ರಾಯಚೂರು ಜಿಲ್ಲೆ ಸಿರವಾರದ ಸಮೀಪ ಕೂಲಿ ಕೆಲಸಕ್ಕೆ ತೆರಳ್ತಿದ್ದ ಮಕ್ಕಳನ್ನ ಪೊಲೀಸರು ರಕ್ಷಿಸಿದ್ದಾರೆ. ಶಾಲಾ ಮಕ್ಕಳನ್ನ ಅಕ್ರಮವಾಗಿ ಕೂಲಿ ಕೆಲಸಕ್ಕೆ ಕರೆದೊಯ್ಯುಲಾಗ್ತಿತ್ತು. ಪೊಲೀಸರು ದಾಳಿ ನಡೆಸಿ ಸರಕು ವಾಹನವನ್ನ ಜಪ್ತಿ ಮಾಡಿದ್ದಾರೆ. 11 ಅಪ್ರಾಪ್ತ ಮಕ್ಕಳನ್ನ ರಕ್ಷಿಸಿ ಮರಳಿ ಶಾಲೆಗೆ ಕಳುಹಿಸಿದ್ದಾರೆ.
ಯೋಧ ದುರ್ಮರಣ:
ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ಹೊಂಡಕ್ಕೆ ಬಿದ್ದು ಯೋಧನೊಬ್ಬ ಮೃತಪಟ್ಟಿದ್ದಾನೆ. ಮೃತ ಯೋಧ ಚಿದಾನಂದ್ ಬೈಕ್ನಲ್ಲಿ ತೆರಳ್ತಿದ್ದಾಗ ಆಳದ ಗುಂಡಿಗೆ ಬಿದ್ದು ಅಸುನೀಗಿದ್ದಾನೆ. ಕಾಶ್ಮೀರದ ಶ್ರೀನಗರದಲ್ಲಿ ಕಾರ್ಯನಿರ್ವಹಿಸ್ತಿದ್ದ ಚಿದಾನಂದ್, 2 ದಿನಗಳ ಹಿಂದೆ ಚಿಕ್ಕಪ್ಪನ ತಿಥಿ ಕಾರ್ಯಕ್ಕೆ ಬಂದಿದ್ದ.
ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ:
ಕೋಲಾರ ತಾಲೂಕಿನ ಕಾಳಹಸ್ತಿಪುರದಲ್ಲಿ ಕೆರೆಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಮೃತ ವ್ಯಕ್ತಿ ಪ್ರಭಾಕರ್ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದ. ಹೀಗಾಗಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರು ಕದ್ದ ಖದೀಮರು:
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿ ದೇಗುಲದ ಬಳಿ ನಿಲ್ಲಿಸಿದ್ದ ಕಾರೊಂದನ್ನ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ದೀಪಕ್ ಅನ್ನೋರ ಕಾರನ್ನ ಖದೀಮರು ಚಲಾಯಿಸಿಕೊಂಡು ತೆರಳ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹುಂಡಿ ದೋಚಿದ ಕಳ್ಳರು:
ಬೀದರ್ನ ಶಾಹಾಗಂಜ್ನಲ್ಲಿರೋ ಕ್ರಾಂತಿ ಗಣೇಶ ದೇಗುಲಕ್ಕೆ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ. ದೇವಲಾಯದ ಬಾಗಿಲು ಮುರಿದು ಒಳ ನುಗ್ಗಿರೋ ಕಳ್ಳರು, ಹುಂಡಿ ದೋಚಿದ್ದಾರೆ. ಕಳೆದ 1ತಿಂಗಳ ಅವಧಿಯಲ್ಲಿ ಕಳ್ಳರು ಎರಡನೇ ಬಾರಿಗೆ ಕನ್ನ ಹಾಕಿದ್ದು, ಕಳ್ಳರನ್ನ ಹೆಡೆಮುರಿ ಕಟ್ಟಬೇಕು ಅಂತಾ ಭಕ್ತರು ಪೊಲೀಸರನ್ನ ಆಗ್ರಹಿಸಿದ್ದಾರೆ.
