ಬಗ್ಗೆ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದಾಗ ಈತ ಮಾಡಿದ್ದ ಅಕ್ರಮ ಬಯಲಿಗೆ ಬಂದಿದೆ.

ದೈಹಿಕ ಪರೀಕ್ಷೆಗೆ ಬಂದವನೇ ಬೇರೆ, ಇಲಾಖೆ ಸೇರಿದ್ದು ಮಾತ್ರ ಶಿವಪ್ಪ
ನೇಮಕಾತಿಗೆ ಶಿವಪ್ಪನ ವಯೋಮಿತಿ ಮೀರಲು ಬಂದಿತ್ತು. ಈ ಬಾರಿ ಪೊಲೀಸ್ ಇಲಾಖೆಗೆ ಸೇರದೇ ಇದ್ದರೆ, ಮತ್ತೆ ಯಾವತ್ತೂ ಆತನಿಗೆ ಪೊಲೀಸ್ ಆಗುವ ಯೋಗವೇ ಇರುತ್ತಿರಲಿಲ್ಲ. ಆದರೆ ತನ್ನ ತಾಯಿಯ ಆಸೆಯಂತೆ ಪೊಲೀಸ್ ಆಗಲೇಬೇಕು ಎಂದು ನಿರ್ಧರಿಸಿದ ಶಿವಪ್ಪ ತನ್ನನ್ನು ಹೋಲುವ ಬೇರೆ ವ್ಯಕ್ತಿಯನ್ನು ದೈಹಿಕ ಪರೀಕ್ಷೆಗೆ ಹಾಜರು ಮಾಡಿಸಿದ್ದ. ಮೊದಲಿಗೆ ತನ್ನ ಪರಿಚಯದ ಮಂಜುನಾಥ ಕರಿಗಾರ್ ಎನ್ನುವ ಯುವಕನಿಗೆ 230000 ರೂಪಾಯಿಗೆ ಡೀಲ್ ಮಾಡಿಕೊಂಡಿದ್ದ. ಮಂಜುನಾಥ ಕರಿಗಾರ್ ತನ್ನ ಸಹಚರರಾದ ಮಂಜುನಾಥ ಮೇಲ್ಮಟ್ಟಿ, ಬಸವರಾಜ ದೇವರಮನಿಯೊಂದಿಗೆ ಸೇರಿಕೊಂಡು ಆನಂದ ಕೋಳೂರು ಎಂಬಾತನನ್ನು ಶಿವಪ್ಪನ ಬದಲಿಗೆ ದೈಹಿಕ ಪರೀಕ್ಷೆಗೆ ಕಳಿಸಿದ್ದರು.

ಶಿವಪ್ಪ ಕಾಲೇಜು ದಿನಗಳ ಫೋಟೋವನ್ನು ನೇಮಕಾತಿ ಪತ್ರದೊಂದಿಗೆ ಲಗತ್ತಿಸಿದ್ದರಿಂದ ಆ ಹೊತ್ತಿನಲ್ಲಿ ವ್ಯತ್ಯಾಸ ಗೊತ್ತಾಗಿರಲಿಲ್ಲ. ಆದರೆ ಯಾವಾಗ ಇಲಾಖೆಗೆ ಸೇರಿ, ಕರ್ತವ್ಯಕ್ಕೆ ನಿಯೋಜನೆಗೊಂಡನೋ ಆಗ ಮತ್ತೊಮ್ಮೆ ಬೆರಳಚ್ಚು ತೆಗೆದುಕೊಂಡಾಗ ವ್ಯತ್ಯಾಸ ಕಂಡು ಬಂದಿದೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೊನೆಗೆ ಧಾರವಾಡ ಎಸ್ಪಿ ಕಚೇರಿಯಿಂದ ಧಾರವಾಡದ ಉಪನಗರ ಠಾಣೆಯಲ್ಲಿ ಈ ಬಗ್ಗೆ ಎಫ್​ಐಆರ್ ದಾಖಲಿಸಲಾಗಿದೆ. ಉಪನಗರ ಠಾಣೆ ಪೊಲೀಸರು ಶಿವಪ್ಪನನ್ನು ಕರೆತಂದು ವಿಚಾರಣೆ ನಡೆಸಿದಾಗ ಎಲ್ಲವೂ ಹೊರ ಬಿದ್ದಿದೆ.

