ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ನೀಡಲಿದ್ದೇನೆ: ಸಚಿವ ಅಶ್ವತ್ಥನಾರಾಯಣ

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪ್ರವೀಣ್ ಕುಟುಂಬಸ್ಥರಿಗೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಘೋಷಣೆ ಮಾಡಿದ್ದಾರೆ.

ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ನೀಡಲಿದ್ದೇನೆ: ಸಚಿವ ಅಶ್ವತ್ಥನಾರಾಯಣ
ಡಾ.ಸಿ.ಎನ್.ಅಶ್ವತ್ಥನಾರಾಯಣ
Edited By:

Updated on: Jul 28, 2022 | 2:21 PM

ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ​ ಹತ್ಯೆ ಪ್ರಕರಣ ಸಂಬಂಧ ಪ್ರವೀಣ್ ಕುಟುಂಬಸ್ಥರಿಗೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr. C.N.Ashwath Narayan) ಅವರು ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಸಚಿವ ಅಶ್ವತ್ಥನಾರಾಯಣ, ದುಷ್ಕೃತ್ಯಕ್ಕೆ ಬಲಿಯಾದ ನಮ್ಮ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರ ಕುಟುಂಬಕ್ಕೆ ಸ್ಥೈರ್ಯ ತುಂಬುವ ಜೊತೆಗೆ ಕುಕೃತ್ಯ ನಡೆಸಿದ ದುರುಳರಿಗೆ ತಕ್ಕ ಪಾಠ ಕಲಿಸಿ ಮೃತರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದಿದ್ದಾರೆ.

ಕಳೆದುಕೊಂಡ ಜೀವಕ್ಕೆ ಬೆಲೆಕಟ್ಟಲಾಗದು. ಪ್ರಕರಣದ ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಎನ್‌ಐಎಗೆ ನೀಡುವ ಭರವಸೆಯನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ. ಕಾನೂನಿನ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಈ ದುಷ್ಕೃತ್ಯವೆಸಗಿದವರ ಧಮನ ಮಾಡುವುದರಲ್ಲಿ ಯಾವುದೇ ಅನುಮಾನಬೇಡ ಎಂದರು. 

ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಾಣದ ಜವಾಬ್ದಾರಿ ವಹಿಸಿದ ಕಟೀಲ್​

ಪ್ರವೀಣ್ ಹತ್ಯೆಯಾದಾಗ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಹೇಳಿದೆ. ಮೃತರ ಕುಟುಂಬಕ್ಕೆ ಪಕ್ಷದಿಂದ 25 ಲಕ್ಷ ರೂಪಾಯಿ ಪರಿಹಾರ ನೀಡುವ ನಿರ್ಧಾರವನ್ನು ಮಾಡಲಾಗಿದೆ. ಮನೆ ಕಟ್ಟಿಕೊಡುವ ಜವಾಬ್ದಾರಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಹಿಸಿಕೊಂಡಿದ್ದಾರೆ ಎಂದ ಸಚಿವರು, ಪ್ರವೀಣ್ ಮನೆಗೆ ನಾಯಕರ ಭೇಟಿಗೂ ನಿರ್ಧಾರ ಮಾಡಿದ್ದೇವೆ ಎಂದರು.

ಎನ್​ಐಎ ತನಿಖೆಗೆ ಆಗ್ರಹ

ಬೇರೆ ರಾಜ್ಯಗಳ ದುಷ್ಟ ಶಕ್ತಿಗಳ ಪಾತ್ರ ಏನಾದರೂ ಇದೆಯಾ ಎಂಬುದರ ಬಗ್ಗೆ ಪರಿಶೀಲಿಸಿ ಪ್ರಕರಣವನ್ನು ಎನ್​ಐಎಗೆ ಕೊಡುವಂತೆ ಆಗ್ರಹಿಸಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ಗಲಾಟೆಗಳು ಎಬ್ಬಿಸುವುದರಲ್ಲಿ ನೇರವಾಗಿ ಜಿಹಾದಿ ಮನಸ್ಥಿತಿ ಇರುವ ಶಕ್ತಿಗಳ ಕೈವಾಡ ಇದೆ. ಇಂತಹ ಶಕ್ತಿಗಳನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ದಮನ ಮಾಡಲಿದೆ. ಇದರಲ್ಲಿ ಯಾರು ಪಾತ್ರ ಇದೆ ಎಂಬುದರ ಬಗ್ಗೆ ಆರೋಪಿಗಳು ಸಿಕ್ಕಿದ ನಂತರ ಗೊತ್ತಾಗಲಿದೆ ಎಂದರು.

Published On - 2:18 pm, Thu, 28 July 22