ಬೆಂಗಳೂರು: ಶ್ರೀರಾಮನ (Lord Sri Rama) ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಸಾಹಿತಿ ಭಗವಾನ್ (Bhagavan) ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಹಿಂದುತ್ವಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಪ್ರಗತಿಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುವವರೂ ಭಗವಾನ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ‘ಬಹುಸಂಖ್ಯಾತರ ಶ್ರದ್ಧೆಯ ಬಗ್ಗೆ ಅಸಡ್ಡೆಯಿಂದ ಮಾತನಾಡುವ ಧೋರಣೆ ತಪ್ಪು’ ಎಂದು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಈ ಸಂಬಂಧ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ‘ಇಡೀ ದೇಶ ಭಕ್ತಿಯಿಂದ ಕಾಣುವ ಶ್ರೀರಾಮಚಂದ್ರ ಹಾಗೂ ಸೀತಾಮಾತೆಯ ಬಗ್ಗೆ ಭಗವಾನ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಲವು ಬಾರಿ ಇಂಥದ್ದೇ ಹೇಳಿಕೆಗಳನ್ನು ನೀಡಿರುವ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಕೋರಲಾಗಿದೆ.
‘ಸೀತೆಗೆ ಹೆಂಡ ಕುಡಿಸಿ ರಾಮ ತಾನೂ ಕುಡಿಯುತ್ತಿದ್ದ’ ಎಂದು ಭಗವಾನ್ ಇತ್ತೀಚೆಗೆ ಕೆ.ಆರ್.ಪೇಟೆಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ‘ಈ ಹಿಂದೆಯೂ ಭಗವಾನ್ ಅವರು ಪ್ರಭು ಶ್ರೀರಾಮ, ಶ್ರೀಕೃಷ್ಣ ಹಾಗೂ ಭಗವದ್ಗೀತೆ ಬಗ್ಗೆ ಅಶ್ಲೀಲವಾಗಿ ಮಾತನಾಡಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದರು. ಇದೇ ಕಾರಣಕ್ಕೆ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ನಂತರದ ದಿನಗಳಲ್ಲಿ ಅವರಿಗೆ ನ್ಯಾಯಾಲಯವು ಷರತ್ತು ಬದ್ದ ಜಾಮೀನು ನೀಡಿತ್ತು. ಆದರೆ ಇದೀಗ ಮತ್ತೆ ಶ್ರೀರಾಮನ ವಿರುದ್ಧ ಭಗವಾನ್ ಅಸಭ್ಯವಾಗಿ ಮಾತನಾಡಿರುವುದು ಶ್ರದ್ಧಾಳುಗಳ ಆಕ್ಷೇಪಕ್ಕೆ ಕಾರಣವಾಗಿದೆ.
‘ನ್ಯಾಯಾಲಯವು ನೀಡಿರುವ ಜಾಮೀನಿಗೆ ಸರ್ಕಾರವು ಆಕ್ಷೇಪ ಸಲ್ಲಿಸಬೇಕು. ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂಗಳು ಶಾಂತಿಪ್ರಿಯರು ಎನ್ನುವ ಕಾರಣಕ್ಕೆ ಎಲ್ಲರೂ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಪ್ರವೃತ್ತಿ ನಿಲ್ಲಬೇಕು’ ಎಂದು ಆಗ್ರಹಿಸಿದರು.
ಭಗವಾನ್ಗೆ 6 ಪ್ರಶ್ನೆ ಕೇಳಿದ ಫರ್ಝಾನಾ ಅಶ್ರಫ್
ಸಾಹಿತಿ ಭಗವಾನ್ ಅವರ ಶ್ರೀರಾಮನ ಬಗ್ಗೆ ಆಡಿರುವ ಆಕ್ಷೇಪಾರ್ಹ ಮಾತುಗಳಿಗೆ ಪ್ರಗತಿಪರ ಹಾಗೂ ವೈಚಾರಿಕ ಸಾಹಿತಿಗಳ ವಲಯದಲ್ಲಿಯೂ ಆಕ್ಷೇಪ ಕೇಳಿಬಂದಿದೆ. ಈ ಕುರಿತು ಸಾಹಿತಿ ಹಾಗೂ ಪ್ರಗತಿಪರ ಚಿಂತಕಿ ಯು.ಟಿ.ಫರ್ಝಾನಾ ಅಶ್ರಫ್ ಭಗವಾನ್ ಅವರಿಗೆ 6 ಪ್ರಶ್ನೆಗಳನ್ನು ಕೇಳಿದ್ದಾರೆ. ಇಂಥ ಪ್ರಯತ್ನಗಳನ್ನು ಸ್ಪಷ್ಟವಾಗಿ ಖಂಡಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಇದನ್ನೂ ಓದಿ: ಶ್ರೀರಾಮಚಂದ್ರನ ಕುರಿತು ವಿವಾದಾತ್ಮಕ ಹೇಳಿಕೆ: ಹಿಂದೂ ಪರ ಕಾರ್ಯಕರ್ತರಿಂದ ಸಾಹಿತಿ ಪ್ರೊ. ಭಗವಾನ್ ವಿರುದ್ಧ ದೂರು
ಕರ್ನಾಟಕಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 am, Mon, 23 January 23