ಕೊಪ್ಪಳ: ಇಡೀ ದೇಶದಲ್ಲಿ ಸದ್ದು ಮಾಡಿದ್ದ ಯಲ್ಲಾಲಿಂಗ ಕೊಲೆ ಪ್ರಕರಣ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಕೊಲೆ ಪ್ರಕರಣದ ಆರೋಪಿಗಳಿಗೆ ಸುಪ್ರೀಂಕೋರ್ಟ್ ಸಹ ಜಾಮೀನು ನಿರಾಕರಿಸಿತ್ತು. ಕೊನೆಗೆ ಅವರು ಜಾಮೀನು ಪಡೆದುಕೊಂಡರು ಎನ್ನುವುದು ಬೇರೆ ಮಾತು. ಮಾಜಿ ಸಚಿವ ಶಿವರಾಜ್ ತಂಗಡಗಿ ಅವರ ಸಚಿವ ಸ್ಥಾನ ಕಿತ್ತುಕೊಂಡಿದ್ದ ಪ್ರಕರಣ ಅದು. ಇದೀಗ ಆ ಕೊಲೆ ಆರೋಪದಲ್ಲಿ ಭಾಗಿಯಾದವನ ಮದುವೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ. ಜಾಮೀನಿನ ಮೇಲೆ ಹೊರ ಬಂದ ಆರೋಪಿಯ ಮದುವೆಯಲ್ಲಿ ಪೊಲೀಸರು ಭಾಗವಹಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಕೊಪ್ಪಳ ಜಿಲ್ಲೆಯ ಜನರು ಕೇಳುತ್ತಿದ್ದಾರೆ.
ಏನಿದು ಯಲ್ಲಾಲಿಂಗ ಪ್ರಕರಣ?
ಜನವರಿ 11, 2015ರಲ್ಲಿ ಕೊಪ್ಪಳ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿತ್ತು. ಮೊದಲು ಸಾಮಾನ್ಯವಾಗಿ ಯಾರೋ ಹುಡುಗ ರೇಲ್ವೆ ಹಳಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅನುಮಾನಿಸಿದ್ದರು. ನಂತರದ ದಿನಗಳಲ್ಲಿ ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಅನುಮಾನಗಳು ದಟ್ಟವಾಗಿದ್ದವು. ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ಬೆಳಕಿಗೆ ಬಂದ ನಂತರ ಪ್ರಕರಣದ ತನಿಖೆಯ ಹೊಣೆ ಗದಗ ರೈಲ್ವೆ ಪೊಲೀಸ್ ಠಾಣೆಯಿಂದ ಕೊಪ್ಪಳ ನಗರ ಠಾಣೆಗೆ ವರ್ಗಾವಣೆಯಾಯಿತು. ಯಲ್ಲಾಲಿಂಗನ ಮನೆಯವರೂ ಇದು ಕೊಲೆ ಎಂದು ಅನುಮಾನಿಸಿದ್ದರು. ಕೊಲೆ ಪ್ರಕರಣದ ತನಿಖೆ ಚುರುಕಾದಂತೆ ಹಲವು ವಿಚಾರಗಳು ಬಯಲಾದವು.
ಯಲ್ಲಾಲಿಂಗ ಯಾರು?
ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಕನಕಾಪೂರ ನಿವಾಸಿ. ತಮ್ಮ ಗ್ರಾಮದ ಸಮಸ್ಯೆಯನ್ನು ಖಾಸಗಿ ವಾಹಿನಿ ಮುಂದೆ ಹೇಳಿದ್ದಕ್ಕೆ ಯಲ್ಲಾಲಿಂಗನ ಹತ್ಯೆ ಮಾಡಲಾಗಿತ್ತು. ಮಾಜಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ ಮತ್ತು ಅವರ ಮಗ ಮಹಾಂತೇಶ ನಾಯಕ ಸೇರಿ 9 ಜನರ ಮೇಲೆ ಕೊಲೆ ಆರೋಪ ಕೇಳಿಬಂತು. ಕೊಪ್ಪಳ ರೈಲು ನಿಲ್ದಾಣದಲ್ಲಿ ಯಲ್ಲಾಲಿಂಗನ ಪ್ರಾಣ ಹೋಗಿತ್ತು. ಆ ಸಮಯದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಶಿವರಾಜ್ ತಂಗಡಗಿ. ಜಿಲ್ಲೆಯಲ್ಲಿ ಹಲವು ಪ್ರತಿಭಟನೆಗಳಿಗೂ ಈ ಕೊಲೆ ಪ್ರಕರಣ ಕಾರಣವಾಗಿತ್ತು.
