ಬೆಂಗಳೂರು, ಅಕ್ಟೋಬರ್ 26: ದಿವಂಗತ ನಟ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಉಪಗ್ರಹವನ್ನು (Puneeth satellite) 2024ರ ಮಾರ್ಚ್ನಲ್ಲಿ ಉಡಾವಣೆ ಮಾಡುವ ನಿರೀಕ್ಷೆ ಇದೆ. ರಾಜ್ಯದ ಸರ್ಕಾರಿ ಶಾಲಾ ಮಕ್ಕಳು ನಿರ್ಮಿಸಿರುವ ಪುನೀತ್ ಉಪಗ್ರಹ ಉಡಾವಣೆಗೆ ಮಾರ್ಚ್ 2024 ರ ತಿಂಗಳಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಅವಕಾಶ ನೀಡುವ ಸಾಧ್ಯತೆ ಇದ್ದು, ಇಸ್ರೋ ಜೊತೆ ಸತತ ಸಂಪರ್ಕದಲ್ಲಿರುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ಎಸ್ ಭೋಸರಾಜು (NS Boseraju) ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ಪುನೀತ್ ಉಪಗ್ರಹ ಯೋಜನೆಯ ಪ್ರಗತಿ ಕುರಿತು ನಡೆದ ಸಭೆಯಲ್ಲಿ ಸಚಿವರು ಈ ಸೂಚನೆ ನೀಡಿದ್ದಾರೆ. ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ಸದಸ್ಯರೊಂದಿಗೆ ಸಭೆ ನಡೆಸಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಬಾಹ್ಯಾಕಾಶ ಶಿಕ್ಷಣ ಕ್ರಾಂತಿ: ಮುಂದಿನ ದಶಕದಲ್ಲಿ ಬಾಹ್ಯಾಕಾಶ ಉದ್ಯಮದಲ್ಲಿ ಗಣನೀಯ ಬೆಳವಣಿಗೆ ಸಾಧ್ಯತೆ
ಕರ್ನಾಟಕ ವಿಜ್ಞಾನ, ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದೊಂದಿಗೆ ಭಾರತೀಯ ಉಪಗ್ರಹ ಸಂಶೋಧನಾ ಸಂಸ್ಥೆ ಮತ್ತು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ನಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ಯೂಬ್‌ಸ್ಯಾಟ್ ಸಬ್‌ಸಿಸ್ಟಮ್ಸ್ ವಿಷಯದಲ್ಲಿ ತರಬೇತಿ ನೀಡಲಾಗಿದೆ. ಪುನೀತ್ ಸ್ಯಾಟಲೈಟ್‌ನ ಮೂಲಕ ಕಳುಹಿಸಲಾಗುವ ಸೆಕಂಡರಿ ಪ್ಲೇಲೋಡ್ಗಳನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ. ಸದ್ಯ ಕ್ಯೂಬ್‌ಸ್ಯಾಟ್ ಸಬ್‌ಸಿಸ್ಟಮ್ಸ್ ನ ಪ್ರೊಟೋಟೈಪ್ ಇವಾಲ್ಯೂವೇಷನ್ ಬೋರ್ಡ್ಸ್‌ಗಳ ವ್ಯಾಲಿಡೇಷನ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಐಟಿಸಿಎ ತಂಡದಿಂದ ಮಾರ್ಚ್ 2024 ರಲ್ಲಿ ಪುನೀತ್ ಸ್ಯಾಟ್ ಉಡಾವಣೆ ಸಾಧ್ಯ ಎನ್ನುವ ಮಾಹಿತಿ ದೊರೆತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