PM Narendra Modi: ಒಂದು ಮುಖ 150 ಗುರಿ; ಮೋದಿ ಮಹಾತ್ಮೆಗೆ ಕಾಲ ಸನ್ನಿಹಿತ
ಹಳೆ ಮೈಸೂರಿನಲ್ಲಿ ಪಕ್ಷವನ್ನು ಗಟ್ಟಿಗೊಳಿಸಿ, ಪಕ್ಷದ ಬೇರುಗಳನ್ನು ಇನ್ನಷ್ಟು ಆಳಕ್ಕೆ ಕೊಂಡೊಯ್ಯುವ ಪ್ರಯತ್ನದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಳೆ ಮೈಸೂರು ಮಂಡ್ಯ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
2023 ವರ್ಷ ಆರಂಭವಾಗುತ್ತಿದ್ದಂತೆ 2 ಬಾರಿ ರಾಜ್ಯ ಪ್ರವಾಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಫೆಬ್ರವರಿ 6ರಂದು ರಾಜ್ಯಕ್ಕೆ ಆಗಮಿಸಲಿದ್ದು, ಧಾರವಾಡ ಮತ್ತು ತುಮಕೂರುಕ್ಕೆ ಭೇಟಿ ನೀಡಿ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವರ್ಷದ ಆರಂಭದಿಂದ ಹುಬ್ಬಳ್ಳಿ, ಯಾದಗಿರಿ, ಕಲಬುರ್ಗಿ ಉತ್ತರ ಕರ್ನಾಟಕದ ಪ್ರವಾಸದಲ್ಲಿರುವ ಮೋದಿ ಮೊದಲ ಬಾರಿಗೆ ಹಳೆ ಮೈಸೂರು ಭಾಗದತ್ತ ಮುಖ ಮಾಡಿದ್ದಾರೆ. ಹಳೆ ಮೈಸೂರಿನಲ್ಲಿ ಪಕ್ಷವನ್ನು ಗಟ್ಟಿಗೊಳಿಸಿ, ಪಕ್ಷದ ಬೇರುಗಳನ್ನು ಇನ್ನಷ್ಟು ಆಳಕ್ಕೆ ಕೊಂಡೊಯ್ಯುವ ಪ್ರಯತ್ನ ಇದಾಗಿದೆ. ಈ ಹಿಂದೆ 2022ರ ಅಂತ್ಯದಲ್ಲಿ ಕೇಂದ್ರ ಸಚಿವ ಅಮಿತ್ ಷಾ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ಸರ್ಕಾರಿ ಹಾಲಿನ ಡೈರಿಯನ್ನು ಉದ್ಘಾಟಿಸುವುದರ ಜೊತೆಗೆ ರಾಜ್ಯದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದರು.
ಇನ್ನು ಪ್ರಧಾನಿ ಮೋದಿ ಫೆಬ್ರವರಿ ತಿಂಗಳಿನಲ್ಲಿ ಮಂಡ್ಯಕ್ಕೆ ಭೇಟಿ ನೀಡಲಿರುವ ಕುರಿತು ಹೈಕಮಾಂಡ್ ರಾಜ್ಯ ಬಿಜೆಪಿ ಘಟಕಕ್ಕೆ ಸೂಚನೆ ರವಾನಿಸಿದೆ. ಭೇಟಿ ದಿನಾಂಕ ಮತ್ತು ಕಾರ್ಯಕ್ರಮ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ನಾಯಕರಿಗೆ ವರಿಷ್ಠರು ಸೂಚನೆ ನೀಡಿದ್ದಾರೆ. ಈ ಮೂಲಕ ಗುಜರಾತಿನಂತೆ ರಾಜ್ಯದಲ್ಲೂ ರಾಜ್ಯ ನಾಯಕರು ಪ್ರಚಾರದ ಸ್ಟ್ಯಾಟರ್ಜಿ ಉಪಯೋಗಿಸಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
2023 ವರ್ಷ ಆರಂಭದಿಂದ ಮೋದಿ ರಾಜ್ಯಕ್ಕೆ 2 ಬಾರಿ 3 ಜಿಲ್ಲೆಗಳಿಗೆ ಭೇಟಿ
