ವಿಡಿಯೋ ಕೇಸ್‌: ಪ್ರಜ್ವಲ್ ರೇವಣ್ಣ ತಪ್ಪು ಸಾಬೀತಾದ್ರೆ ಏನು ಶಿಕ್ಷೆ? ಕಾನೂನಿನಲ್ಲಿರುವ ಅವಕಾಶಗಳೇನು?

| Updated By: ರಮೇಶ್ ಬಿ. ಜವಳಗೇರಾ

Updated on: Apr 29, 2024 | 6:03 PM

Prajwal Revanna Video Case: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಪ್ರಕರಣವೀಗ ಎಸ್‌ಐಟಿಗೆ ವರ್ಗಾವಣೆಯಾಗಿದ್ದು, ತನಿಖೆ ಸಹ ಆರಂಭವಾಗಿದೆ. ಒಂದು ವೇಳೆ ಪ್ರಜ್ವಲ್ ರೇವಣ್ಣ ಮೇಲಿನ ಆರೋಪ ಸಾಬೀತಾದರೆ ಏನು ಶಿಕ್ಷೆ? ಇನ್ನೂ ಪ್ರಜ್ವಲ್ ರೇವಣ್ಣ ಮುಂದಿರುವ ಕಾನೂನು ಹಾದಿಗಳೇನು? ಎನ್ನುವ ವಿವರ ಇಲ್ಲಿದೆ.

ವಿಡಿಯೋ ಕೇಸ್‌: ಪ್ರಜ್ವಲ್ ರೇವಣ್ಣ ತಪ್ಪು ಸಾಬೀತಾದ್ರೆ ಏನು ಶಿಕ್ಷೆ? ಕಾನೂನಿನಲ್ಲಿರುವ ಅವಕಾಶಗಳೇನು?
ಪ್ರಜ್ವಲ್ ರೇವಣ್ಣ
Follow us on

ಬೆಂಗಳೂರು/ಹಾಸನ, (ಏಪ್ರಿಲ್ 29): ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ದೃಶ್ಯಾವಳಿಗಳು ಬಹಿರಂಗವಾದ ಬೆನ್ನಲ್ಲೇ ಮುಂದೇನು ಎನ್ನುವ ಪ್ರಶ್ನೆ ಎದುರಾಗಿದೆ. ಸರ್ಕಾರ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ಎಸ್‌ಐಟಿ (SIT) ರಚಿಸಿದೆ. ಈ ನಡುವೆ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ.ರೇವಣ್ಣ(HD Revanna) ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದೆ. ದೂರು ನೀಡಿರುವ ಮಹಿಳೆ ಈ ಹಿಂದೆ ಹೆಚ್.ಡಿ.ರೇವಣ್ಣರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಆಗ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ.ರೇವಣ್ಣ ತಮ್ಮ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರೆಂದು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 354 ಎ, 354 ಡಿ, 506, 509 ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವೀಗ ಎಸ್‌ಐಟಿಗೆ ವರ್ಗಾವಣೆಯಾಗಿದ್ದು, ತನಿಖೆ ಆರಂಭವಾಗಿದೆ.

ಕಾನೂನಿನಲ್ಲಿರುವ ಅವಕಾಶಗಳೇನು?

ಇನ್ನು ಪ್ರಜ್ವಲ್ ರೇವಣ್ಣ ರಿಗೆ ಸಂಬಂಧಿಸಿದ ವಿಡಿಯೋಗಳನ್ನು ಪೆನ್ ಡ್ರೈವ್ ನಲ್ಲಿಟ್ಟು ಚುನಾವಣೆಗೆ ಮುನ್ನ ಹಾಸನದಲ್ಲಿ ಹಂಚಲಾಗಿದೆ. ಈ ಪೆನ್ ಡ್ರೈವ್ ಗಳಲ್ಲಿ ಪ್ರಜ್ವಲ್ ರೇವಣ್ಣರ ಅಶ್ಲೀಲ ದೃಶ್ಯಗಳಿದ್ದು, ಅದರಲ್ಲಿ ಮಹಿಳೆಯರ ಅಶ್ಲೀಲ ದೃಶ್ಯಾವಳಿಗಳೂ ಇವೆ. ಈ ದೃಶ್ಯಾವಳಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಈ ದೃಶ್ಯಾವಳಿಯಲ್ಲಿರುವ ಮಹಿಳೆಯರು ಈವರೆಗೂ ಯಾವುದೇ ದೂರು ನೀಡಿಲ್ಲ. ಈಗ ದೂರು ನೀಡಿರುವ ಮಹಿಳೆಗೂ ಪೆನ್ ಡ್ರೈವ್ ನಲ್ಲಿರುವ ದೃಶ್ಯಗಳಿಗೂ ಸಂಬಂಧವಿಲ್ಲ. ಅಲ್ಲದೇ ಪ್ರಕರಣದಲ್ಲಿ ದಾಖಲಾದ ಸೆಕ್ಷನ್ ಗಳೆಲ್ಲವೂ ಜಾಮೀನು ಕೊಡಬಹುದಾದ ಸೆಕ್ಷನ್ ಗಳಾಗಿವೆ. ಹೀಗಾಗಿ ಹೆಚ್.ಡಿ.ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆದು ತನಿಖೆ ನಡೆಸಬಹುದು. ತನಿಖೆ ವೇಳೆ ಬಂಧಿಸಿದರೂ ಜಾಮೀನು ನೀಡಬಹುದಾದ ಅಪರಾಧವಾಗಿರುವುದರಿಂದ ಶೀಘ್ರ ಜಾಮೀನು ಸಿಗುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ

