ವಿಜಯಪುರ: ಹರನಾಳ ಗ್ರಾಮ ಸ್ಥಳಾಂತರ ಮಾಡದಿದ್ದರೆ ಚುನಾವಣೆ ಬಹಿಷ್ಕಾರ
ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಳ್ಳುವ ಹರನಾಳ ಗ್ರಾಮದ ಜನರು ಧಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮವನ್ನು ಸ್ಥಳಾಂತರ ಮಾಡದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ವಿಜಯಪುರ: ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು ಜಿಲ್ಲೆಯ ತಿಕೋಟಾ ತಾಲೂಕಿನ ಹರನಾಳ ಗ್ರಾಮದ ಜನರು ಜೀವನನ್ನು ಕೈಲಿ ಹಿಡಿದುಕೊಂಡು ಬದುಕುತ್ತಾರೆ. ಯಾವಾಗ ಡೋಣಿ ನದಿಯ ನೀರು ಗ್ರಾಮಕ್ಕೆ ನುಗ್ಗಿ ಅಪಾರ ಹಾನಿಗೆ ಕಾರಣವಾಗುತ್ತದೆಯೋ? ಎಲ್ಲಿ ಮನೆಗೆ ನೀರು ನುಗ್ಗಿ ಅವಾಂತರ ಮಾಡುತ್ತದೆಯೋ ಎಂಬ ಆತಂಕದಲ್ಲೇ ಕಾಲ ಕಳೆಯುತ್ತಾರೆ. ಪ್ರತಿಬಾರಿ ಮಳೆಗಾಲದ ಈ ಸಮಸ್ಯೆಗೆ ಈ ಬಾರಿ ಪರಿಹಾರ ಸಿಗುವ ಸಾದ್ಯತೆಯಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿ. ಉಮೇಶ ಕತ್ತಿ ಪ್ರವಾಹ ಉಂಟಾದ ಸಮಯದಲ್ಲಿ ಭೇಟಿ ನೀಡಿದ್ದಾಗ ಸ್ಥಳಾಂತರದ ಭರವಸೆ ನೀಡಿದ್ದರು. ಆದರೆ ಅವರು ನಿಧನ ಹೊಂದಿದ ನಂತರ ಸಮಸ್ಯೆಗೆ ಪರಿಹಾರ ಸಿಗುವುದು ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಇಲ್ಲಿನ ನಮ್ಮ ಸಮಸ್ಯೆಗೆ ಪರಿಹಾರ ನೀಡಿದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಹಾಕುವ ನಿರ್ಧಾರವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ.
ಡೋಣಿ ನದಿಯ ಪ್ರವಾಹಕ್ಕೆ ಹರನಾಳ ಗ್ರಾಮದ ಜನರು ಹೈರಾಣಾಗಿದ್ದಾರೆ. ಪ್ರತಿ ವರ್ಷದ ಮಳೆಗಾಲದಲ್ಲಿ ಜಿಲ್ಲೆಯ ತಿಕೋಟಾ ತಾಲೂಕಿನ ಹರನಾಳ ಗ್ರಾಮದಲ್ಲಿ ಡೋಣಿ ನದಿಯ ಪ್ರವಾಹ ಸಮಸ್ಯೆಗೆ ಕಾರಣವಾಗಿದೆ. 2008-09 ರಲ್ಲಿ ಭೀಕರ ಪ್ರವಾಹಕ್ಕೆ ಡೋಣಿ ನದಿ ಈಡಾಗಿತ್ತು. ಜಿಲ್ಲೆಯ ಐದು ತಾಲೂಕುಗಳಲ್ಲಿ ಹರಿದು ಕೃಷ್ಣಾ ನದಿಯನ್ನು ಸೇರುವ ಡೋಣಿ ನದಿ ಕಣ್ಣೀರಿನ ನದಿಯೆಂದೇ ಕುಖ್ಯಾತಿಗೆ ಪಾತ್ರವಾಗಿದೆ. 2008-09 ರಿಂದ ಪ್ರತಿ ವರ್ಷ ಡೋಣಿ ನದಿಯ ಪ್ರವಾಹ ಇದ್ದೇ ಇರುತ್ತದೆ. ಹೀಗಾಗಿ ಅಂದು ಆಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಜಿಲ್ಲೆಯ 28 ಗ್ರಾಮಗಳನ್ನು ಸ್ಥಳಾಂತರ ಮಾಡಿ ಆದೇಶಿಸಿತ್ತು. ಅದರಂತೆ ಹಲವಾರು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿತ್ತು. ಆದರೆ ಸ್ಥಳಾಂತರದ ಪಟ್ಟಿಯಲ್ಲಿ ಹರನಾಳ ಗ್ರಾಮದ ಹೆಸರು ಇರಲಿಲ್ಲ.
