Kolar Politics: ಕೋಲಾರದಲ್ಲಿ ಸಿದ್ದರಾಮಯ್ಯ ಹಣಿಯಲು ಬಿಜೆಪಿ, ಜೆಡಿಎಸ್ ಸಜ್ಜು; ಪ್ರತಿತಂತ್ರ ಹೆಣೆದ ಸಿದ್ದು
ಕಾಂಗ್ರೆಸ್ ಪ್ರಜಾಧ್ವನಿ ಹೆಸರಿನಲ್ಲಿ ರಾಜ್ಯಾದ್ಯಂತ ಬಸ್ ಯಾತ್ರೆ ಪ್ರಾರಂಭಿಸಿದ್ದು ಇಂದು (ಜ.23) ಕೋಲಾರ ತಲುಪಿದೆ. ಕೋಲಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರವಾಗಿದ್ದು, ಸಿದ್ದರಾಮಯ್ಯ ಶಕ್ತಿ ಪ್ರದರ್ಶಿಸಲು ಸಿದ್ದವಾಗಿದ್ದಾರೆ.
ಕೋಲಾರ: ಕಾಂಗ್ರೆಸ್ (Congress) ಪ್ರಜಾಧ್ವನಿ ಹೆಸರಿನಲ್ಲಿ ರಾಜ್ಯಾದ್ಯಂತ ಬಸ್ ಯಾತ್ರೆ (Bus Yatre) ಪ್ರಾರಂಭಿಸಿದ್ದು ಇಂದು (ಜ.23) ಕೋಲಾರ ತಲುಪಿದೆ. ಕೋಲಾರ (Kolar) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸುವ ಕ್ಷೇತ್ರವಾಗಿದ್ದು, ಸಿದ್ದರಾಮಯ್ಯ ಶಕ್ತಿ ಪ್ರದರ್ಶಿಸಲು ಸಿದ್ದವಾಗಿದ್ದಾರೆ. ಕೋಲಾರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ಕೋಲಾರಕ್ಕೆ ಭೇಟಿ ನೀಡುತ್ತಿದ್ದು, ಸಿದ್ದರಾಮಯ್ಯ ಶಕ್ತಿ ಅನಾವರಣವಾಗಲಿದೆ. ಇನ್ನು ಈ ಸಮಾವೇಶದ ಮೂಲಕ ಸ್ವಪಕ್ಷೀಯ ನಾಯಕರು, ಜೆಡಿಎಸ್ ಮತ್ತು ಬಿಜೆಪಿಗೆ ತಮ್ಮ ಪ್ರಭಾವದ ಬಗ್ಗೆ ತಿಳಿಸಲಿದ್ದಾರೆ.
ಈ ಸಮಾವೇಶದಲ್ಲಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಪರವಾದ ಅಲೆ ಇದೆಯೋ, ಇಲ್ಲವೋ ಎಂಬುವುದು ತಿಳಿಯಲಿದ್ದು, ಇಲ್ಲವೆಂದಲ್ಲಿ ಸಿದ್ದರಾಮಯ್ಯ ಬೇರೆ ಕ್ಷೇತ್ರ ಹುಡುಕೋದಕ್ಕೂ ಅವಕಾಶ ಸಿಗಲಿದೆ. ಕ್ಷೇತ್ರದಲ್ಲಿ ತಮ್ಮ ಗೆಲುವಿನ ಗಟ್ಟಿತನದ ಬಗ್ಗೆ ಇಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ವೇಳೆಯೂ ತನಗೆ ಕೋಲಾರದಲ್ಲಿ ಸ್ಪರ್ಧೆ ಮಾಡೋದು ಒಪ್ಪಿಗೆ ಇದೆ ಆದರೆ ಹೈಕಮಾಂಡ್ ಒಪ್ಪಿಗೆ ಕೊಡಬೇಕು ಎಂದು ಚೆಕ್ ಪಾಯಿಂಟ್ ಇಟ್ಟಿದ್ದರು.
ಇದನ್ನು ಓದಿ: ಒಂದು ಮುಖ 150 ಗುರಿ; ಮೋದಿ ಮಹಾತ್ಮೆಗೆ ಕಾಲ ಸನ್ನಿಹಿತ
ಸಿದ್ದರಾಮಯ್ಯ ಅಹಿಂದ ಮತಗಳನ್ನೇ ಗಮನಾರ್ಹವಾಗಿ ಸೆಳೆಯುವ ವಿಶ್ವಾಸದಲ್ಲಿದ್ದು, ಅಹಿಂದ ಮತಗಳು ಕೈ ಹಿಡಿದರೆ ಸಾಕು ಗೆಲುವು ನಿಶ್ಚಿತ ಎಂಬ ಭಾವನೆ ಮೂಡಿದೆ. ಕೋಲಾರ ಜಿಲ್ಲೆಗೆ ಪಕ್ಷದ ಪ್ರಣಾಳಿಕೆಯಲ್ಲಿ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದ್ದು, ಅಹಿಂದ ವರ್ಗಕ್ಕೆ ಪ್ರತ್ಯೇಕವಾಗಿ ಕೆಲವು ಯೋಜನೆಗಳ ಘೋಷಣೆ ಮಾಡುವ ಚಿಂತನೆ ಇದೆ.
