ಶಿವಮೊಗ್ಗ/ ಕೊಪ್ಪಳ, ಮಾರ್ಚ್ 31: ದೇಶಾದ್ಯಂತ ಸೋಮವಾರ (ಮಾ.31) ಪ್ರವಿತ್ರ ರಂಜಾನ್ (Ramzan) ಹಬ್ಬವನ್ನು ಆಚರಿಸಲಾಯಿತು. ಶಿವಮೊಗ್ಗ (Shivamogga) ಜಿಲ್ಲೆ ಸಾಗರದ ಈದ್ಗಾ ಮೈದಾನದಲ್ಲಿ ನಮಾಜ್ ಬಳಿಕ ಎಸ್ಡಿಪಿಐ ‘ಪ್ಯಾಲೆಸ್ತೀನ್ ಫ್ರೀ’ (Palestine) ನಾಮಫಲಕ ಪ್ರದರ್ಶನ ಮಾಡಿತು. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ಸಾಗರದ ಕೆಳದಿ ರಸ್ತೆಯ ಈದ್ಗಾ ಮೈದಾನದಲ್ಲಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಬಳಿಕ ಎಸ್ಡಿಪಿಐ ಸಂಘಟನೆ ಕಾರ್ಯಕರ್ತರು ‘ಪ್ಯಾಲೆಸ್ತೀನ್ ಫ್ರೀ’, ಪ್ಯಾಲೆಸ್ತೀನ್, ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ನಿಲ್ಲಿಸುವಂತೆ ಫಲಕ ಪ್ರದರ್ಶಿಸಿದರು.
ಕೊಪ್ಪಳ: ಗಂಗಾವತಿಯಲ್ಲಿ ಬೆಳಗ್ಗೆ ಪ್ರಾರ್ಥನೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲಾಯಿತು. ಪ್ಯಾಲೆಸ್ತೀನ್ ಪರ ಮತ್ತು ವಕ್ಫ್ ತಿದ್ದುಪಡಿ ಬಿಲ್ ವಿರುದ್ಧ ಘೋಷಣೆಗಳನ್ನು ಕಿಡಿಗೇಡಿಗಳು ಹಾಕಿದರು. ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ್ದ ಆರು ಮಂದಿ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ನೋಡಿ: ಪಿಒಕೆಯಲ್ಲಿ ಹಮಾಸ್ ನಾಯಕನಿಗೆ ವಿಐಪಿ ಸ್ವಾಗತ, ಉಗ್ರರಿಂದ ಭಾರತ ವಿರೋಧಿ ರ್‍ಯಾಲಿ
ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಸಂಘ ಪರಿವಾರವನ್ನು ಅವಹೇಳನ ಮಾಡಿ ಪ್ಲೇ ಕಾರ್ಡ್ ಪ್ರದರ್ಶನ ಮಾಡಿದ್ದSDPI ಕಾರ್ಯಕರ್ತರ ವಿರುದ್ಧ ಉಪನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ವೇಳೆ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು. ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ವಕೀಲರ ಸಂಘ ದೂರು ನೀಡಿತ್ತು.
Published On - 11:02 pm, Mon, 31 March 25