ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು: ಸ್ತ್ರೀ ಶಕ್ತಿ ಸಂಘಗಳಿಗೆ ಚೆಕ್ ವಿತರಿಸಿ, ಉಚಿತ ಸಲಹೆ ಕೊಟ್ಟ ಆರೋಗ್ಯ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯ ಬಡವರಿಗೆ 5 ಸಾವಿರ ಮತ್ತು ಗ್ರಾಮೀಣ ಪ್ರದೇಶದ ಬಡವರಿಗೆ 10 ಸಾವಿರ ಸೇರಿ ಒಟ್ಟು 15 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಲಾಗುವುದು. ಡಿಸೆಂಬರ್ ಅಂತ್ಯದೊಳಗೆ 15 ಸಾವಿರ ನಿವೇಶನಗಳನ್ನು ನೀಡುವ ಗುರಿ ಇದ್ದು, ನಂತರ ಎಲ್ಲರಿಗೂ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.

ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು: ಸ್ತ್ರೀ ಶಕ್ತಿ ಸಂಘಗಳಿಗೆ ಚೆಕ್ ವಿತರಿಸಿ, ಉಚಿತ ಸಲಹೆ ಕೊಟ್ಟ ಆರೋಗ್ಯ ಸಚಿವ ಸುಧಾಕರ್
ಸ್ತ್ರೀ ಶಕ್ತಿ ಸಂಘಗಳಿಗೆ ಚೆಕ್ ವಿತರಿಸಿದ ಆರೋಗ್ಯ ಸಚಿವ ಸುಧಾಕರ್
Follow us
TV9 Web
| Updated By: ಆಯೇಷಾ ಬಾನು

Updated on:Aug 13, 2022 | 8:24 PM

ಚಿಕ್ಕಬಳ್ಳಾಪುರ: ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ(Shri Shakti Sangha) ಸಾಲದ ಚೆಕ್ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್(Dr K Sudhakar), ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಸಬಲರಾದಲ್ಲಿ ಇಡೀ ಸಮಾಜವೇ ಸದೃಢವಾಗಿ ಮುಂದುವರಿಯಲು ಸಾಧ್ಯ, ಈ ನಿಟ್ಟಿನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಸಬಲರಾಗಿರುವ ಸಮಾಜ ಅತ್ಯಂತ ಬಲಿಷ್ಠ ಸಮಾಜವಾಗಲಿದೆ. ಹಾಗಾಗಿ ಪ್ರತಿಯೊಬ್ಬರೂ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು.

ಮಹಿಳೆಯರು ಉದ್ಯೋಗದಾತರಾಗಿ

ಪ್ರಸ್ತುತ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಜೊತೆಗೆ ರಾಜ್ಯ ಸರ್ಕಾರ ರಾಜ್ಯದ ಪ್ರತಿ ಗ್ರಾಮದ ಒಂದು ಸ್ತ್ರೀ ಶಕ್ತಿ ಸಂಘಕ್ಕೆ 1.5 ಲಕ್ಷ ಧನ ಸಹಾಯ ನೀಡುತ್ತಿದೆ. ಇಂತಹ ನೆರವು ಉಪಯೋಗಿಸಿಕೊಂಡು ಗುಡಿ ಕೈಗಾರಿಕೆಗಳ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಮಹಿಳೆಯರು ಮತ್ತೊಬ್ಬರಿಗೆ ಉದ್ಯೋಗ ನೀಡುವ ಶಕ್ತಿ ಪಡೆಯಬೇಕು ಎಂದರು.

ಯಾವುದೇ ಉದ್ದಿಮೆಗೆ ಬ್ಯಾಂಕುಗಳು ಬಡ್ಡಿ ರಹಿತವಾಗಿ ಸಾಲ ನೀಡುವುದಿಲ್ಲ. ಅಭಿವೃದ್ಧಿಗಾಗಿ ಸರ್ಕಾರಗಳು ಮಾಡುವ ಸಾಲಗಳಿಗೂ ಶೇ.6 ರಿಂದ 8ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಆದರೆ ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವ ಸಾಲಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಬಡ್ಡಿ ನೀಡಿ ಆರ್ಥಿಕ ಚೈತನ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮಹಿಳೆಯರ ಚೈತನ್ಯಕ್ಕಾಗಿ ಸ್ತ್ರೀ ಸಾಮರ್ಥ್ಯ

ರಾಜ್ಯದಲ್ಲಿ ಮಹಿಳೆಯರ ಸ್ವಾವಲಂಬನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಯೋಜನೆ ಜಾರಿಗೊಳಿಸಿದ್ದಾರೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ ಒಂದು ಸಂಘಕ್ಕೆ 1.5 ಲಕ್ಷ ಹಣ ನೀಡಲಾಗುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲ ಗ್ರಾಮಗಳ ತಲಾ ಒಂದು ಸಂಘಕ್ಕೆ 1.5 ಲಕ್ಷದಂತೆ ಹಣ ನೀಡಲಾಗುವುದು. ಇದರಿಂದ ಸಂಘಗಳ ಸದಸ್ಯರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗಲಿದೆ ಎಂದರು.