ದಲಿತ ಮುಖಂಡರ ಬೇಸರ ಶಮನ ಮಾಡಲು ಹೊಸ ಸ್ಟ್ಯಾಟರ್ಜಿ
ಸಿದ್ದರಾಮಯ್ಯ ವಿರುದ್ದ ದಲಿತ ಮುಖಂಡರ ಕರಪತ್ರ ಹಂಚಿಕೆ ವಿಚಾರದಲ್ಲಿ ಹೊಸ ಸ್ಟ್ಯಾಟರ್ಜಿ ರೂಪಿಸಲಾಗುತ್ತಿದೆ. ದಲಿತ ಮುಖಂಡರ ಕರಪತ್ರಕ್ಕೆ ಕೌಂಟರ್ ಕೊಡಲು ದಲಿತರಿಗಾಗಿ ಶ್ರಮಿಸಿದ ದಲಿತರಾಮಯ್ಯ ಎಂಬ ಹೆಸರಿನ ಕರಪತ್ರಗಳು ಸಿದ್ದು ಬತ್ತಳಿಕೆಯಲ್ಲಿ ಸಿದ್ದವಾಗಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದಲಿತರ ಪರವಾಗಿ ಮಾಡಿದ ಕಾರ್ಯಕ್ರಮಗಳ ಪಟ್ಟಿ, ಡಾ. ಬಿ. ಆರ್. ಅಂಬೇಡ್ಕರ್ ಅವರ 125 ಜಯಂತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡಿದ್ದು, ದಲಿತ ವಿದ್ಯಾರ್ಥಿಗಳಿಗೆ ನೀಡಿದ ಮೀಸಲಾತಿ, ದಲಿತ ಗುತ್ತಿಗೆದಾರರಿಗೆ ನೀಡಿದ ಮೀಸಲಾತಿ ಸೇರಿ ಹಲವು ಕಾರ್ಯಕ್ರಮಗಳ ಪಟ್ಟಿ ಇರುವ ಕರಪತ್ರ ಬಿಡುಗಡೆ ಮಾಡಲಿದ್ದಾರೆ. ದಲಿತ ನಾಯಕರನ್ನು ಮುಗಿಸಿದ ಸಿದ್ದರಾಮಯ್ಯ ಅನ್ನುವ ಕರಪತ್ರ ಹಂಚಿಕೆ ಮಾಡಿದ್ದ ದಲಿತ ಮುಖಂಡರಿಗೆ ಈ ಮೂಲಕ ಕೌಂಟರ್ ನೀಡಲಿದ್ದಾರೆ.
ಸಿದ್ದು ಹಣಿಯೋಕೆ ಬಿಜೆಪಿ, ಜೆಡಿಎಸ್ ಪ್ಲ್ಯಾನ್ ಏನು..?
ಸಿದ್ದರಾಮಯ್ಯ ಅವರನ್ನು ಹಣಿಯೋಕೆ ಬಿಜೆಪಿ, ಜೆಡಿಎಸ್ ಪ್ಲ್ಯಾನ್ ಏನು..? ಸಿದ್ದು ಹಣಿಯೋಕೆ ಕಾಂಗ್ರೆಸ್ ಒಳಗಿನ ಪ್ಲ್ಯಾನ್ ಏನು..? ಸಿದ್ದರಾಮಯ್ಯ ಅವರನ್ನು ಹಣಿಯಲು ಕಮಲ ಪಾಳಯ ಸಿದ್ದತೆಗಳನ್ನು ಆರಂಭಿಸಿದೆ. ಅಹಿಂದ ಮತಗಳನ್ನು ಒಡೆಯಲು ಬಿಜೆಪಿ ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಸ್ವತಃ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ರಿಂದಲೇ ಕೋಲಾರದಲ್ಲಿ ಸಭೆ ನಡೆದು ಅನೇಕ ಮಹತ್ವದ ವಿಷಯಗಳು ಚರ್ಚೆಯಾದವು.