ಹುಬ್ಬಳ್ಳಿ-ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿ ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲಬೇಡಿ. ಯುವಕರಿಗೆ ಸ್ವಾಮಿ ವಿವೇಕಾನಂದರವರು ಪ್ರೇರಣೆ ಆಗಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು. ದೇಶವನ್ನು ಮುನ್ನಡೆಸುವುದು ಯುವಕರ ಕರ್ತವ್ಯ. ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ. ರನ್‌ವೇ ರೆಡಿ ಇದೆ, ನೀವು ಟೇಕಾಫ್ ಆಗುವುದೊಂದೇ ಬಾಕಿ ಎನ್ನುವುದರ ಮೂಲಕ ಯುವಶಕ್ತಿಯನ್ನು ಸೆಳೆಯುವ ಪ್ರಯತ್ನದ ಜೊತೆಗೆ ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಅಲೆಗೆ ಅಧಿಕೃತ ಚಾಲನೆ ನೀಡಿದರು.
ಯಾದಗಿರಿಯಲ್ಲಿ ಹಲವು ಯೋಜನೆಗಳು ಶಂಕುಸ್ಥಾಪನೆ ಮತ್ತು ಚಾಲನೆ ನೀಡಿ ಮಾತನಾಡಿದ ಅವರು ನಾವು ಎಂದಿಗೂ ವೋಟ್ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿಗೆ ಒತ್ತುಕೊಡುತ್ತೇವೆ. ಅಭಿವೃದ್ಧಿಯನ್ನೇ ಗಮನದಲ್ಲಿರಿಸಿಕೊಂಡು ರಾಜಕಾರಣ ಮಾಡುತ್ತೇವೆ ಎನ್ನುವುದರ ಮೂಲಕ ಕರ್ನಾಟಕದ ಕಳಸದಿಂದ ಮತದಾರರನ್ನು ಸೆಳಯುವ ರಥಕ್ಕೆ ಚಾಲನೆ ನೀಡಿ, ಅಲ್ಲಿನ ಹಿಂದುಳಿದ ವರ್ಗಗಳ ಪ್ರದೇಶಗಳಿಗೆ ನವೀಕರಣದ ಸ್ಪರ್ಶ ನೀಡುವ ಮೂಲಕ ಮತ ಬುಟ್ಟಿಯನ್ನು ತೆರೆದಿಟ್ಟರು.
ಕಲಬುರಗಿಯಲ್ಲಿ ತಾಂಡಾಜನರಿಗೆ ಮನೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು ಈ ಹಿಂದಿನ ಸರ್ಕಾರಗಳು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡರು. ಅನೇಕ ಜನರಿಗೆ ಬ್ಯಾಂಕ್ ಸೇವೆ ಬಗ್ಗೆ ಅವರಿಗೆ ಗೊತ್ತೆ ಇರಲಿಲ್ಲ. ನಮ್ಮ ಸರ್ಕಾರ ಬ್ಯಾಂಕ್ ಖಾತೆ ತೆರೆದು ಹಣ ಜಮೆ ಮಾಡಿದೆ. ಗ್ರಾಮೀಣ ಭಾಗದ ಜನರಿಗೆ ಮುದ್ರಾ ಯೋಜನೆ ಜಾರಿಗೆ ತಂದಿದ್ದೇವೆ. ವಂಚಿತ ಸಮುದಾಯಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತೆ. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಹೊಸ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಹೇಳುವ ಸರ್ಕಾರದ ಸಾಧನೆ ಹೇಳುವ ಮೂಲಕ ಕಾಂಗ್ರೆಸ್ ಭದ್ರಕೋಟೆಯಲ್ಲಿ ಸಂಚಲನ ಮೂಡಿಸಿದರು.
