ಬೆಂಗಳೂರು, (ಜೂನ್ 18): ನಾನು ಈಗಾಗಲೇ ಎರಡು ಕೇಸ್‌ಗಳಲ್ಲಿ ಪುರುಷತ್ವ ಪರೀಕ್ಷೆ (Medical Test) ಒಪ್ಪಿ ಮಾಡಿಸಿಕೊಂಡಿದ್ದೇನೆ. ಮತ್ತೆ ಮತ್ತೆ ಅದೇ ಪರೀಕ್ಷೆ ಮಾಡಿಸಿಕೊಳ್ಳಲು ಮುಜುಗರವಾಗುತ್ತದೆ. ನನಗೆ ಮುಜುಗರ ಹುಟ್ಟಿಸಲೆಂದೇ ಇದನ್ನು ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ನ್ಯಾಯಾಧೀಶರ ಮುಂದೆ ಅಲವತ್ತುಕೊಂಡ ಘಟನೆ ನಡೆದಿದೆ. ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು (ಜೂನ್ 18) ಮತ್ತೆ ಪ್ರಜ್ವಲ್ ರೇವಣ್ಣ ಅವರನ್ನು 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಜಡ್ಜ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಾನು ಎರಡು ಕೇಸ್‌ನಲ್ಲಿ ಮೆಡಿಕಲ್ ಟೆಸ್ಟ್ ಒಪ್ಪಿ ಮಾಡಿಸಿಕೊಂಡಿದ್ದೇನೆ. ಮತ್ತೆ ಅದೇ ಟೆಸ್ಟ್ ಮಾಡಿಸಲು ಕೇಳ್ತಾರೆ. ಪದೇ ಪದೆ ಖಾಸಗಿ ಅಂಗ ತೋರಿಸಲು ತುಂಬಾ ಮುಜುಗರ ಆಗುತ್ತಿದೆ. ಈಗಾಗಲೇ ಎರಡು ಕೇಸ್‌ಗಳಲ್ಲಿ ಸೇಮ್ ಪರೀಕ್ಷೆ ಆಗಿದೆ. ಈ ಮುಜುಗರದಿಂದ ಪಾರು ಮಾಡಿ ಎಂದು ಪ್ರಜ್ವಲ್ ನ್ಯಾಯಾಧೀಶರ ಮುಂದೆ ವಿನಂತಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾತ್ರ ಮಾಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ
ಪ್ರಜ್ವಲ್ ರೇವಣ್ಣ ಅವರ ಮೇಲೆ ಮೂರು ಪ್ರಕರಣಗಳಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, ಪುರುಷತ್ವ ಪರೀಕ್ಷೆ ಮಾಡಲಾಗಿದೆ. ಮೂರನೆ ಬಾರಿಗೆ ಎಸ್‌ಐಟಿ ಪ್ರಜ್ವಲ್ ಅವರನ್ನು ಕಸ್ಟಡಿಗೆ ಪಡೆದುಕೊಂಡಿದೆ. ಮತ್ತೆ ಮೆಡಿಕಲ್ ಪರೀಕ್ಷೆಗೆ ಮುಂದಾಗಿದ್ದು, ಈ ಸಂದರ್ಭದಲ್ಲಿ ಪ್ರಜ್ವಲ್ ಆಕ್ಷೇಪಿಸಿದರು.
ಹಿಂದಿನ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್ ಶಿವಕುಮಾರ್ ಆದೇಶ ನೀಡಿದ್ದಾರೆ. ಈ ನಡುವೆ, ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಇದೇ ಸಂದರ್ಭದಲ್ಲಿ, ಎಸ್‌ಐಟಿ (SIT) ಅಧಿಕಾರಿಗಳು ತನ್ನ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸಿದ್ದಾರೆ ಎಂದು ಪ್ರಜ್ವಲ್ ದೂರಿದ್ದು ಕೂಡ ವರದಿಯಾಗಿದೆ. ಪ್ರಜ್ವಲ್ ರೇವಣ್ಣ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಎಸ್‌ಐಟಿ ಕೋರ್ಟ್‌ಗೆ ಹಾಜರು ಪಡಿಸಿದಾಗ, ಏನಾದ್ರೂ ಆರೋಗ್ಯ ಸಮಸ್ಯೆ ಇದೆಯಾ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಹೌದು ಸರ್ ಎಂದು ಪ್ರಜ್ವಲ್ ಹೇಳಿದ್ದಾರೆ.
ಎಸ್ಐಟಿ ಅಧಿಕಾರಿಗಳು ಸರಿಯಾಗಿ ನೋಡ್ಕೋತಿಲ್ಲ. ಎಂಆರ್‌ಐ ಸ್ಕ್ಯಾನ್ ಮಾಡಿಸಿದ್ದೇನೆ. ಟ್ಯಾಬ್ಲೆಟ್ ತೆಗೆದುಕೊಳ್ತಿದ್ದೇನೆ ಎಂದು ಹೇಳಿದಾಗ. ಆರೋಗ್ಯ ತಪಾಸಣೆ ಯಾಕೆ ಮಾಡಿಸಿಲ್ಲ? ಎಂದು ಅಧಿಕಾರಿಗಳನ್ನು ಜಡ್ಜ್ ಪ್ರಶ್ನಿಸಿದರು. ಅವರು ಈಗ ಹೇಳ್ತಾ ಇದ್ದಾರೆ, ನಮಗೆ ಹೇಳಿಲ್ಲ ಎಂದು ಎಸ್ಐಟಿ ಅಧಿಕಾರಿಗಳು ಉತ್ತರಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