ಡೇಟಾ ಮೈನಿಂಗ್ (Data mining) ಅಂದರೆ ನಿಮ್ಮ ವೈಯಕ್ತಿಕ ಮಾಹಿತಿ ಇಂದಿನ ಸೈಬರ್ ಪ್ರಪಂಚದಲ್ಲಿ ಮೂರಾಬಟ್ಟೆಯಾಗಿ ಹಂಚಿಹೋಗಿದೆ. ಇದು ನಿಮ್ಮ ಖಾಸಗಿತನಕ್ಕೆ ಬಹಳಷ್ಟು ಪೆಟ್ಟುಕೊಡಬಲ್ಲದು. ಅದು ನಿಮ್ಮ ಗೌಪ್ಯತೆಯನ್ನು ಹಾಳುಮಾಡುತ್ತದೆ. ಸ್ವಲ್ಪವೇ ಮೈಮರೆತರೂ ನಿಮ್ಮ ಜುಟ್ಟು ಸೈಬರ್ ಲೋಕದಲ್ಲಿ ಖದೀಮರ ಕೈಗೆ ನೀಡದಂತೆಯೇ ಸರಿ. ಮುಂದೆ ಅದು ದುರುಪಯೋಗವಾಗುವುದು ಖಚಿತ. ಆದರೆ ಕಟುವಾಸ್ತವವೆಂದರೆ ಇದನ್ನು ತಪ್ಪಿಸುವುದು ಅಸಾಧ್ಯವಾಗಿದೆ. ಆದರೆ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡರೆ ಅದನ್ನು ಕಡಿಮೆ ಮಾಡಬಹುದು.
ಇಂದಿನ ಸೈಬರ್ ಲೋಕದಲ್ಲಿ ವೈಯಕ್ತಿಕ ಮಾಹಿತಿ, ಖಾಸಗಿತನ, ಗೌಪ್ಯತೆ ಎಂಬುದಕ್ಕೆ ಬೆಲೆಯಿಲ್ಲವಾಗಿದೆ. ಆ ಅಮೂಲ್ಯ ಸಂಗತಿಗಳು ನಿಮ್ಮ ಕೈತಪ್ಪಿವೆ. ಡಿಜಿಟಲ್ ಪ್ರಪಂಚದಿಂದ ಅವೆಲ್ಲಾ ಕಣ್ಮರೆಯಾಗಿದೆ. ಜಾಹೀರಾತುದಾರರು ಸೇರಿದಂತೆ ಸೈಬರ್ ವಂಚಕರು ಖಂಡಿತವಾಗಿಯೂ ನಿಮ್ಮ ಬಗ್ಗೆ ಎಲ್ಲವನ್ನೂ ನಿಮಗಿಂತಲೂ ಚೆನ್ನಾಗಿ ವ್ಯಾಖ್ಯಾನಿಸುತ್ತಾರೆ/ತಿಳಿದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ವೇದ್ಯವಾಗಿದೆ. ನಿಮ್ಮ ಮೊಬೈಲ್ ಫೋನ್ ಎಂಬುದು ಮೈಕ್ರೊಫೋನ್ ಆಗಿಬಿಟ್ಟಿದೆ. ನೀವಾಗಿಯೇ ನಿಮ್ಮ ಬಗ್ಗೆ ಅಷ್ಟೂ ಮಾಹಿತಿಯನ್ನೂ ನಿಮಗೆ ಅರಿವಿಲ್ಲದಂತೆ ಹಂಚುತ್ತಿದ್ದೀರಿ. ಸೈಬರ್ ಆಟಗಾರರು ನಿಮ್ಮ ಪ್ರತಿಯೊಂದು ಗೊಣಗಾಟವನ್ನು ಸಕ್ರಿಯವಾಗಿ ದಾಖಲಿಸುತ್ತಿದ್ದಾರೆ, ಆಲಿಸುತ್ತಿದ್ದಾರೆ ಎಂಬುದನ್ನು ಮೊದಲು ಅರಿತುಕೊಳ್ಳಿ. ನೀವು ನೀಡುವ ಮಾಹಿತಿಯನ್ನು ನಿಖರವಾಗಿ ಅರ್ಥೈಸಿಕೊಂಡು ಜಾಹೀರಾತುಗಳನ್ನು ಒದಗಿಸುತ್ತಾರೆ. ಗ್ರಾಹಕ ದೇವರಿಗೆ ಸಮಾನ ಎಂದಿದ್ದ ಮಹಾತ್ಮ ಗಾಂಧಿಯ ನಾಡಿನಲ್ಲಿ ಅಸಲಿಗೆ ಸೈಬರ್ ಗ್ರಾಹಕನಿಗೆ ಯಾಕಾಗಿ ಇಂತಹ ದುಃಸ್ಥಿತಿ? ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ?
