ರಾಯಚೂರು: ನೀರಾವರಿ ಇಲಾಖೆ ಮೇಲೆ ದಾಳಿ ನಡೆಸಿದ್ದ ವೇಳೆ ನಾಲ್ವರು ಇಂಜಿನಿಯರ್ಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ವೇಳೆ ತಮಗೆ ಎದೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಎಇಗಳ ಅನಾರೋಗ್ಯದ ನಾಟಕವನ್ನು ವೈದ್ಯರು ಬಯಲಿಗೆಳೆದಿದ್ದಾರೆ. ಎಸ್ಇ ಸೂರ್ಯಕಾಂತ್, ಎಇಇ ನರಸಿಂಹರಾವ್ ದೇಶಪಾಂಡೆ, ಎಇಗಳಾದ ಭಾವನಾ, ತುಕಾರಾಂ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಇದರಲ್ಲಿ ಭಾವನಾ, ತುಕಾರಾಮ್ ಅವರ ಅನಾರೋಗ್ಯದ ನಾಟಕವನ್ನು ರಿಮ್ಸ್ ಆಸ್ಪತ್ರೆ ವೈದ್ಯರು ಬಯಲು ಮಾಡಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ನೀರಾವರಿ ಇಲಾಖೆ ಮೇಲೆ ದಾಳಿ ನಡೆಸಲಾಗಿತ್ತು.
ಇಲಾಖೆಯ ಅಧಿಕಾರಿಗಳು ಮಹಾ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಅಟೆಂಡರ್ ಅವರಿಂದ ಹಿಡಿದು ಸುಪರಿಡೆಂಟ್ ಇಂಜಿನಿಯರ್ವರೆಗೂ ಹಣ ಕೊಡಲೇಬೇಕು. ಟೇಬಲ್ ಪ್ರಕಾರ ಲಂಚ ನೀಡಲೇಬೇಕು ಎಂದು ಲೇಬರ್ ಕಾಂಟ್ರಾಕ್ಟರ್ ಈಶ್ವರಯ್ಯಗೆ ಅಧಿಕಾರಿಗಳು ನಿತ್ಯ ಕಿರುಕುಳ ನೀಡಿದ್ದರು. ಹಣ ಕೊಡದಿದ್ದರೆ ಪೈಲ್ ಅನ್ನು ಮುಂದಕ್ಕೆ ಕಳುಹಿಸುವುದಿಲ್ಲ, ಏನ್ ಮಾಡ್ಕೋತಿರಾ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕುತ್ತಿದ್ದರು. ಅದರಂತೆ ಹಣ ಪಾವತಿಸುವಂತೆ ಅಧಿಕಾರಿಗಳು ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನ ಲೇಬರ್ ಬಿಲ್ ಬಾಕಿ ಉಳಿಸಿದ್ದರು. ದುಡ್ಡು ಕೊಟ್ಟರೆಷ್ಟೇ ಬಿಲ್ ಕ್ಲಿಯರ್ ಮಾಡುತ್ತೇವೆ ಎಂದಿದ್ದಾರೆ.
ಸಿಂಧನೂರು ತಾಲ್ಲೂಕಿನ ಸಿಂಧನೂರು ಉಪಕಾಲುವೆ ನೀರು ನಿರ್ವಹಣೆ ಕಾರ್ಯದ ಲೇಬರ್ ಬಿಲ್ ಕುರಿತು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಸೂಪರಿಡೆಂಟ್ ಇಂಜಿನಿಯರ್ ಸೂರ್ಯಕಾಂತ್ 10 ಸಾವಿರ ರೂ. ಲಂಚ, ಎಇಇ ನರಸಿಂಹ ರಾವ್ ದೇಶಪಾಂಡೆಗೆ 8 ಸಾವಿರ, ಎಇ ಭಾವನಾ ಹಾಗೂ ಎಇ ತುಕಾರಾಮ್ಗೆ ತಲಾ 5 ಸಾವಿರ ನೀಡಲಾಗುತ್ತಿತ್ತು. ನಿತ್ಯ ಇಂತಿಷ್ಟು ಹಣ ಅಂತ ಜೇಬು ತುಂಬಿಸಿಕೊಂಡೇ ಅಧಿಕಾರಿಗಳು ಮನೆಗೆ ತೆರಳುತ್ತಿದ್ದರು.
ಮನಸೋ ಇಚ್ಛೆ ಹಣ ಪೀಕುತ್ತಿದ್ದ ಭಾವನಾ, ನರಸಿಂಹ ರಾವ್ ಮತ್ತಿತರ ಭ್ರಷ್ಟರಿಗೆ ಬುದ್ದಿ ಕಲಿಸಲೇಬೇಕು ಎಂದು ಈಶ್ವರಯ್ಯ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ರಾಯಚೂರು ನೀರಾವರಿ ಇಲಾಖೆ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ನಾಲ್ಕು ಜನ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Sat, 12 November 22