ಹನುಮೇಶ್ ನಾಯಕ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ನಾಯಕರು ಜಿಲ್ಲೆಗೆ ಬಂದಿದ್ದರು. ಅಂದಿನ ವಿರೋಧ ಪಕ್ಷದ ನಾಯಕ ಮತ್ತು ಇದೀಗ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಕೊಪ್ಪಳ ಜಿಲ್ಲೆಗೆ ಬಂದು ಹನುಮೇಶ್ ನಾಯಕನ ಬಂಧನಕ್ಕೆ ಮತ್ತು ಶಿವರಾಜ್ ತಂಗಡಗಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು. ಕೊನೆಗೆ ಸಿದ್ದರಾಮಯ್ಯ ಸರ್ಕಾರ ಯಲ್ಲಾಲಿಂಗ ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ಒಪ್ಪಿಸಿತ್ತು. ಶಿವರಾಜ ತಂಗಡಗಿ ರಾಜೀನಾಮೆ ಕೊಡಬೇಕಾಯ್ತು. ಹನುಮೇಶ್ ನಾಯಕ ಸೇರಿ 9 ಜನ ಈ ಪ್ರಕರಣದಲ್ಲಿ ಜೈಲು ಸೇರಿದ್ದರು. ಆದರೆ ಅನಾರೋಗ್ಯದ ನೆಪದಲ್ಲಿ ಹನುಮೇಶ ನಾಯಕ ಜೈಲಿಗಿಂತ ಹೆಚ್ಚಾಗಿ ಆಸ್ಪತ್ರೆಯಲ್ಲಿಯೇ ಕಾಲ ಕಳೆದ.
ಆಸ್ಪತ್ರೆ ವಾಸ ಬಯಲಿಗೆಳದಿದ್ದ ಟಿವಿ9
ಎರಡು ವರ್ಷಗಳ ಹಿಂದೆ ರಹಸ್ಯ ಕಾರ್ಯಾಚರಣೆ ಮೂಲಕ ಟಿವಿ9 ಹನುಮೇಶ್ ನಾಯಕನ ಆಸ್ಪತ್ರೆ ವಾಸವನ್ನು ತೋರಿಸಿತ್ತು. ಸಕ್ಕರೆ ಕಾಯಿಲೆ ನೆಪ ಹೇಳಿ ಆಸ್ಪತ್ರೆ ಸೇರಿದ್ದ ಹನುಮೇಶ್ ನಾಯಕ ಅಲ್ಲಿಂದಲೇ ಹಲವರ ಜೊತೆಗೆ ನಿಯಮಿತ ಸಂಪರ್ಕದಲ್ಲಿದ್ದ. ಈ ವೇಳೆ ಸಾಕ್ಷಿಗಳನ್ನು ಡೀಲ್ ಮಾಡ್ತಿದ್ದ ಎಂಬ ಆರೋಪಗಳು ಕೇಳಿಬಂದಿದ್ದವು. ಅದಾದ ಬಳಿಕ ಹನುಮೇಶ್ ನಾಯಕನನ್ನು ಕಲಬುರಗಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಅಷ್ಟೊತ್ತಿಗಾಗಲೇ ಅನೇಕ ಸಾಕ್ಷಿಗಳನ್ನು ಡೀಲ್ ಮಾಡಿದ್ದ ಹನುಮೇಶ್ ನಾಯಕ ಹಾಗೂ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಮಹಾಂತೇಶ್ ನಾಯಕ ಮದುವೆಯಲ್ಲಿ ಪೊಲೀಸರು
ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಮಹಾಂತೇಶ್ ನಾಯಕ ಆರೋಪಿ ನಂಬರ್ 3. ಕೊಪ್ಪಳ ಜಿಲ್ಲೆಯ ಹುಲಿಹೈದರ್ ಗ್ರಾಮದಲ್ಲಿ ಆತನ ಮದುವೆಯಾಯ್ತು. ಮದುವೆಯಲ್ಲಿ ಗಂಗಾವತಿ ಸಿಪಿಐ ಉದಯರವಿ, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಕನಕಗಿರಿ ಪಿಎಸ್ಐ ತಾರಾಬಾಯಿ ಭಾಗಿಯಾಗಿದ್ದರು. ಆರೋಪಿಯ ಮದುವೆಯಲ್ಲಿ ಪೊಲೀಸರು ಭಾಗಿಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ವರದಿ: ಶಿವಕುಮಾರ್ ಪತ್ತಾರ್
(Police officers in Yallalinga Murder case accused marriage)
ಇದನ್ನೂ ಓದಿ: ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಕೇಸ್; ಶಿವರಾಜ್ ತಂಗಡಗಿಗೆ ಬೀಳುತ್ತಾ ಸಿಬಿಐ ಕುಣಿಕೆ..?