ಮಹಾ ಮಳೆಯ ನಂತರ ಮತ್ತೊಂದು ಸಂಕಷ್ಟದಲ್ಲಿ ಹತ್ತಿ ಬೆಳೆಗಾರರು

| Updated By: Rakesh Nayak Manchi

Updated on: Nov 07, 2022 | 12:13 PM

ಉತ್ತಮ ಬೆಲೆ ಇದ್ದಾಗಲೇ ಮಹಾ ಮಳೆಗೆ ಹೊಡೆತ ತಿಂದಿದ್ದ ಹತ್ತಿ ಬೆಳೆಗಾರರು ಇದೀಗ ಕೂಲಿ ಕಾರ್ಮಿಕರ ಕೊರತೆ, ಬೆಲೆಯ ಸಮಸ್ಯೆಯಿಂದ ಕಂಗಾಲಾಗಿದ್ದಾರೆ.

ಮಹಾ ಮಳೆಯ ನಂತರ ಮತ್ತೊಂದು ಸಂಕಷ್ಟದಲ್ಲಿ ಹತ್ತಿ ಬೆಳೆಗಾರರು
ಸಂಕಷ್ಟದಲ್ಲಿ ಹತ್ತಿ ಬೆಳೆಗಾರರು
Follow us on

ರಾಯಚೂರು: ಈ ವರ್ಷ ಉತ್ತಮ ಬೆಲೆ ಇದ್ದ ಹಿನ್ನೆಲೆ ಜಿಲ್ಲೆಯಾದ್ಯಂತ ರೈತರು ಅತೀ ಹೆಚ್ಚು ಹತ್ತಿ ಬೆಳೆಯನ್ನು ಬೆಳೆದಿದ್ದರು. ರಾಯಚೂರು ತಾಲ್ಲೂಕಿನಲ್ಲಿ 74980 ಹೆಕ್ಟರ್, ದೇವದುರ್ಗ ತಾಲ್ಲೂಕಿನಲ್ಲಿ 74963 ಹೆಕ್ಟರ್, ಸಿಂಧನೂರಿನಲ್ಲಿ 5153 ಹೆಕ್ಟೇರ್, ಲಿಂಗಸುಗೂರಿನಲ್ಲಿ 3189 ಹೆಕ್ಟರ್, ಸಿರವಾರ 15120 ಹೆಕ್ಟೇರ್ ಹಾಗೂ ಮಸ್ಕಿಯಲ್ಲಿ‌ 6473 ಹೆಕ್ಟರ್ ಸೇರಿ ಜಿಲ್ಲೆಯಾದ್ಯಂತ ಒಟ್ಟು 2 ಲಕ್ಷ 6 ಸಾವಿರ ಹೆಕ್ಟೇರ್ ಪ್ರದೇಶಲ್ಲಿ ಹತ್ತಿ ಬೆಳೆಯಲಾಗಿತ್ತು. ಉತ್ತಮ ಬೆಲೆ, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆರಾಯ ಹೊಡೆತ ನೀಡಿದ. ಹೀಗಾಗಿ ಭರ್ಜರಿಯಾಗಿ ಬೆಳೆದಿದ್ದ ಹತ್ತಿ ಬೆಳೆ‌ ನೆಲ ಕಚ್ಚಿತ್ತು.

ಈ ಮಧ್ಯೆ ಉಳಿದ ಅಲ್ಪ ಬೆಳೆಯನ್ನ ಕಾಪಾಡಿಕೊಂಡಿದ್ದ ರೈತರು ಹತ್ತಿ ಬಿಡಿಸಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಆದರೆ ಈ ಮಧ್ಯೆ ರೈತರು ಕೂಲಿಕಾರರ ಕೊರತೆ ಎದುರಿಸಲು ಆರಂಭಿಸಿದ್ದಾರೆ. ಕೂಲಿಗಳ ಸಮಸ್ಯೆ ಎದುರಾರದ ಹಿನ್ನೆಲೆ ರೈತರು ಆಂಧ್ರಪ್ರದೇಶ, ತೆಲಂಗಾಣದಿಂದ ಕೂಲಿ‌ಕಾರರನ್ನ ಕರೆತರಲಾಗುತ್ತಿದೆ. ಕೂಲಿಕಾರರು ಒಂದು ಕೆಜಿ ಹತ್ತಿ ಬಿಡಿಸಲು ಸುಮಾರು‌10 ರೂ. ಪಡೀತಾರೆ. ಜೊತೆಗೆ ಅವರನ್ನ ಕರೆತರಲು ಆಟೋಗಳಿಗೆ ದಿನಕ್ಕೆ‌ 1,500 ಬಾಡಿಗೆ ನೀಡಬೇಕು. ಹೀಗಾಗಿ ಹತ್ತಿ ಬೆಳೆದ ರೈತರು ಈ ಬಾರಿ ಕೂಲಿಕಾರರ ಸಮಸ್ಯೆಯಿಂದ ಕಂಗಾಲಾಗಿದ್ದಾರೆ.

ಇದಷ್ಟೇ ಅಲ್ಲ ಮಳೆ ಹೊಡೆತಕ್ಕೆ ಬೆಳೆ ಹಾನಿ ಅನುಭವಿಸಿದ್ದ ರೈತರು ಈಗ ಸೂಕ್ತ ದರವಿಲ್ಲದೇ ಕಂಗಾಲಾಗಿದ್ದಾರೆ. ಮಿಲ್​ಗಳಲ್ಲಿ ಒಂದು ದರ, ಎಪಿಎಂಸಿಗಳಲ್ಲೊಂದು ದರ ಇದೆ. ದಿನದಿಂದ ದಿನಕ್ಕೆ ಹತ್ತಿ ಬೆಲೆ ಕುಸಿಯುತ್ತಿರುವ ಆರೋಪ ಕೇಳಿ ಬಂದಿದೆ. ಜೊತೆಗೆ ಹತ್ತಿ ಮಾರುಕಟ್ಟೆಯಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಕ್ವಿಂಟಲ್​ಗೆ 100 ರೂ., 200 ರೂ. ಕಡಿತ ಮಾಡಲಾಗುತ್ತಿದೆಯಂತೆ.

ಮಾರುಕಟ್ಟೆಯಲ್ಲಿ ವಾಹನಗಳಿಂದ ಅರ್ಧ ಹತ್ತಿ ಕೆಳಗಿಳಿಸಿ ದರದಲ್ಲಿ ಹೆಚ್ಚು ಕಡಿಮೆ ಮಾಡಲಾಗುತ್ತಿದೆ. ತಾವು ತಂದ ಬೆಲೆಯನ್ನು ವಾಪಸ್ ಕೊಂಡೊಯ್ಯಲಾಗದೆ ವಿಧಿಯಿಲ್ಲದೆ ಅವರು ಹೇಳುವ ದರಕ್ಕೆ ಮಾರಾಟ ಮಾಡಿ ಬೇಸರದಲ್ಲೇ ಮನೆ ಸೇರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಅಂತ ರೈತ ಮುಖಂಡ ಲಕ್ಷ್ಮಣಗೌಡ ಒತ್ತಾಯಿಸಿದ್ದಾರೆ. ಏನೇ ಇರಲಿ ಈ ಬಾರೀ ಒಳ್ಳೆ ಆದಾಯದ ನಿರೀಕ್ಷೆಯಲ್ಲಿದ್ದ ಹತ್ತಿ ಬೆಳೆದ ರೈತರು ಮಳೆಯ ನಂತರ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಿದೆ.

ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Mon, 7 November 22