ಅಹಿಂದ ಮತಗಳು ಡಿವೈಡ್ ಆದ್ರೆ ಸಿದ್ದರಾಮಯ್ಯ ಗೆಲುವು ಕಷ್ಟ
ಅಹಿಂದ ಮತಗಳು ಕೇವಲ ಸಿದ್ದರಾಮಯ್ಯ ಪರ ವಾಲದಂತೆ ನೋಡಿಕೊಳ್ಳಲು ಪ್ರತಿಪಕ್ಷಗಳು ಪ್ಲ್ಯಾನ್ ರೂಪಸಿದ್ದು, ಈಗಾಗಲೇ ದಲಿತ ವಿರೋಧಿ ಸಿದ್ದರಾಮಯ್ಯ ಎಂದು ದಲಿತ ಕರಪತ್ರಗಳನ್ನು ಬಿಡುಗಡೆ ಮಾಡಿವೆ. ಸಿದ್ದರಾಮಯ್ಯರಿಂದ ದಲಿತ ನಾಯಕರು ಬೆಳೆಯಲು ಸಾಧ್ಯವಾಗಿಲ್ಲ. ಕೆ.ಹೆಚ್ ಮುನಿಯಪ್ಪ ಹಾಗೂ ಡಾ. ಜಿ ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಆಪ್ತರೇ ಕಾರಣ. ದಲಿತ ವಿರೋಧಿ ಸಿದ್ದರಾಮಯ್ಯ ಎಂಬ ಹಣೆಪಟ್ಟಿ ಅಂಟಿಸಿ ದಲಿತ ಮತಗಳ ಒಡೆಯುವ ಸ್ಟ್ಯಾಟರ್ಜಿ ರೂಪಿಸುತ್ತಿದ್ದಾರೆ.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಬಿಜೆಪಿ ಕಡೆ ಮುಖಂಡರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದ್ದು, ವರ್ತೂರು ಪ್ರಕಾಶ್ ಮೂಲಕ ಕುರುಬ ಸಮುದಾಯದ ಮತಗಳು ಡಿವೈಡ್ ಆಗುವಂತೆ ನೋಡಿಕೊಳ್ಳಲಾಗುತ್ತಿದೆ.
ಜೆಡಿಎಸ್ನಿಂದಲೂ ಸಿದ್ದರಾಮಯ್ಯಗೆ ಖೆಡ್ಡಾ ತೋಡಲು ಶತಪ್ರಯತ್ನ
ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಒಕ್ಕಲಿಗ ಹಾಗೂ ಅಲ್ಪಸಂಖ್ಯಾತ ಮತಗಳ ಮೇಲೆ ಜೆಡಿಎಸ್ ಕಣ್ಣು ಹಾಕಿದೆ. ಅಲ್ಪಸಂಖ್ಯಾತ ಮತಗಳನ್ನು ಜೆಡಿಎಸ್ನತ್ತ ಸೆಳೆಯಲು ಪ್ರಚಾರಕ್ಕೆ ಸಿಎಂ ಇಬ್ರಾಹಿಂ ಧುಮುಕಲಿದ್ದಾರೆ.
ಸಿದ್ದರಾಮಯ್ಯ ಹಾದಿಗೆ ಕಲ್ಲು ಮುಳ್ಳಾಗಿದೆ ಸ್ಥಳೀಯ ನಾಯಕರ ಭಿನ್ನಮತ
ಪ್ರಜಾಧ್ವನಿ ಸಮಾವೇಶದಲ್ಲಾದರು ಸ್ಥಳೀಯ ಕಾಂಗ್ರೆಸ್ ನಾಯಕರ ಭಿನ್ನಮತ ಶಮನವಾಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ. ಕೋಲಾರ ಜಿಲ್ಲಾ ಕಾಂಗ್ರೆಸ್ನಲ್ಲಿನ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕೆ.ಹೆಚ್ ಮುನಿಯಪ್ಪ ಬಣಗಳ ನಡುವೆ ಭಿನ್ನಮತ ಮುಂದುವರೆದಿದೆ. ಜನವರಿ 9 ರಂದು ವೇದಿಕೆ ಅಲಂಕಾರಕಷ್ಟೇ ಸೀಮಿತವಾಗಿದ್ದ ಮುಖಂಡರು, ವೇದಿಕೆಯಲ್ಲೂ ಒಬ್ಬರೊಗೊಬ್ಬರು ಹೆಸರೇಳದೆ ಮುಖ ಕೊಟ್ಟು ಮಾತನಾಡದೆ, ತೋರಿಕೆಗಷ್ಟೇ ಸೀಮಿತವಾಗಿದ್ದ ಭಿನ್ನಮತವನ್ನು ಶಮನ ಮಾಡುವ ಯತ್ನ ನಡೆದಿತ್ತು. ಕೆ. ಹೆಚ್ ಮುನಿಯಪ್ಪ ಅವರನ್ನು ಮನೆವರೆಗೂ ಹೋಗಿ ಸಿದ್ದರಾಮಯ್ಯ ಕರೆತಂದಿದ್ದರೂ ಕೂಡ, ಕಾರ್ಯಕ್ರಮ ಮುಗಿದ ನಂತರ ಕೆಹೆಚ್ ಮುನಿಯಪ್ಪ ಏಕಾಂಗಿಯಾಗಿ ಮನೆಗೆ ತೆರಳಿದ್ದರು. ರಮೇಶ್ ಕುಮಾರ್ ಗುಂಪು ಶ್ರೀನಿವಾಸಗೌಡ ಮನೆಯಲ್ಲಿ ಊಟಕ್ಕೂ ಆಹ್ವಾನ ನೀಡದೆ ಕೆ.ಹೆಚ್ ಮುನಿಯಪ್ಪರನ್ನು ದೂರವೇ ಇಟ್ಟಿದ್ದರು. ಇಂದಾದರೂ ರಾಜ್ಯ ನಾಯಕರ ಎದುರಲ್ಲಿ ಶಮನವಾಗಿ, ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನೆಯಾಗುತ್ತಾ ಕಾದು ನೋಡಬೇಕಿದೆ.
Published On - 11:11 am, Mon, 23 January 23