ಗಮನಿಸಿ, ಡೇಟಾ ಮೈನಿಂಗ್ ಎಂದು ಕರೆಯಲ್ಪಡುವ ಕಾರ್ಯದಲ್ಲಿ ಡಿಜಿಟಲ್ ಬಳಕೆ ವೇಳೆ ಕ್ಷಣ ಕ್ಷಣದ ನಿಮ್ಮ ಪ್ರತಿಯೊಂದು ಚಟುವಟಿಕೆಯಿಂದಲೂ ಆಮೂಲಾಗ್ರವಾಗಿ, ಅಪಾರ ಪ್ರಮಾಣದ, ಅನಾಮಧೇಯ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಕ್ಷಣಾರ್ಧದಲ್ಲಿ ಸಂಗ್ರಹಿಸುವ ಪ್ರಕ್ರಿಯೆಯಾಗಿದೆ. ಹೀಗೆ ಸಂಗ್ರಹಿಸಲ್ಪಡುವ ದತ್ತಾಂಶವನ್ನು ಅವರದೇ ರೀತಿಯಲ್ಲಿ ವಿಶ್ಲೇಷಿಸಿ, ವ್ಯಾಖ್ಯಾನಿಸಿ ಅಳೆದುತೂಗಿ ಜಾಹಿರಾತುದಾರರಿಗೆ ಹಂಚಿಕೆಯಾಗುತ್ತದೆ. ಅಷ್ಟೇ ಅಲ್ಲ ಇತರ ಪ್ರಭಾವಿ ಮಾರ್ಗಗಳ ಮೂಲಕ ನಿಮ್ಮ ಜೀವನದಲ್ಲಿ ನುಸುಳಲು ಬಳಸಲಾಗುತ್ತದೆ. ಅದು ಜಾಹೀರಾತು ಲೋಕಕ್ಕೆ ಸೀಮಿತವಾದರೆ ಹೆಚ್ಚು ಪ್ರಮಾದವೇನೂ ಆಗದು. ಆದರೆ ಅದು ಸೈಬರ್ ಲೋಕದ ಅಪರಾಧಿಗಳ ಕೈಗೆ ಹಸ್ತಾಂತರವಾದರೆ ನೀವು ಅವರಿಗೆ ಸುಲಭದ ತುತ್ತಾಗುತ್ತೀರಿ. ಅಲ್ಲಿಗೆ ನಿಮ್ಮನ್ನು ನಿಯಂತ್ರಿಸುವ ಹಕ್ಕನ್ನು ನೀವಾಗಿಯೇ ಅವರ ಕೈಗೆ ಕೊಟ್ಟಂತಾಗುತ್ತದೆ. ಅಲ್ಲಿಗೆ ನಿಮ್ಮ ಖಾಸಗಿ ಜೀವನಕ್ಕೆ ಕನ್ನ ಹಾಕುವುದು ಸುಲಭವಾಗುತ್ತದೆ. ಅಪಾಯಕಾರಿ ಎಂದರೆ ನಿಮ್ಮ ಪರವಾಗಿ Role-playing game ಪಾತ್ರಗಳನ್ನು ಅವರೇ ಆಡುತ್ತಾರೆ.
ನಿಜ ಅರ್ಥದಲ್ಲಿ ಜೇಡರ ಬಲೆಯಲ್ಲಿ ಸಿಲುಕಿಕೊಂಡಂತಹ ಪರಿಸ್ಥಿತಿ ಅದು. ಹಾಗಾದಾಗ ನಿಮ್ಮ ಜೀವನದಲ್ಲಿ ಡೇಟಾ ಗಣಿಗಾರಿಕೆಯನ್ನು ಕಡಿಮೆ ಮಾಡಲು ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಹಾಗಂತ ಸಂಪೂರ್ಣವಾಗಿ ಅದರಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಶೂನ್ಯ ಇಂಟರ್ನೆಟ್ ಸಂಪರ್ಕದೊಂದಿಗೆ, ಡಿಜಿಟಲ್ ಜಾಲದಿಂದ (ಆಫ್-ಗ್ರಿಡ್) ದೂರವಾಗಿ ವಾಸಿಸಲು (ಅಕ್ಷರಶಃ ದ್ವೀಪದಂತೆ) ಯೋಜಿಸದ ಹೊರತು ನೀವು ಅದರಿಂದ ಹೊರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಹಾಗಂತ ನಿಮ್ಮ ಡೇಟಾಗೆ ತಕ್ಕಂತೆ ನಿಮಗೆ ಮಾನ್ಯತೆ ಸಿಗುತ್ತದಾ ಎಂದರೆ ಹಾಗಾಗುವುದಿಲ್ಲ. ನಿಮ್ಮದೇ ಡೇಟಾ ಅವರ ಕೈಗೆ ಒಪ್ಪಿಸಿದಾಗ ಆ ಡೇಟಾಗೆ ತಕ್ಕ ಪರಿಹಾರವನ್ನು ನಿಮಗೆ ನೀಡುವುದಿಲ್ಲ. ಟೇಕನ್ ಫಾರ್ ಗ್ರಾಂಟೆಡ್ ಎಂಬಂತೆ ನಿಮ್ಮ ಮಾಹಿತಿಯನ್ನು ಅವರು ಇಷ್ಟಾನುಸಾರ ಬಳಸುತ್ತಾರೆ.
