ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆಗೂ ಮುನ್ನವೇ ಪಿಯುಸಿಗೆ ಪ್ರವೇಶಾತಿ ನೀಡುತ್ತಿರುವ ಬಗ್ಗೆ ಪೋಷಕರಿಂದ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿ ಪೂರ್ವ ಕಾಲೇಜಿಗೆ ದಾಖಲಾತಿ ಆರಂಭಿಸಲಾಗಿದೆ. ಲಾಕ್‌ಡೌನ್ ಹಿನ್ನೆಲೆ ಆನ್‌ಲೈನ್ ಮೂಲಕವೇ ಪ್ರವೇಶಾತಿ ಮಾಡಲಾಗುತ್ತಿದೆ. ಪರೀಕ್ಷೆಗೂ ಮುನ್ನವೇ ದಾಖಲಾತಿಗೆ ಪೋಷಕರಿಂದ ವಿರೋಧ ವ್ಯಕ್ತವಾಗಿದೆ.
ಕೆಲ ಪಾಲಕರು ಮಕ್ಕಳ ಭವಿಷ್ಯ ನೆನದು ಅರ್ಧ ಶುಲ್ಕ ಪಾವತಿಸಿ ಸೀಟ್ ಬ್ಲಾಕ್ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಲಾಕ್ಡೌನ್ನಿಂದ ಕಾಲೇಜುಗಳು ಬಂದ್ ಆಗಿವೆ. ಹೀಗಾಗಿ ಕೆಲ ಕಾಲೇಜುಗಳು ಆನ್‌ಲೈನ್ ವಿಧಾನದಲ್ಲಿ ಪ್ರವೇಶ ಪರೀಕ್ಷೆ ನಡೆಸುತ್ತಿವೆ.
ಇನ್ನೂ ಸಿಬಿಎಸ್ಇ ಅಥವಾ ರಾಜ್ಯ ಸರ್ಕಾರದಿಂದ ಎಸ್ಎಸ್ಎಲ್‌ಸಿ ಪರೀಕ್ಷೆ ಬಗ್ಗೆ ನಿಗಧಿಯಾಗಿಲ್ಲ. 2021-22 ನೇ ಸಾಲಿನ ಪಿಯು ಪ್ರವೇಶ ಪ್ರಕ್ರಿಯೆ ಮಾರ್ಗಸೂಚಿ ಹೊರಡಿಸಿಲ್ಲ. ಆಗಲೇ ಕೆಲ ಖಾಸಗಿ ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಇಂಥ ಕಾಲೇಜುಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
2021-22ನೇ ಶೈಕ್ಷಣಿಕ ವರ್ಷದಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪೂರ್ಣ ಪ್ರಮಾಣದ ಶುಲ್ಕ ತುಂಬುವಂತೆ ಒತ್ತಡ ಹೇರುತ್ತಿವೆ ಎಂಬ ವರದಿ ಬೆನ್ನಲ್ಲೇ ಮತ್ತೊಂದು ರೀತಿಯ ವಿಚಾರ ಕೂಡ ಬಹಿರಂಗವಾಗಿದೆ. ಕೆಲವು ಶಾಲಾ-ಕಾಲೇಜುಗಳು ವಾರ್ಷಿಕ ಶುಲ್ಕದಲ್ಲಿ ಡಿಸ್ಕೌಂಟ್ ನೀಡಿ ಫೀಸ್ ತುಂಬಿಸಿಕೊಳ್ಳುತ್ತಿವೆ. ಸುಮಾರು ಶೇ. 10ರಿಂದ ಶೇ. 30 ರಷ್ಟು ಶಾಲಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಕಳೆದ ಬಾರಿಯ ಟ್ಯೂಷನ್ ಫೀಸ್ನ ಆಧಾರದ ಮೇಲೆ ಈ ಬಾರಿ ಡಿಸ್ಕೌಂಟ್ ನೀಡುತ್ತಿದ್ದಾರೆ.
ಕರ್ನಾಟಕ ಪ್ರಾಥಮಿಕ ಹಾಗೂ ಸೆಕೆಂಡರಿ ಶಾಲೆ ಒಕ್ಕೂಟದ ಸಹ ಕಾರ್ಯದರ್ಶಿ ಡಿ.ಡಿ. ಶಶಿಕುಮಾರ್, ಶೇ. 10ರಿಂದ ಶೇ. 20ರಷ್ಟು ರಿಯಾಯಿತಿ ನೀಡುವಂತೆ ನಾವು ಸೂಚಿಸುತ್ತೇವೆ ಎಂದು ತಿಳಿಸಿದ್ದಾರೆ. ನಮ್ಮೆಲ್ಲಾ ಸದಸ್ಯ ಶಾಲೆಗಳಿಗೆ ಈ ಬಗ್ಗೆ ಸೋಮವಾರ ಸಲಹೆ ನೀಡುತ್ತೇವೆ. ಮಾನವೀಯ ನೆಲೆಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗ ಹಾಗೂ ಲಾಕ್‌ಡೌನ್ ಕಾರಣದಿಂದ ಹಲವು ಕುಟುಂಬಗಳು ಶಾಲಾ ಶುಲ್ಕ ಪಾವತಿಸಲು ಕಷ್ಟಪಡುತ್ತಿದ್ದಾರೆ. ಉದ್ಯೋಗ ನಷ್ಟ ಹಾಗೂ ಕಡಿಮೆ ಸಂಬಳದ ಕಾರಣದಿಂದಲೂ ಹಲವರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಕಳೆದ ಬಾರಿ ಶಾಲಾ ಶುಲ್ಕ ಕಟ್ಟಿದ್ದವರು ಪರಿಸ್ಥಿತಿಯನ್ನು ಗಮನಿಸಿದ್ದರು. ಅಂಥವರು ಈ ಬಾರಿ ಶುಲ್ಕ ಕಟ್ಟುವ ಬಗ್ಗೆ ಯೋಚಿಸುವಂಗತಾಗಿತ್ತು. ಹಾಗಾಗಿ, ಶಾಲಾ ಕಾಲೇಜುಗಳು ಶುಲ್ಕ ಕಡಿತಗೊಳಿಸಿವೆ. ಹಾಗೆಂದು ಈ ವಿಭಾಗಕ್ಕೆ ಎಲ್ಲಾ ಶಾಲಾ ಕಾಲೇಜುಗಳನ್ನು ಪರಿಗಣಿಸುವಂತಿಲ್ಲ. ಬಹುತೇಕ ಶಾಲೆಗಳು ಶುಲ್ಕದಲ್ಲಿ ಏರಿಕೆಯನ್ನೇ ಮಾಡಿವೆ. ಮೂಲಗಳ ಮಾಹಿತಿ ಪ್ರಕಾರ ಕೆಲ ಶಾಲೆಗಳು ಶೇ. 6 ಹಾಗೂ ಶೇ. 8ರಷ್ಟು ವಾರ್ಷಿಕ ಶುಲ್ಕದಲ್ಲಿ ಏರಿಕೆ ಮಾಡಿವೆ.
Published On - 5:08 pm, Mon, 24 May 21