ಶಿವಪ್ಪ ಸೇರಿದಂತೆ ಐವರೂ ಜೈಲು ಪಾಲು
ತನಿಖೆ ನಡೆಸಿದ ಪೊಲೀಸರಿಗೆ ಶಿವಪ್ಪ ಎಲ್ಲ ಅಕ್ರಮವನ್ನು ತಿಳಿಸಿದ್ದಾನೆ. ಕೂಡಲೇ ಪೊಲೀಸರು ಉಳಿದ ನಾಲ್ಕು ಜನ ಆರೋಪಿಗಳನ್ನು ಕರೆ ತಂದು ವಿಚಾರಣೆ ನಡೆಸಿದಾಗ ಎಲ್ಲವೂ ಸತ್ಯ ಗೊತ್ತಾಗಿದೆ. ಇದೀಗ ಐವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಇಲಾಖೆ ಸೇರಿ ಅಕ್ರಮ ಮಾಡುವವರು, ವಂಚಕರನ್ನು ಜೈಲಿಗೆ ಕಳಿಸಬೇಕಾಗಿದ್ದ ಶಿವಪ್ಪ ಇದೀಗ ತಾನೇ ಜೈಲು ಪಾಲಾಗಿದ್ದಾನೆ. ಇನ್ನು ಈ ಪ್ರಕರಣದಲ್ಲಿನ ಆರೋಪಿಗಳ ಪೈಕಿ ಆನಂದ ಕೋಳೂರ ಹಾಗೂ ಬಸವರಾಜ ದೇವರಮನಿ ಈ ಹಿಂದೆ ಇಂಥದ್ದೇ ಒಂದು ಪ್ರಕರಣದಲ್ಲಿ ಹಾಸನ ಜಿಲ್ಲೆಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಆ ಪ್ರಕರಣ ಇನ್ನು ಕೂಡ ವಿಚಾರಣೆಯ ಹಂತದಲ್ಲಿದೆ. ಇದೀಗ ಧಾರವಾಡದಲ್ಲಿ ಮತ್ತೆ ಸಿಕ್ಕಿ ಬಿದ್ದಿದ್ದಾರೆ.

ಈ ಕೃತ್ಯದ ಹಿಂದೆ ದೊಡ್ಡ ಗುಂಪು ಇದೆ. ಇದೇ ರೀತಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಈ ಆರೋಪಿಗಳು ಇಂತಹ ಹಲಚು ಕೃತ್ಯವೆಸಗಿರುವ ಅನುಮಾನಗಳಿವೆ. ಈ ಪ್ರಕರಣದಲ್ಲಿ ಇಲಾಖೆಯ ಬೆರಳಚ್ಚು ತಂಡದ ಸಾಧನೆ ಶ್ಲಾಘನೀಯ. ಅವರೇ ಇದನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಅವರಿಗೆ ಬಹುಮಾನವನ್ನು ಘೋಷಿಸಲಾಗಿದೆ ಎಂದು ಧಾರವಾಡದ ಎಸ್​ಪಿ. ಕೃಷ್ಣಕಾಂತ ತಿಳಿಸಿದ್ದಾರೆ.

ಇದನ್ನೂ ಓದಿ:

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆ ಸ್ಥಾಪನೆ, 16 ಸಾವಿರ ಪೊಲೀಸ್ ಹುದ್ದೆ ಭರ್ತಿಗೆ ಕ್ರಮ; ಬಸವರಾಜ ಬೊಮ್ಮಾಯಿ

ಪೊಲೀಸ್ ನೇಮಕಾತಿ ಪರೀಕ್ಷೆ: ಅಭ್ಯರ್ಥಿ ಬದಲು ಎಕ್ಸಾಂ ಬರೆಯಲು ಬಂದ ಪೇದೆ ಲಾಕ್​