ಆ EULA ಗಳನ್ನು ಓದಿ:
ನಿಮ್ಮ ಡೇಟಾವನ್ನು ಗಣಿಗಾರಿಕೆ ಮಾಡುವ ದೊಡ್ಡ ಸಾಧನಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಒಂದಾಗಿದೆ. ವಿಶೇಷವಾಗಿ ನೀವು ಅದರಲ್ಲಿ ಹತ್ತಾರು ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಿಕೊಂಡಾಗ… ಅಂತಹ ಅಪ್ಲಿಕೇಶನ್ ಗಳ ನಿಯಮಗಳಿಗೆ ಸ್ವಯಂಪ್ರೇರಿತರಾಗಿ ಒಪ್ಪುತ್ತೀರಿ – ಅಂತಿಮ ಬಳಕೆದಾರ ಪರವಾನಗಿ ಒಪ್ಪಂದಕ್ಕೆ (end user license agreement-EULA) ಪೂರ್ಣವಾಗಿ ಓದದೆ ಒಪ್ಪಿಗೆ ಸೂಚಿಸುತ್ತೀರಿ. ಆದರೆ ಅಂತಹ EULA ಗಳನ್ನು ಪೂರ್ಣವಾಗಿ ಓದಿದಿ ಬಳಿಕವಷ್ಟೇ ಒಪ್ಪಿಗೆ ಸೂಚಿಸಬೇಕು ಎಂಬುದನ್ನು ಮರೆಯಬೇಡಿ. ತನ್ಮೂಲಕ ಮುಂದೆ ಎದುರಾಗುವ ಅಪಾಯಗಳನ್ನು ನೀವು ಸ್ವಲ್ಪಮಟ್ಟಿಗೆ ತಡೆಗಟ್ಟಬಹುದು.
ದತ್ತಾಂಶ ಗಣಿಗಾರಿಕೆಯ ವಿರುದ್ಧ ರಕ್ಷಣೆ ಪಡೆಯಲು ಆ EULA ಗಳನ್ನು ಪರಿಶೀಲಿಸಲು ನಿಮಗೆ ಸಮಯ ಹಿಡಿಸುತ್ತದೆ. ಮುಂದೆ ಆ ಬಗ್ಗೆ ನೀವು ಮಾತುಕತೆ ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ಮದರ್‌ಶಿಪ್‌ಗೆ ಡೇಟಾವನ್ನು ಕಳುಹಿಸಲು ಸಂಪೂರ್ಣ ಅನುಮತಿ ನೀಡುವ ಮುನ್ನ ನೀವು ಕನಿಷ್ಠ ಪರ್ಯಾಯ ಮಾರ್ಗವೇನಾದರೂ ಇದೆಯಾ ಎಂಬುದನ್ನು ಹುಡುಕಬಹುದು. ಅಪ್ಲಿಕೇಶನ್ ಸ್ಥಾಪನೆ ಎಂಬುದು ದತ್ತಾಂಶ ಗಣಿಗಾರಿಕೆಗೆ ನೀವು ನೀಡುವ ಸಮ್ಮತಿ.
ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯಷ್ಟೇ ಅಲ್ಲ; ನಿಮ್ಮ ಕಂಪ್ಯೂಟರ್/ಮೊಬೈಲ್ ಡಿವೈಸ್ ಮಾಹಿತಿಯನ್ನೂ ನೀಡುತ್ತೀರಿ. ಇದು ನಿಜಕ್ಕೂ ಅಪಾಯಕಾರಿ. ಅದಕ್ಕೇ ಹೇಳಿದ್ದು ಸೂಕ್ಷ್ಮವಾಗಿ ಅವಲೋಕಿಸಿ, EULA ಗಳನ್ನು ಒಪ್ಪಿಕೊಳ್ಳುವ ಮೊದಲು ಎರಡೆರಡು ಬಾರಿ ಯೋಚಿಸಿ.