ದಾಸೋಹ ಹಣಕ್ಕೆ ಕನ್ನ:
ರಾಮನಗರ ತಾಲೂಕಿನ ಅವ್ವೇರಹಳ್ಳಿಯಲ್ಲಿ ಖದೀಮರು ದಾಸೋಹ ಮಂದಿರದಲ್ಲಿದ್ದ ಹುಂಡಿಗೆ ಕನ್ನ ಹಾಕಿದ್ದಾರೆ. ಗ್ರಾಮದ ಶ್ರೀರೇವಣ ಸಿದ್ದೇಶ್ವರ ಬೆಟ್ಟದಲ್ಲಿನ ದಾಸೋಹ ಭವನದಲ್ಲಿ ಹುಂಡಿ ಇರಿಸಲಾಗಿತ್ತು. ಮೂರು ತಿಂಗಳಿಂದ ಹುಂಡಿಯಲ್ಲಿದ್ದ ಹಣ ತೆಗೆದಿರಲಿಲ್ಲ. ಕಳ್ಳರು ಕೈಚಳಕ ತೋರಿ ಹುಂಡಿ ಹಣ ಕಯ್ದೊಯ್ದಿದ್ದಾರೆ.
ಅಧಿಕಾರಿಗಳನ್ನ ಅಟ್ಟಾಡಿಸಿದ ಹಂದಿ:
ಉತ್ತರಕನ್ನಡ ಜಿಲ್ಲೆ ಭಟ್ಕಳದಲ್ಲಿ ಹಂದಿಯೊಂದು ಅಧಿಕಾರಿಗಳನ್ನ ಅಟ್ಟಾಡಿಸಿದೆ. ಘನತ್ಯಾಜ್ಯ ಘಟಕ ಸ್ಥಳ ಪರಿಶೀಲನೆಗೆ ಪುರಸಭೆ ಅಧಿಕಾರಿಗಳು ತೆರಳಿದ್ರು. ಈ ವೇಳೆ ಪೊಲೀಸರು, ಇತರೆ ಸಿಬ್ಬಂದಿ ಉಪಸ್ಥಿತರಿದ್ದು, ಕಸದ ರಾಶಿ ಹತ್ತಿರ ತೆರಳ್ತಿದ್ದಂತೆ ಹಂದಿ ದಾಳಿ ನಡೆಸಿದೆ. ಬಳಿಕ ಜನರನ್ನೂ ಅಟ್ಟಾಡಿಸಿದ್ದು, ದಿಕ್ಕಾಪಾಲಾಗಿ ಓಡಿದ್ದಾರೆ.
ರಾಷ್ಟ್ರೀಯ ಕಿಸಾನ್ ಸಂಘ ಧರಣಿ:
ರಾಷ್ಟ್ರೀಯ ಕಿಸಾನ್ ಸಂಘ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ವಶಕ್ಕೆ ಪಡೆದ ಭೂಸ್ವಾಧೀನದಲ್ಲಿ ರೈತರಿಗೆ ಅನ್ಯಾಯವಾಗಿದೆ. ಭೂಮಿ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿಲ್ಲ ಅಂತಾ ಸಂಘದ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಿಷೇಧಾಜ್ಞೆ ನಡುವೆಯೂ ಧರಣಿ ನಡೆಸಿದ್ದಾರೆ.
ಗಬ್ಬೂರು ಠಾಣೆ ಮೆಚ್ಚಿದ ಗೃಹ ಇಲಾಖೆ:
ರಾಯಚೂರು ಜಿಲ್ಲೆಯ ಗಬ್ಬೂರ ಪೊಲೀಸ್ ಠಾಣೆಯನ್ನ ಕೇಂದ್ರ ಗೃಹ ಇಲಾಖೆ ಅತ್ಯುತ್ತಮ ಠಾಣೆ ಅಂತಾ ಘೋಷಿಸಿದೆ. ಗೃಹ ಇಲಾಖೆಯ ಸಮೀಕ್ಷೆಯಲ್ಲಿ ದೇಶದ 15 ಸಾವಿರದ 175 ಠಾಣೆಗಳ ಪೈಕಿ ಗಬ್ಬೂರು ಠಾಣೆ ಸ್ಥಾನ ಪಡೆದಿದೆ. ದಕ್ಷತೆ, ಸ್ವಚ್ಛತೆ, ತನಿಖಾ ಗುಣಮಟ್ಟ ಸೇರಿ ಹಲವು ಮಾನದಂಡಗಳಲ್ಲಿ ಠಾಣೆ ಉತ್ತಮ ಹೆಸರು ಪಡೆದಿದೆ.