ಚಿಕ್ಕಬಳ್ಳಾಪುರ: ಆತ್ಮರಕ್ಷಣೆಗೆ ಬಂದೂಕು ಬೇಕು ಎಂದರೆ ತರಬೇತಿ ಪಡೆದು ಆಯಾ ಜಿಲ್ಲಾಡಳಿತದಿಂದ ನಿಯಮಬದ್ಧವಾಗಿ ಅನುಮತಿ ಪಡೆಯಬೇಕು. ಆದರೆ ಚಿಕ್ಕಬಳ್ಳಾಪುರ ತಾಲೂಕಿನ ಗುಂಗ್ಲೀರ್ಲದಹಳ್ಳಿ ಗ್ರಾಮದಲ್ಲೊಬ್ಬ ಬಂದೂಕುಗಳನ್ನು ಕಾಳ ಸಂತೆಯಲ್ಲಿ ಮನಸ್ಸೋ ಇಚ್ಛೆ, ಕುಲುಮೆಯಲ್ಲಿ ಕೊಡಲಿ ತಯಾರಿಸುವ ಹಾಗೆ ತಯಾರಿಸಿ, ಐದು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾನೆ. ವಿಷಯ ತಿಳಿದ ಪೊಲೀಸರು ದಾಳಿ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಮಾರುದ್ದದ ನಾಡಬಂದೂಕು ಮಾಡುವುದಕ್ಕೆ ಬೇಕಾಗಿರುವ ಸಲಕರಣೆಗಳು ಹಾಗೂ ಬಂದೂಕಿಗೆ ತುಂಬುವ ಗನ್ ಪೌಡರ್ ಚಿಕ್ಕಬಳ್ಳಾಪುರ ತಾಲೂಕಿನ ಗುಂಗ್ಲೀರ್ಲಕಹಳ್ಳಿ ಗ್ರಾಮ ಹೊರವಲಯದ ಗಂಗಾಧರ್ ಎಂಬುವವರ ಮನೆಯಲ್ಲಿ ಸಿಕ್ಕಿದೆ. ಗಂಗಾಧರ್ ಎಂಬಾತ ನಾಡಬಂದೂಕು ಮಾಡುವುದರಲ್ಲಿ ಎಕ್ಸ್ ಪರ್ಟ್ ಆಗಿದ್ದು, ನಾಡಬಂದೂಕು ತಯಾರಿ ಮಾಡುವುದಕ್ಕೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನ ಸಂಗ್ರಹಿಸಿ ತನ್ನ ಮನೆಯ ಮುಂದಿನ ಕುಲುಮೆಯಲ್ಲೇ ನಾಡಬಂದೂಕು ರೆಡಿ ಮಾಡುತ್ತಾನೆ.
ಈತ ಹೀಗೆ ಹಲವಾರು ದಿನಗಳಿಂದ ಕದ್ದು ಮುಚ್ಚಿ ನಾಡಬಂದೂಕುಗಳನ್ನ ತಯಾರಿ ಮಾಡಿ ಐದು ಸಾವಿರ ರೂಪಾಯಿಂದ ಹತ್ತು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದನಂತೆ. ಆದರೆ ಇದೀಗ ಖಚಿತ ಮಾಹಿತಿ ಮೆರೆಗೆ ನಂದಿಗಿರಿಧಾಮ ಪೊಲೀಸರು ದಾಳಿ ನಡೆಸಿ ಆರೋಪಿ ಗಂಗಾಧರನನ್ನು ಬಂಧಿಸಿದ್ದಾರೆ. ಅಲ್ಲದೇ ಗಂಗಾಧರ್ ಬಳಿ ಇದ್ದ 3 ನಾಡಬಂದೂಕುಗಳು ಹಾಗೂ ನಾಡಬಂದೂಕು ತಯಾರಿ ಮಾಡಲು ಇಟ್ಟುಕೊಂಡಿದ್ದ ಸಲಕರಣೆಗಳನ್ನ ವಶಕ್ಕೆ ಪಡೆದಿದ್ದಾರೆ.
ಗಂಗಾಧರ್ ನಾಡಬಂದೂಕು ತಯಾರಿ ಮಾಡಿ ಸುತ್ತಮುತ್ತಲ ಹಲವರಿಗೆ ಮಾರಾಟ ಮಾಡಿದ್ದು, ಗಂಗಾಧರ್ ಬಳಿ ನಾಡಬಂದೂಕನ್ನು ಖರೀದಿಸಿದ್ದ ಇಬ್ಬರು ಪೊಲೀಸರ ದಾಳಿ ವೇಳೆ ನಾಡಬಂದೂಕು ರಿಪೇರಿಗೆ ಅಂತ ಬಂದು ಸಿಕ್ಕಿಹಾಕಿಕೊಂಡಿದ್ದಾರೆ. ಆ ಇಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ಅವರ ಬಳಿ ಇದ್ದ ನಾಡಬಂದೂಕು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಾಡು ಪ್ರಾಣಿಗಳ ಬೇಟೆಯಾಡುವುದಕ್ಕೆ ಈ ಅಕ್ರಮ ನಾಡಬಂದೂಕುಗಳ ತಯಾರಿ ಮಾಡಿಕೊಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಇದುವರೆಗೆ ಎಷ್ಟು ಬಂದೂಕುಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾನೆ ಎನ್ನುವ ಬಗ್ಗೆ ನಂದಿಗಿರಿಧಾಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ
ಗನ್ ಮಾಫಿಯಾದಲ್ಲಿ ಸದ್ದು ಮಾಡುತ್ತಿದೆ ಬೆಂಗಳೂರು: ಸಿಟಿ ಪೊಲೀಸರ ರಹಸ್ಯ ಕಾರ್ಯಾಚರಣೆ ವೇಳೆ ಹೊರಬಂತು ಸ್ಪೋಟಕ ಮಾಹಿತಿ
ಅಕ್ರಮವಾಗಿ ನಾಡಬಂದೂಕು ತಯಾರಿ: 3 ಆರೋಪಿಗಳನ್ನು ಬಂಧಿಸಿದ ನಂದಿ ಗಿರಿಧಾಮ ಠಾಣೆ ಪೊಲೀಸರು