ಕಾಸಿಗೊಂದು ಕೊಸರಿಗೆ ನಾಲ್ಕು ಎಂಬಂತೆ ಸಿಗುವ ಅಪ್ಲಿಕೇಶನ್‌ಗಳ ಡೌನ್ಲೋಡ್ ಮಾಡಿಕೊಳ್ಳುವುದನ್ನು ಮೊದಲು ನಿಲ್ಲಿಸಿ:
ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ – ಮೊಬೈಲ್ ಡಿವೈಸ್ನಲ್ಲಿ ನೀವು ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಿದಾಗ, ನಿಮ್ಮ ಕುರಿತಾದ ಡೇಟಾವನ್ನು ಸಂಗ್ರಹಿಸಲು ಅಗತ್ಯವಿರುವ ಎಲ್ಲದಕ್ಕೂ ಕ್ಷಣಾರ್ಧದಲ್ಲಿ ನೀವು ಅನುಮತಿ ನೀಡುತ್ತಾ ಹೋಗುತ್ತೀರಿ. ಇದು ನಿಜಕ್ಕೂ ದತ್ತಾಂಶ ಗಣಿಗಾರಿಕೆಗೆ ನೀವು ಕಲ್ಪಿಸುವ ಚಿನ್ನದ ಗಣಿಯಾಗಿರುತ್ತದೆ.
ನೀವು ಡೌನ್ಲೋಡ್ ಮಾಡಿಕೊಳ್ಳುವ ಅಪ್ಲಿಕೇಶನ್‌ಗೆ ಅನಗತ್ಯವಾದ ಅನುಮತಿಗಳ ಅಗತ್ಯವಿದ್ದರೆ – ಅಂದರೆ ಮೈಕ್ರೊಫೋನ್, ಸ್ಥಳ ಮತ್ತು ಕ್ಯಾಮೆರಾಗೆ ಅನುಮತಿ ನೀಡುವ ಅಗತ್ಯವಿದೆಯೇ? ಎಂಬುದನ್ನು ಪರಾಮರ್ಶಿಸಿಕೊಳ್ಳಿ. ಇಂತಹ ಮಾಹಿತಿ ಕೇಳುವ ಅಪ್ಲಿಕೇಶನ್ಗಳು ಬಹುತೇಕ data-mining appಗಳಷ್ಟೇ ಎಂಬುದನ್ನು ಅರಿತುಕೊಳ್ಳಿ.
ಇನ್ನು ನಿಮ್ಮ ಮುಂದಿನ ರಕ್ಷಣಾತ್ಮಕ ಅಟವೆಂದರೆ ಕಸದಂತೆ, ಕಾಸಿಗೊಂದು ಕೊಸರಿಗೆ ನಾಲ್ಕು ಎಂಬಂತೆ ಸಿಗುವ ಅಪ್ಲಿಕೇಶನ್‌ಗಳ ಡೌನ್ಲೋಡ್ ಮಾಡಿಕೊಳ್ಳುವುದನ್ನು ಮೊದಲು ನಿಲ್ಲಿಸಿ. ಮತ್ತು ಆ ಡಾಲರ್ ಅನ್ನು ಖರ್ಚು ಮಾಡಿ. ಪ್ರತಿಯೊಂದು ಅಪ್ಲಿಕೇಶನ್ ನಿಮ್ಮಿಂದ ಹಣವನ್ನು ಗಳಿಸಲು ಬಯಸುತ್ತದೆ. ಹಾಗಂತ ತಕ್ಷಣಕ್ಕೆ ನೇರವಾಗಿ ನೀವು ಮುಂಗಡ ಪಾವತಿಸಲಿಲ್ಲ ಎಂದಿಟ್ಟುಕೊಂಡರೂ ನಿಮ್ಮ ಡೇಟಾ ಎಂಬ ಅಮೂಲ್ಯ ಸಂತ್ತನ್ನು ಅವರಿಗೆ ಹಸ್ತಾಂತರ ಮಾಡಿರುತ್ತೀರಿ ಎಂಬುದನ್ನು ಚೆನ್ನಾಗಿ ‘ಅರ್ಥೈಸಿಕೊಳ್ಳಿ’.