ಒಂದು ವೇಳೆ ದೃಶ್ಯಾವಳಿಯಲ್ಲಿರುವ ಮಹಿಳೆಯರಲ್ಲಿ ಯಾರಾದರೂ ಇದೊಂದು ಲೈಂಗಿಕ ಹಲ್ಲೆ ಅಥವಾ ಅತ್ಯಾಚಾರವೆಂದು ದೂರು ನೀಡಿದರೆ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಆಗ ಬಂಧನದ ಸಾಧ್ಯತೆಯೂ ಹೆಚ್ಚಲಿದೆ. ಈ ಮಧ್ಯೆ ಮಹಿಳೆಯರ ಅಶ್ಲೀಲ ದೃಶ್ಯ ಚಿತ್ರೀಕರಿಸುವುದಾಗಲೀ, ಹಂಚುವುದಾಗಲೀ ಮಾಡುವುದೂ ಕೂಡಾ ಕಾನೂನಿನಲ್ಲಿ ಅಪರಾಧವಾಗಲಿದೆ. ಏಕೆಂದರೆ ಮಹಿಳೆಯರ ದೃಶ್ಯಗಳನ್ನು ಮಸುಕು ಮಾಡದೇ ಅವರ ಗುರುತು ಪತ್ತೆಯಾಗುವ ರೀತಿಯ ದೃಶ್ಯಾವಳಿಗಳನ್ನು ಹಂಚಿಕೆ ಮಾಡಲಾಗಿದೆ. ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ ವ್ಯಾಪ್ತಿಯಲ್ಲಿ ಅಪರಾಧವಾಗಿದ್ದು, ಈ ಅಪರಾಧ ಮಾಡಿದವರನ್ನು ಬಂಧಿಸುವ ಸಾಧ್ಯತೆಯೂ ಇರಲಿದೆ. ಹೀಗಾಗಿ ಎಸ್‌ಐಟಿ ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸಲಿದ್ದಾರೆ. ತನಿಖೆ ಆರಂಭಿಸುವ ಮುನ್ನ ಈ ದೃಶ್ಯಾವಳಿಗಳ ಮೂಲವೇನು, ಇವುಗಳ ಸತ್ಯಾಸತ್ಯತೆ ಬಗ್ಗೆಯೂ ಪೊಲೀಸರು ವಿಧಿವಿಜ್ಞಾನ ತಜ್ಞರಿಂದ ವರದಿ ಪಡೆಯಬೇಕಾಗಲಿದೆ. ನಂತರ ಸಂತ್ರಸ್ತರೆಂದು ಕಂಡು ಬಂದವರ ಹೇಳಿಕೆ ಪಡೆಯಲೂ ಅವಕಾಶವಿದೆ. ಇನ್ನು ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದರಿಂದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸುವುದು ತಡವಾದರೂ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಆರೋಪ ಸಾಬೀತಾದರೆ ಶಿಕ್ಷೆ ಏನು?

