ಪಿಎಸ್‌ಐ ಅಕ್ರಮದ ಆರೋಪಿಯಲ್ಲದ ಅಭ್ಯರ್ಥಿಗಳಿಗೆ ವಿಶೇಷ ಪರೀಕ್ಷೆ ಸಾಧ್ಯವಿಲ್ಲ; ಹೈಕೋರ್ಟ್​​ಗೆ ತಿಳಿಸಿದ ಸರ್ಕಾರ

| Updated By: ಗಣಪತಿ ಶರ್ಮ

Updated on: Jul 05, 2023 | 8:10 PM

ಸರ್ಕಾರದ ವರದಿ ಪರಿಶೀಲಿಸಿದ ಪೀಠವು ಹಾಗಾದರೆ, ಅರ್ಜಿಗಳನ್ನು ಅರ್ಹತೆ ಆಧಾರದಲ್ಲಿ ಜುಲೈ 10 ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಾಗುವುದು. ಈ ಬಗ್ಗೆ ಎಲ್ಲಾ ವಕೀಲರಿಗೂ ಲಿಖಿತ ವಾದ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.

ಪಿಎಸ್‌ಐ ಅಕ್ರಮದ ಆರೋಪಿಯಲ್ಲದ ಅಭ್ಯರ್ಥಿಗಳಿಗೆ ವಿಶೇಷ ಪರೀಕ್ಷೆ ಸಾಧ್ಯವಿಲ್ಲ; ಹೈಕೋರ್ಟ್​​ಗೆ ತಿಳಿಸಿದ ಸರ್ಕಾರ
ಹೈಕೋರ್ಟ್
Follow us on

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಅಕ್ರಮದಲ್ಲಿ (PSI Recruitment Scam) ಭಾಗಿಯಾರುವ 35 ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ವಿಶೇಷ ಪರೀಕ್ಷೆ ನಡೆಸಲು ಸಾಧ್ಯವಿಲ್ಲವೆಂದು ಸರ್ಕಾರ ಕರ್ನಾಟಕ ಹೈಕೋರ್ಟ್ ಗೆ  (Karnataka High Court) ತಿಳಿಸಿದೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ ಗೆ ಬುಧವಾರ ರಾಜ್ಯ ಸರ್ಕಾರ ಸಲ್ಲಿಸಿದೆ. ಇದನ್ನು ಪರಿಶೀಲಿಸಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಹತೆ ಆಧಾರದಲ್ಲಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಸೋಮವಾರ ನಡೆಸಲಾಗುವುದು ಎಂದು ಮೌಖಿಕವಾಗಿ ಹೇಳಿತು.

ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ಪಿಎಸ್ಐ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳ ಪೈಕಿ ಆರೋಪ ಎದುರಿಸುತ್ತಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ವಿಶೇಷ ಪರೀಕ್ಷೆ ನಡೆಸಲಾಗದು. ಆರೋಪಿಯಲ್ಲದವರ ಸಾಮರ್ಥ್ಯ ಅಳೆಯಲು ವಿಶೇಷ ಪರೀಕ್ಷೆ ಸಾಧ್ಯವಿಲ್ಲ. ಈ ಸಂಬಂಧ ಸರ್ಕಾರದ ಮಟ್ಟದಲ್ಲಿನ ಚರ್ಚೆಯ ವರದಿಯನ್ನು ನ್ಯಾಯಾಲಯಕ್ಕೆ ಗೌಪ್ಯವಾಗಿ ಸಲ್ಲಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ದುಡಿಯಲು ಸಮರ್ಥ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ; ಕರ್ನಾಟಕ ಹೈಕೋರ್ಟ್ ತೀರ್ಪು

ಸರ್ಕಾರದ ವರದಿ ಪರಿಶೀಲಿಸಿದ ಪೀಠವು ಹಾಗಾದರೆ, ಅರ್ಜಿಗಳನ್ನು ಅರ್ಹತೆ ಆಧಾರದಲ್ಲಿ ಜುಲೈ 10 ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಾಗುವುದು. ಈ ಬಗ್ಗೆ ಎಲ್ಲಾ ವಕೀಲರಿಗೂ ಲಿಖಿತ ವಾದ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