ಸೋಷಿಯಲ್ ಮೀಡಿಯಾ ಅಂದರೆ ತುಸು ಬೇಸರದ ಭಾವ ಬೆಳೆಸಿಕೊಳ್ಳಿ:
ದತ್ತಾಂಶ ಗಣಿಗಾರಿಕೆ ವಿಷಯಕ್ಕೆ ಬಂದಾಗ ಸಾಮಾಜಿಕ ಜಾಲತಾಣ ವೇದಿಕೆಗಳು (social media) ಎಂಬುದು ನಿಸ್ಸಂಶಯವಾಗಿ ನಿಮ್ಮ ದುರಂತವನ್ನು ನೀವೇ ತಂದುಕೊಂಡಂತೆ. ನೀವು ನಿಮ್ಮ ಫೋಟೋ ಅಥವಾ ಮಾಹಿತಿಯನ್ನು ವೇದಿಕೆಯಲ್ಲಿ ಪೋಸ್ಟ್ ಮಾಡುತ್ತಿದ್ದೀರಿ ಅಂತಿಟ್ಟುಕೊಳ್ಳಿ ಅದರಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮತ್ತು ರಿಮೋಟ್ ಆಗಿ ಜಾಹೀರಾತುಗಳು ನಿಮ್ಮ ಜೀವನದುದ್ದಕ್ಕೂ ಕಾಣಿಸಿಕೊಳ್ಳಲು ಪ್ರಾರಂಭಿಸಿಬಿಡುತ್ತವೆ. ಹಾಗಾಗಿ ಅಗತ್ಯವಿಲ್ಲದ ಸಂಗತಿಗಳನ್ನೆಲ್ಲಾ ಹಂಚಿಕೊಳ್ಳಬೇಡಿ. ಇದಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದೊಂದೇ ದಾರಿ.
ಡೇಟಾ ಗಣಿಗಾರಿಕೆಯ ಬಗ್ಗೆ ನೀವು ಕಾಳಜಿವಹಿಸುವಂತಿದ್ದರೆ, ನಿಮ್ಮ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ದತ್ತಾಂಶ ಗಣಿಗಾರಿಕೆ ಮಾಡುವವರಿಗೆ ಪ್ರವೇಶ ನಿರಾಕರಿಸುವುದು ಅಥವಾ ಕಡಿಮೆ ಮಾಡುವುದು ಪ್ರಧಾನವಾಗುತ್ತದೆ. ಅದಕ್ಕಾಗಿ ನೀವು ಕೆಲವು ಸರಳ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ನಿಮ್ಮ ಪ್ರೊಫೈಲ್ ಅನ್ನು ಖಾಸಗಿಯಾಗಿ ಸೆಟ್ ಮಾಡಿಟ್ಟುಕೊಳ್ಳಿ. ಸ್ನೇಹಿತರು, ಬಂಧುಗಳು ಮತ್ತು ಸಹೋದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸುವುದು ನಿಮ್ಮ ಸಾಮಾಜಿಕ ವೇದಿಕೆಯ ಮುಖ್ಯ ಉದ್ದೇಶವಾಗಿದ್ದರೆ ನಿಮ್ಮ ಪೋಸ್ಟ್‌ಗಳ ವ್ಯಾಪ್ತಿಯನ್ನು ಆ ಜನರಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಿ.
ನಿಮ್ಮ ಸಾಮಾಜಿಕ ವೇದಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸ್ವಲ್ಪಮಟ್ಟಿಗೆ ದೊಡ್ಡಸ್ತಿಕೆ ಬೆಳೆಸಿಕೊಳ್ಳಿ. ನಿಮ್ಮ ಖಾತೆಗೆ ನೀವೇ ಯಜಮಾನ ಎಂಬುದನ್ನು ಅರ್ಥೈಸಿಕೊಳ್ಳಿ. ನಿಮ್ಮ ಪಾಲಿಗೆ ಬಂದ ರಿಕ್ವೆಸ್ಟ್ಗಳನ್ನೆಲ್ಲ ಅಂಗೀಕರಿಸಬೇಡಿ. ಒಂದು ರಿಕ್ವೆಸ್ಟ್ನ ಒಳನುಸುಳುವಿಕೆಯಿಂದ ನಿಮ್ಮ ಸರ್ಕಲ್ಲಿನಲ್ಲಿರುವ ಎಲ್ಲರ ಮಾಹಿತಿಯನ್ನೂ ನೀವೇ ಬೆಳ್ಳಿತಟ್ಟೆಯಲ್ಲಿ ಇಟ್ಟುಕೊಟ್ಟಂತಾಗುತ್ತದೆ. ಹಾಗಾಗಿ ಅಂತಹ ಅಪಾಯದ ಬಗ್ಗೆಯೂ ಎಚ್ಚರಿಕೆ ವಹಿಸಿ. ನಿಮಗೆ ರಿಕ್ವೆಸ್ಟ್ ಕಳಿಸಿರುವ ವ್ಯಕ್ತಿ ನಿಮಗೆ ತಿಳಿದಿಲ್ಲದಿದ್ದರೆ, ಅವರು ನಿಮ್ಮ ಆಂತರಿಕ ವಲಯಕ್ಕೆ ಪ್ರವೇಶಿಸುವ ಅಗತ್ಯವಿಲ್ಲ ಎಂಬುದನ್ನುಅರಿತುಕೊಳ್ಳಿ.