ಮಳೆಗಾಲದಲ್ಲಿ ಡೋಣಿ ನದಿಯ ಕೋಪಕ್ಕೆ ಹರನಾಳ ಗ್ರಾಮ ಹಾಗೂ ಗ್ರಾಮದ ರೈತರ ಜಮೀನುಗಳು ಈಡಾಗುತ್ತಲೇ ಬಂದಿತ್ತು. ಆದರೂ ಸಹ ಆಡಳಿತದಲ್ಲಿದ್ದ ಸರ್ಕಾರಗಳು ಹರನಾಳ ಗ್ರಾಮವನ್ನು ಸ್ಥಳಾಂತರ ಮಾಡುವ ಮನಸ್ಸು ಮಾಡಿರಲಿಲ್ಲ. ಈ ಬಾರಿ 2021ರಲ್ಲಿ ಹಾಗೂ 2022 ರಲ್ಲಿಯೂ ಮತ್ತದೇ ಪ್ರವಾಹ ಹರನಾಳ ಗ್ರಾಮವನ್ನು ಹೈರಾಣಾಗಿಸಿತ್ತು. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಉಮೇಶ ಕತ್ತಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆಗ ಹರನಾಳ ಗ್ರಾಮವನ್ನು ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದ್ದರು. ಇನ್ನಾದರೂ ನಮ್ಮ ಸಮಸ್ಯೆ ಬಗೆ ಹರಿಯುತ್ತದೆ. ಡೋಣಿ ನದಿಯಿಂದ ಉಂಟಾಗುವ ಪ್ರವಾಹದಿಂದ ಮುಕ್ತಿ ಸಿಗುತ್ತದೆ ಎಂದು ಇಲ್ಲಿನ ಜನರು ಭರವಸೆ ಇಟ್ಟುಕೊಂಡಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರ ನಿಧನದಿಂದ ಮತ್ತೆ ಹರನಾಳ ಗ್ರಾಮದ ಜನರಲ್ಲಿ ನಿರಾಸೆ ಮೂಡಿದೆ.
ಕಳೆದ 14 ವರ್ಷಗಳಿಂದ ಹರನಾಳ ಗ್ರಾಮದಲ್ಲಿ ಡೋಣಿ ನದಿಯ ಪ್ರವಾಹ ಮಾಡಿದ್ದು ಬರೀ ಹಾನಿಯಾಗಿದೆ. ಮಳೆ ಬಂದರೆ ಸಾಕು ಮನೆಗೆ ನೀರು ನುಗ್ಗುವುದು ಖಾತರಿ. ಡೋಣಿ ನದಿಯ ತಟದಲ್ಲೇ ಇರುವ ಹರನಾಳ ಗ್ರಾಮ ಸ್ಥಳಾಂತರವಾದರಎ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ. ನದಿ ನೀರು ಗ್ರಾಮದ ಕೃಷಿ ಭೂಮಿಗೂ ಸಹ ಬಾಧೆಯಾಗಿದೆ. ಹೆಚ್ಚಾಗಿ ತರಕಾರಿ ಹಾಗೂ ಆರ್ಥಿಕ ಬೆಳೆಗಳನ್ನು ಬೆಳೆಯುವ ಹರನಾಳ ಗ್ರಾಮದ ಜನರು ಹೆಚ್ಚು ಕೃಷಿಯನ್ನೇ ನಂಬಿಕೊಂಡು ಬಂದವರು. 100ಕ್ಕೂ ಆಧಿಕ ಮನೆಗಳು ಇರುವ ಪುಟ್ಟ ಗ್ರಾಮವನ್ನು ಸ್ಥಳಾಂತರ ಮಾಡುವುದು ಸರ್ಕಾರಕ್ಕೆ ದೊಡ್ಡ ಕೆಲಸವಲ್ಲಾ.
ಸತತ ಸಮಸ್ಯೆಗಳನ್ನು ಜೊತೆಗಿಟ್ಟುಕೊಂಡು ಇಲ್ಲಿಯವರೆಗೆ ವರ್ಷಗಳನ್ನು ಕಳೆದಿದ್ದೇವೆ. ಈ ಬಾರಿಯಾದರೂ ನಮ್ಮ ಬೇಡಿಕೆ ಈಡೇರಿಸಬೇಕು. ಸ್ಥಳಾಂತರ ಮಾಡಲು ಸರ್ಕಾರ ಆದೇಶ ಜಾರಿ ಮಾಡಿ ಸ್ಥಳಾಂತರ ಪ್ರಕ್ರಿಯೆ ಆರಂಭಿಸಬೇಕೆಂದು ಜನರು ಪಟ್ಟು ಹಿಡಿದಿದ್ದಾರೆ. ಇಲ್ಲವಾದರೆ ಮುಂದಿನ 2023ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ನಾವು ಮತದಾನ ಮಾಡಬೇಕೆಂದರೆ ನಮ್ಮೂರನ್ನು ಸ್ಥಳಾಂತರ ಮಾಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಈ ಕುರಿತು ಸಂಬಂಧಿಸಿದ ಆಧಿಕಾರಿಗಳು, ಸಚಿವರು ಹಾಗೂ ಸರ್ಕಾರ ಗಮನ ಹರಿಸಬೇಕಿದೆ. ಪುಟ್ಟ ಗ್ರಾಮವನ್ನು ಸ್ಥಳಾಂತರ ಮಾಡುವುದು ಸಹ ಸರ್ಕಾರಕ್ಕೆ ಕಷ್ಟದ ಕೆಲಸವಲ್ಲ. 100ಕ್ಕೂ ಆಧಿಕ ಮನೆಗಳು ಇರುವ ಹರನಾಳ ಗ್ರಾಮವನ್ನು ಕೂಡಲೇ ಸ್ಥಳಾಂತರ ಮಾಡಲು ಮುಂದಾಗಬೇಕಿದೆ. ಇಲ್ಲವಾದರೆ ಇಡೀ ಗ್ರಾಮ ಮುಂದಿನ ವಿಧಾನಸಭಾ ಚುನಾವಣೆ ಹಾಗೂ ಇತರೆ ಚುನಾವಣೆಗಳನ್ನು ಬಹಿಷ್ಕಾರ ಹಾಕುವುದು ಖಂಡಿತ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