ಬೆಂಗಳೂರು: ನಗರದ ಕೆ.ಆರ್.ಸರ್ಕಲ್ ಹಾಗೂ ಹಡ್ಸನ್ ಸರ್ಕಲ್ನಲ್ಲಿ ಕಾಂಗ್ರೆಸ್ ಅಳವಡಿಸಿದ ಟಿಪ್ಪು ಭಾವಚಿತ್ರ ಇದ್ದ ಫ್ಲೆಕ್ಸ್ ಅನ್ನು ರಾಷ್ಟ್ರ ರಕ್ಷಣಾ ಪಡೆ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಹರಿದು ಹಾಕಿದ್ದು, ಈ ಕೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರ ವಿವಾದ ಎಬ್ಬಿಸಿದ ಪ್ರತಿಕಾರವಾಗಿ ಕಾಂಗ್ರೆಸ್ ಪಕ್ಷ ಅಳವಡಿಸಿದ್ದ ಟಿಪ್ಪು ಭಾವಚಿತ್ರದ ಫ್ಲೆಕ್ಸ್ ಹರಿದು ಹಾಕಲಾಗಿದೆ. 8ರಿಂದ 10 ಮಂದಿಯ ತಂಡ ಈ ಕೃತ್ಯವನ್ನು ಎಸಗಿದ್ದಾರೆ.
ವಿಡಿಯೋದ ಮುಂದೆ ಮಾತನಾಡಿದ ಪುನೀತ್ ಕೆರೆಹಳ್ಳಿ, ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್ ಬ್ಯಾನರ್ ಹರಿದು ಹಾಕಲಾಗಿದೆ. ಇದರ ಪ್ರತಿಕಾರವಾಗಿ ಇಂದು ಟಿಪ್ಪು ಬ್ಯಾನರ್ ಹರಿದು ಹಾಕಲಾಗಿದೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಹೈಕೋರ್ಟ್ ಹೇಳಿದೆ. ಹೀಗಾಗಿ ಟಿಪ್ಪು ಬದಲಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರವನ್ನು ಹಾಕಿ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಡ್ಸನ್ ಸರ್ಕಲ್ ಮಾತ್ರವಲ್ಲ ಒಟ್ಟು ಎರಡು ಕಡೆಗಳಲ್ಲಿ ಬ್ಯಾನರ್ ಹರಿಯಲಾಗಿದೆ. ಪೊಲೀಸರ ಭದ್ರತೆ ನಡುವೆಯೂ ಈ ಕೃತ್ಯ ನಡೆದಿದೆ. ಕಾನೂನು ರೀತಿ ಕ್ರಮ ಕೈಗೊಳ್ಳೋದಾಗಿ ಪೊಲೀಸರು ಹೇಳಿದ್ದಾರೆ. ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಬೇರೆಯದ್ದಾಗಿರುತ್ತದೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ನಾವು ದೇಶಕ್ಕಾಗಿ ಹೋರಾಡಿದವರ ಚರಿತ್ರೆ ಓದಿದ್ದೇವೆ. ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರು ಕೂಡ ಬಂದು ಪಾಠ ಹೇಳಿದ್ದಾರೆ. ಆದರೆ ಇವತ್ತು ಟಿಪ್ಪು ಸುಲ್ತಾನ್ ಭಾವಚಿತ್ರ ಇರುವ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ನಾನು ಘಟನಾ ಸ್ಥಳಕ್ಕೆ ಬಂದು ನೋಡಿದ್ದೇನೆ. ಪೊಲೀಸರು ಕಾವಲು ನಡುವೆ ಹರಿದು ಹೋಗಿದ್ದಾರೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಭಾರತೀಯ ಪುರಾತತ್ವ ಇಲಾಖೆ ಟಿಪ್ಪು ಪ್ಯಾಲೆಸ್ ಅನ್ನು ದೀಪಾಲಂಕಾರ ಮಾಡಿದ್ದಾರೆ. ಆ ಮೂಲಕ ಸಂಭ್ರಮದಿಂದ ಅಮೃತಮಹೋತ್ಸವನ್ನು ಆಚರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಗೌರವದಿಂದ ಕಾಣುತ್ತಿದೆ. ಇಷ್ಟಿದ್ದರೂ ಈ ರೀತಿ ಮಾಡುತ್ತಿದ್ದಾರೆ ಅನ್ನೋದೆ ವಿಪರ್ಯಾಸ ಎಂದರು.
ಸಿಎಂ ಭೇಟಿಯಾದ ಗೃಹಸಚಿವರು
ಟಿಪ್ಪು ಬ್ಯಾನರ್ ಹರಿದು ಹಾಕಿದ ಪ್ರಕರಣ ಸಂಬಂಧ ಆರ್.ಟಿ.ನಗರದ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಪ್ರಕರಣದ ಮಾಹಿತಿ ಹಂಚಿಕೊಂಡು ಚರ್ಚೆ ನಡೆಸಿದರು. ಶಿವಮೊಗ್ಗದಲ್ಲಿ ಸಾವರ್ಕರ್ ಬ್ಯಾನರ್ ತಗೆಸಿರುವ ವಿಚಾರವನ್ನು ಕೂಡ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 am, Sun, 14 August 22