ಇದೂ ನಿಮ್ಮ ವಿವೇಚನೆಯಲ್ಲಿರಲಿ: ನಿಮ್ಮ ಪ್ರಯಾಣ/ಪ್ರವಾಸದ ಯೋಜನೆಗಳು, ಕುಟುಂಬದ ವಿವರಗಳು, ಖರ್ಚು ಮಾಡುವ ಅಭ್ಯಾಸಗಳು ಅಥವಾ ಉತ್ಪನ್ನಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಇಡೀ ವಿಶ್ವಕ್ಕೆ ಡಂಗೂರ ಹೊಡೆಯಬೇಕು ಎಂಬ ಹಪಾಹಪಿ ಬೇಡ. ಅಂದರೆ ಸಾಮಾಜಿಕ ಜಾಲತಾಣದ ವೇದಿಕೆಗಳನ್ನು ಬಳಸುವುದರಿಂದ ನಿಮ್ಮ ಗೌಪ್ಯತೆಗೆ ಧಕ್ಕೆಯಾಗುತ್ತದೆ ಎಂಬುದನ್ನು ಅರಿತುಕೊಳ್ಳಿ. ಕೊನೆಯದಾಗಿ ಡೇಟಾ ಸಂಗ್ರಹಕಾರರು ನಿಮ್ಮ ಬಗ್ಗೆ ಎಂತಹ/ ಏನೆಲ್ಲಾ ಮಾಹಿತಿಯನ್ನು ಬಯಸುತ್ತಿದ್ದಾರೆ ಮತ್ತು ಯಾಕೆ ಎಂಬುದರ ಕಡೆ ನೀವು ಗಮನಹರಿಸಿದರೆ ಅದಕ್ಕೆ ತಕ್ಕಂತೆ ನೀವು ಮಾಹಿತಿ ಹಂಚಿಕೊಳ್ಳುವುದನ್ನು ನಿರಾಕರಿಸಬಹುದು.
ಲಾಗ್ ಔಟ್
ನೀವು Google ಅಥವಾ Facebook ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಲಾಗ್ ಇನ್ ಮಾಡಿದಾಗ, ಆ ಪ್ಲಾಟ್‌ಫಾರ್ಮ್ ಗಳು ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಮತ್ತು ನೀವು ಸೈನ್ ಇನ್ ಆಗಿರುವವರೆಗೆ, ಆ ಗಣಿಗಾರಿಕೆ/ ಬೇಹುಗಾರಿಕೆ ಮುಂದುವರಿಯುತ್ತದೆ. ನೀವು ಸೈಟ್ ತೊರೆದರೂ ಸಹ ಅವರು ಕಣ್ಗಾವಲು ಇಟ್ಟಿರುತ್ತಾರೆ. ಈ ಕಂಪನಿಗಳು ನಿಜವಾಗಿಯೂ ಡೇಟಾ ಮೈನಿಂಗ್ ಕಂಪನಿಗಳು. ಅವು ನಿಮ್ಮ ಪ್ರತಿ ಹೆಜ್ಜೆಯನ್ನು ಅನುಸರಿಸುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಆನ್‌ಲೈನ್ ಚಟುವಟಿಕೆಗಳಿಂದ ಎಷ್ಟು ಮಾಹಿತಿಯನ್ನು ಗಣಿಗಾರಿಕೆ ಮಾಡಲಾಗುತ್ತಿದೆ ಎಂಬುದರ ಮೇಲೆ ಇದು ನಿಜವಾದ ಪರಿಣಾಮ ಬೀರುತ್ತದೆ.