ಸ್ತ್ರೀ ಶಕ್ತಿ ಸಂಘಗಳ ಆಂಕರ್ ಬ್ಯಾಂಕ್ ಗಳ ಮೂಲಕ ಮಹಿಳೆಯರಿಗೆ ನಾನಾ ರೀತಿಯ ತರಬೇತಿ ನೀಡಿ, ಅವರು ಉತ್ಪಾದಿಸಿದ ವಸ್ತುಗಳಿಗೆ ಅಂತರ ರಾಜ್ಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ತೋಟದಿಂದ ಮಾರುಕಟ್ಟೆಗೆ ಎಂಬ ಗುರಿಯೊಂದಿಗೆ ಮಹಿಳೆಯರು ಮತ್ತು ರೈತರಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಮಹಿಳೆಯರ ಬಗ್ಗೆ ಅನುಕಂಪದ ಮಾತು ಆಡುವ ಬದಲು ಅವರಿಗೆ ಸ್ವಾವಂಲಂಬನೆಯ ಹಾದಿ ತೋರಿಸುವುದು ಮುಖ್ಯ ಎಂಬ ಉದ್ಧೇಶದೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಗ್ರಾಮೀಣ ಮಹಿಳೆಯರು ಅನಾದಿ ಕಾಲದಿಂದಲೂ ನೀರು ಹೊರುವ ಕ್ರಮ ಇಂದಿಗೂ ದೂರವಾಗಿಲ್ಲ. ಇದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ಜಲ್ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮದ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ನೀಡುವ ಕ್ರಮ ಕೈಗೊಂಡಿದ್ದಾರೆ. ಈ ಯೋಜನೆ ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಪ್ರಾರಂಭವಾಗಿದೆ, ಮಂಚೇನಹಳ್ಳಿ ತಾಲೂಕಿನ ಎಲ್ಲ ಗ್ರಾಮಗಳ, ಎಲ್ಲ ಮನೆಗಳಿಗೆ ನೀರು ತಲುಪಿಸಲಾಗುವುದು, ಜಿಲ್ಲೆಯಾದ್ಯಂತ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಚಿವರು ಭರವಸೆ ನೀಡಿದರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮಹಿಳೆಯರ ಸ್ವಾಭಿಮಾನ ಕಾಪಾಡುವ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಿವೆ. ದೇಶದಲ್ಲಿ ಸುಮಾರು 11 ಕೋಟಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದ್ದು, ತೀವ್ರ ಸಂಕಷ್ಟ ಎದುರಿಸುತ್ತಿದ್ದ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ಯಾಗದಂತೆ ಆತ್ಮಗೌರವದ ಜೀವನ ನಡೆಸಲು ಸಹಕಾರಿಯಾಗಿ ಕಾರ್ಯನಿರ್ವಹಿಸಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಹೊಗೆಯಲ್ಲಿ ಅಡುಗೆ ಮಾಡುವ ಸಂಕಷ್ಟದಿಂದ ಮಹಿಳೆಯರನ್ನು ಪಾರು ಮಾಡಲು ಉಜ್ವಲ ಯೋಜನೆ ತರಲಾಗಿದೆ. ಅಡುಗೆ ಅನಿಲ ಸಂಪರ್ಕವನ್ನು ಉಚಿತವಾಗಿ ನೀಡಲಾಗಿದೆ. ಪ್ರಧಾನಮಂತ್ರಿ ಅವಾಜ್ ಯೋಜನೆಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಸೂರು ಕಲ್ಪಿಸಬೇಕು ಎಂಬ ಸಂಕಲ್ಪ ಹೊಂದಲಾಗಿದೆ. ಆ ಮೂಲಕ ಎಲ್ಲ ಬಡವರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಕ್ಷೇತ್ರದಲ್ಲಿ 15 ಸಾವಿರಕ್ಕೂ ಹೆಚ್ಚು ನಿವೇಶನ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯ ಬಡವರಿಗೆ 5 ಸಾವಿರ ಮತ್ತು ಗ್ರಾಮೀಣ ಪ್ರದೇಶದ ಬಡವರಿಗೆ 10 ಸಾವಿರ ಸೇರಿ ಒಟ್ಟು 15 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಲಾಗುವುದು. ಡಿಸೆಂಬರ್ ಅಂತ್ಯದೊಳಗೆ 15 ಸಾವಿರ ನಿವೇಶನಗಳನ್ನು ನೀಡುವ ಗುರಿ ಇದ್ದು, ನಂತರ ಎಲ್ಲರಿಗೂ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.

ಕೊಳಚೆ ನಿರ್ಮೂಲನಾ ಮಂಡಳಿಯ ಸಹಯೋಗದಲ್ಲಿ 750 ಮನೆಗಳ ನಿರ್ಮಾಣಕಾರ್ಯ ಮುಗಿಯುತ್ತಿದ್ದು, ಶೀಘ್ರದಲ್ಲಿಯೇ ಈ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ 44 ಸ್ತ್ರೀ ಶಕ್ತಿ ಸಂಘಗಳಿಗೆ 1.96 ಕೋಟಿ ಮೊತ್ತದ ಚೆಕ್ ಗಳನ್ನು ಸಚಿವರು ವಿತರಿಸಿದರು. ಸಾಲ ಪಡೆಯುತ್ತಿರುವ ಮಹಿಳೆಯರು ಇದನ್ನು ಸದುಪಯೋಗಪಡಿಸಿಕೊಂಡು ತಮ್ಮ ದುಡಿಮೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಸಚಿವರು ಸಲಹೆ ನೀಡಿದರು.

Published On - 8:24 pm, Sat, 13 August 22