ಗುಜರಾತ್ ನಂತೆ ಕರ್ನಾಟಕದಲ್ಲೂ ಬಿಜೆಪಿ ಪ್ರಚಾರದ ತಾಳ ಮೇಳ
ಗುಜರಾತ್ನಲ್ಲಿ ಭಾರತೀಯ ಜನತಾ ಪಾರ್ಟಿ ಏಳನೇ ಬಾರಿ ಅಧಿಕಾರದ ಗದ್ದುಗೆ ಹಿಡಿದಿದೆ. ಹಿಂದಿನ ಇತಿಹಾಸವನ್ನು ಅಳಸಿ ಹೊಸ ಇತಿಹಾಸ ಬರೆದಿದೆ. ಈ ಅಭೂತಪೂರ್ವ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಒಂದರ ಹಿಂದೆ ಒಂದಂತೆ ರ್ಯಾಲಿಗಳೇ ಪ್ರಮುಖ ಕಾರಣ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಗುಜರಾತ್‌ನ 2 ನೇ ಹಂತದ ಮತದಾನಕ್ಕೆ ಡಿ.01 ರಂದು ಅತ್ಯಂತ ದೀರ್ಘವಾದ ರೋಡ್ ಶೋ ನಡೆಸಿದ್ದರು. ಮೋದಿ 50 ಕಿ.ಮೀ ವ್ಯಾಪ್ತಿಯಲ್ಲಿ 16 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು.
ನವೆಂಬರ್ 19 ಮತ್ತು 21 ರ ನಡುವೆ ಪ್ರಧಾನಿ ಗುಜರಾತ್‌ನ ದಕ್ಷಿಣದಲ್ಲಿ 8 ರ್ಯಾಲಿಗಳನ್ನು ಮಾಡಿದ್ದರು. ಮತ್ತು ದಕ್ಷಿಣವನ್ನೇ ಗುರಿಯಾಗಿಸಿಕೊಂಡುನವೆಂಬರ್ 23 ರಿಂದ 28ರ ನಡುವೆ 89 ವಿಧಾನಸಭಾ ಕ್ಷೇತ್ರಗಳಲ್ಲಿ 15 ರ್ಯಾಲಿಗಳನ್ನು ನಡೆಸಿದ್ದರು. ಗುಜರಾತ್‌ನ ಉತ್ತರದಲ್ಲಿ ನವೆಂಬರ್ 29 ರಿಂದ ಡಿಸೆಂಬರ್ 3 ರ ನಡುವೆ 15 ರ್ಯಾಲಿಗಳನ್ನು ಮಾಡಿದ್ದರು.
ಇದೇ ಸ್ಯಾಟರ್ಜಿಯನ್ನು ಕರ್ನಾಟಕದಲ್ಲೂ ಪ್ರಯೋಗಿಸಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ? ಹೌದು ಸರಣಿಯಂತೆ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇದರ ಜೊತೆಗೆ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ಮಾಡಿದ ಸುಮಾರು 8ರಿಂದ 10ಕಿಮೀ ಕಾರ್ನಲ್ಲಿ ಸಾಗಿದ್ದು, ಗುಜರಾತ್‌ನ ರ್ಯಾಲಿ ನೆನಪಿಸುತ್ತದೆ. ಮೋದಿ ಮೋಡಿಯಿಂದ ಅಧಿಕಾರದ ಗದ್ದುಗೆ ಹಿಡಿಯಲು ರಾಜ್ಯ ನಾಯಕರು ತಯಾರಿ ನಡೆಸಿದ್ದಾರೆ. ಈ ಮೂಲಕ ಒಂದು ಮುಖ 150 ಗುರಿ ಮೋದಿ ಮಹಾತ್ಮಗೆ ಬಿಜೆಪಿ ನಾಯಕರು ಜೈ ಎಂದಿದ್ದಾರೆ.
Published On - 3:33 pm, Sun, 22 January 23