ಮೀಮ್‌ಗಳನ್ನು ತಪ್ಪಿಸಿ
ಡೇಟಾ ಗಣಿಗಾರಿಕೆ ಎಂದರೆ ಜಾಹೀರಾತುದಾರರು ನಿಮ್ಮ ಕುರಿತಾದ ಮಾಹಿತಿ/ವಿಷಯವನ್ನು ಥರ್ಡ್ ಪಾರ್ಟಿಗೆ ಮಾರಾಟ ಮಾಡುವ ಬಗ್ಗೆ ಅಷ್ಟೇ ಅಲ್ಲ. ಹಗಲು ದರೋಡೆ ಮಾಡುತ್ತಾ ನಿಮ್ಮನ್ನು ದೋಚಲು, ನಿಮ್ಮ ಗುರುತನ್ನು ಕದಿಯಲು ಬಳಸಬಹುದಾದ ದೊಡ್ಡ ವೆಪನ್ ಅದಾಗಿರುತ್ತದೆ. ಹೀಗೆ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸ್ಕ್ಯಾಮರ್‌ಗಳು ಶಸ್ತ್ರಸಜ್ಜಿತರಾಗಿ ಸದಾ ಸಿದ್ಧರಾಗಿರುತ್ತಾರೆ ಎಂಬುದನ್ನು ಅರಿತುಕೊಳ್ಳಿ.
ಫಿಶಿಂಗ್ ಮೀಮ್‌ಗಳಿಗೆ (phishing meme) ನೀವು ಪ್ರತಿಕ್ರಿಯಿಸುವುದಕ್ಕೆ ಹೊಂಚಿಹಾಕಿ ಕಾಯುತ್ತಿರುತ್ತಾರೆ. ಈ ಮೀಮ್‌ಗಳಂತೂ ನಿಜಕ್ಕೂ ಅಮಾಯಕ ಮೋಜಿನ ರಸಪ್ರಶ್ನೆಗಳಂತೆ ಕಾಣುತ್ತವೆ. ಅಲ್ಲಿ ನೀವು ಕೆಲವನ್ನು ತೋರಿಕೆಯ, ನಿರುಪದ್ರವಿ ಮೀಮ್ ಎಂದು ಭಾವಿಸಿಬಿಟ್ಟು ವೈಯಕ್ತಿಕ ಮಾಹಿತಿಯನ್ನು ಪೂರೈಸುತ್ತೀರಿ. ಅದಕ್ಕೆ ಪ್ರತಿಕ್ರಿಯೆಯಾಗಿ ನಗುವ ಎಮೋಜಿ ಸ್ವೀಕರಿಸುತ್ತೀರಿ. ಅಲ್ಲಿಗೆ ಪರಸ್ಪರ ಸಂಪರ್ಕ ಕೊಂಡಿ ಏರ್ಪಡುತ್ತದೆ. ಅದುವೇ ಸೈಬರ್ ಕ್ರೈಂಗಳಿಗೆ ಹೆಬ್ಬಾಗಿಲು ಆಗುವ ಅಪಾಯವಿರುತ್ತದೆ. ಹಾಗಾಗಿ ಈ ಅಪಾಯವನ್ನು ತಪ್ಪಸಿಬೇಕೆಂದರೆ ಪ್ರಜ್ಞಾಪೂರ್ವಕವಾಗಿ ನೀವು ಆ ಮೀಮ್‌ಗಳನ್ನು ದೂರವಿಡಿ. ಏಕೆಂದರೆ ಆ ಮೀಮ್ಗಿಂತ ನಿಮ್ಮ ಜೀವನದ ಭದ್ರತೆ ಮುಖ್ಯ ಅಲ್ಲವಾ!?