  • ಸೆಕ್ಷನ್ 354 ಎ ಲೈಂಗಿಕ ವಾಂಛೆಗಳನ್ನು ವ್ಯಕ್ತಪಡಿಸಿ ದೇಹವನ್ನು ಸ್ಪರ್ಶಿಸುವುದು ಅಪರಾಧವಾಗಿದ್ದು, ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.
  • ಸೆಕ್ಷನ್ 354 ಡಿ ಮಹಿಳೆಯ ಒಪ್ಪಿಗೆಯ ವಿರುದ್ಧವಾಗಿ ಆಕೆಯನ್ನು ಸಂಧಿಸುವ ಉದ್ದೇಶದಿಂದ ಹಿಂಬಾಲಿಸುವುದು ಅಪರಾಧವಾಗಿದ್ದು, ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.
  • ಸೆಕ್ಷನ್ 506 ಜೀವ ಬೆದರಿಕೆ, ಆರೋಪ ಸಾಬೀತಾದರೆ 2 ವರ್ಷಗಳವರೆಗೆ ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ.
  • ಸೆಕ್ಷನ್ 509 ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಆಕೆಯ ಖಾಸಗಿತನವನ್ನು ಉಲ್ಲಂಘಿಸುವುದು ಅಪರಾಧವಾಗಿದ್ದು, ಆರೋಪ ಸಾಬೀತಾದರೆ 3 ವರ್ಷಗಳವರೆಗೆ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​ಗೆ ಬಿಗ್ ಟ್ವಿಸ್ಟ್, ಸಂತ್ರಸ್ತೆಯ ಗಂಡನ ತಾಯಿ ಸ್ಫೋಟಕ ಹೇಳಿಕೆ

ಒಂದು ವೇಳೆ ಹಾಸನದಲ್ಲಿ ಪ್ರಜ್ವಲ್ ಗೆದ್ರೆ ಸದಸ್ಯತ್ವ ಏನಾಗುತ್ತೆ?

ಪೊಲೀಸರು ಪ್ರಜ್ವಲ್ ರೇವಣ್ಣ ಕರೆತರಲು ಕ್ರಮ ಕೈಗೊಳ್ಳಲು ಅವಕಾಶವಿದೆ. ಇನ್ನು ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಅಥವಾ ಉಚ್ಚಾಟನೆ ಮಾಡಿದರೂ ಅದು ಹಾಸನ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಜಯಗಳಿಸಿದರೆ, ಪಕ್ಷದಿಂದ ಉಚ್ಚಾಟನೆಯಾದರೂ ಲೋಕಸಭಾ ಸದಸ್ಯತ್ವ ಉಳಿಯಲಿದೆ. ಲೋಕಸಭಾ ಚುನಾವಣೆಯಲ್ಲಿ ಸೋತರೆ ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯ ಮಂಕಾಗಲಿದೆ. ಸದ್ಯದ ಮಟ್ಟಿಗೆ ಪ್ರಜ್ವಲ್ ರೇವಣ್ಣ ಮೇಲೆ ಒಂದು ಎಫ್‌ಐಆರ್ ದಾಖಲಾಗಿದ್ದು, ದೃಶ್ಯಾವಳಿಯಲ್ಲಿರುವ ಯಾವುದೇ ಮಹಿಳೆ ಲೈಂಗಿಕ ಹಲ್ಲೆ, ಅಥವಾ ಅತ್ಯಾಚಾರದ ದೂರು ನೀಡಿದರೆ ಆಗ ಪ್ರಜ್ವಲ್ ರೇವಣ್ಣಗೆ ಬಂಧನದ ಭೀತಿ ಕಾಡಲಿದೆ.

ಸದ್ಯಕ್ಕೆ ದಾಖಲಾಗಿರುವ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಲು ಹೆಚ್.ಡಿ.ರೇವಣ್ಣ ಈಗಾಗಲೇ ವಕೀಲರೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಒಂದು ವೇಳೆ ಅತ್ಯಾಚಾರ ಪ್ರಕರಣ ದಾಖಲಾದರೆ ನಿರೀಕ್ಷಣಾ ಜಾಮೀನಿಗಾಗಿ ಕಾನೂನು ಹೋರಾಟ ನಡೆಸಲೂ ಸಿದ್ಧತೆ ನಡೆಸಿದ್ದಾರೆನ್ನಲಾಗಿದೆ. ಹೀಗಾಗಿ ಎಸ್‌ಐಟಿ ತನಿಖೆ, ಸಂತ್ರಸ್ತರು ನೀಡುವ ಹೇಳಿಕೆ, ವಿಧಿವಿಜ್ಞಾನ ಪ್ರಯೋಗಾಲಯ ನೀಡುವ ವರದಿ ಇವು ಪ್ರಜ್ವಲ್ ರೇವಣ್ಣ ಬಂಧನದ ಭವಿಷ್ಯ ನಿರ್ಧರಿಸಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