ತಾಂತ್ರಿಕ ಪರಿಹಾರೋಪಾಗಳು
ದತ್ತಾಂಶ ಗಣಿಗಾರಿಕೆ/ಬೇಹುಗಾರಿಕೆಗೆ ನಿಮ್ಮನ್ನು ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಿದೆ. ಆದೆ ಅದಕ್ಕೆ ಸ್ವಲ್ಪ ಹೆಚ್ಚು ಪ್ರಯತ್ನ ಪಡುವಸ ಅಗತ್ಯವಿದೆ. ಮಾರ್ಕೆಟಿಂಗ್‌ನ ಅನಪೇಕ್ಷಿತ ಕಪ್ಪು ಕುಳಿ ಸ್ವಾಹಾ ಮಾಡುವ ಮುನ್ನ ನಿಮ್ಮ ಡೇಟಾದ ಹರಿವನ್ನು ನಿಜವಾಗಿಯೂ ತಡೆಯುವ ವಿವಿಧ ಗೌಪ್ಯ ಪರಿಕರಗಳು ಅಸ್ತಿತ್ವದಲ್ಲಿವೆ. ಅದರ ಕಡೆ ಗಮನ ಕೊಡೋಣಾ:
Virtual Private Networks -VPN ಗಳು: ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳು ಗೌಪ್ಯತೆ ಕಾಪಾಡಲು ಉಪಯುಕ್ತವಾಗಿವೆ. ಏಕೆಂದರೆ ಅವು ನಿಮ್ಮ ಸ್ಥಳ ಮತ್ತು IP ವಿಳಾಸವನ್ನು ಅಸ್ಪಷ್ಟವಾಗಿಡುತ್ತದೆ. ಇದು ಡೇಟಾ ಗಣಿಗಾರಿಕೆ ಮಾಡುವವರಿಗೆ ಅವರು ಪಡೆಯುವ ಡೇಟಾವನ್ನು ಒಟ್ಟುಗೂಡಿಸಲು ಕಷ್ಟವಾಗುತ್ತದೆ. ನಿಮ್ಮ ಡೇಟಾವು ವ್ಯಾಪಕವಾಗಿ ನಾನಾ ಸ್ಥಳಗಳಿಂದ ಬಂದಂತೆ ತೋರುತ್ತಿರುವುದರಿಂದ, ನಿಮ್ಮ ಆದ್ಯತೆಗಳು ಮತ್ತು ಅಭ್ಯಾಸಗಳನ್ನೊಳಗೊಂಡ ಸುಸಂಬದ್ಧ ಪ್ರೊಫೈಲ್ ಅನ್ನು ನಿರ್ಮಿಸುವುದು ಅಸಾಧ್ಯವಾಗಿಬಿಡುತ್ತದೆ. ನಿಮ್ಮ ಕಂಪ್ಯೂಟರ್, ಮೊಬೈಲ್ ಡಿವೈಸ್ಗಳಲ್ಲಿ VPN ಅನ್ನು ಸ್ಥಾಪಿಸುವ ಮೂಲಕ ನಿಮ್ಮ ಖಾಸಗಿ ಮಾಹಿತಿ ಹಂಚಿಕೆಯಾಗುವುದನ್ನು ಕಡಿತಗೊಳಿಸಬಹುದು.
ಜಾಹೀರಾತು ಬ್ಲಾಕರ್‌ಗಳು: ನೀವು ಭೇಟಿ ನೀಡುವ ಪ್ರತಿಯೊಂದು ವೆಬ್‌ಸೈಟ್ ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ. ಮತ್ತು ನಿಮ್ಮ ಬಗ್ಗೆ ಡೇಟಾವನ್ನು ಸಂಗ್ರಹಿಸುತ್ತದೆ. ಇದರಿಂದ ಹೊರಬರಲು ಗೌಪ್ಯತೆ ಬ್ರೌಸರ್ ಅನ್ನು (privacy-focused browser) ಬಳಸುವುದು ಉಚಿತ ಮಾರ್ಗವಾಗಿದೆ. ಜಾಹೀರಾತು-ನಿರ್ಬಂಧಿಸುವ ಪ್ಲಗಿನ್‌ಗಳು ನಿಮ್ಮ ಬ್ರೌಸಿಂಗ್ ಅನುಭವವನ್ನು ಸುಗಮಗೊಳಿಸುತ್ತದೆ. ಜೊತೆಗೆ ಒಳನುಸುಳುವ ಡೇಟಾ ಸಂಗ್ರಹಕಾರರಿಂದ ನಿಮ್ಮನ್ನು ಪರಿಣಾಮಕಾರಿಯಾಗಿ ರಕ್ಷಿಸುತ್ತದೆ.
ಮತ್ತೊಂದು ಮಾರ್ಗವೆಂದರೆ ಅನಾಮಧೇಯರಾಗಿ ಅಂತರ್ಜಾಲದಲ್ಲಿ ಲೀಲಾಜಾಲವಾಗಿ ಜಾಲಾಡುವುದು ಅತ್ಯಂತ ಸುರಕ್ಷಿತ ಸಂಗತಿಯಾಗಿದೆ. ಕೊನೆಗೆ ಯಾವುದೂ ಸಾಧ್ಯವಾಗಿಲ್ಲ ಎನ್ನುವಾಗ ಸಾಧ್ಯವಾದಷ್ಟು ಸುರಕ್ಷಿತವಾಗಿಸಲು ನಿಮ್ಮ ಬ್ರೌಸರ್‌ನಲ್ಲಿ ಗೌಪ್ಯತೆಯ ಸೆಟ್ಟಿಂಗ್‌ಗಳನ್ನು ಸ್ಥಾಪಿಸಿಕೊಳ್ಳಿ.