Mantralaya: ಮಂತ್ರಾಲಯ ಮಠದಲ್ಲಿಂದು ರಾಯರ ಮಧ್ಯಾರಾಧನೆ: ಶೇಷ ವಸ್ತ್ರದೊಂದಿಗೆ ಪ್ರದಕ್ಷಿಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 13, 2022 | 8:33 AM

ತಿರುಪತಿಯಿಂದ ಮಂತ್ರಾಲಯಕ್ಕೆ ಶೇಷ ವಸ್ತ್ರ ಆಗಮಿಸಲಿದ್ದು, ಶ್ರೀಮಠ ಮುಖ್ಯ ದ್ವಾರದಿಂದ ವಾದ್ಯ ಮೆರವಣಿಗೆಯೊಂದಿಗೆ ಶೇಷ ವಸ್ತ್ರಕ್ಕೆ ಸ್ವಾಗತಿಸಲಾಗುತ್ತದೆ. ಪ್ರಾಂಗಣದಲ್ಲಿ ಶೇಷ ವಸ್ತ್ರದೊಂದಿಗೆ ಪ್ರದಕ್ಷಿಣೆ ಹಾಕಲಾಗುತ್ತದೆ.

Mantralaya: ಮಂತ್ರಾಲಯ ಮಠದಲ್ಲಿಂದು ರಾಯರ ಮಧ್ಯಾರಾಧನೆ: ಶೇಷ ವಸ್ತ್ರದೊಂದಿಗೆ ಪ್ರದಕ್ಷಿಣೆ
ಮಂತ್ರಾಲಯ ಮಠದಲ್ಲಿಂದು ರಾಯರ ಮಧ್ಯಾರಾಧನೆ (ಸಂಗ್ರಹ ಚಿತ್ರ)
Follow us on

ರಾಯಚೂರು: ಯತಿ ಕುಲ ತಿಲಕ ಮಂತ್ರಾಲಯದ (Mantralaya) ಶ್ರೀರಾಘವೇಮದ್ರ ರಾಯರ 351ನೇ ಆರಾಧನಾ ಸಂಭ್ರಮದ ನಾಲ್ಕನೇ ದಿನವಾದ ಇಂದು ಮಂತ್ರಾಲಯ ಮಠದಲ್ಲಿ ರಾಯರ ಮಧ್ಯಾರಾಧನೆ ನಡೆಯಲಿದೆ. ಮಧ್ಯಾರಾಧನೆ ನಿಮಿತ್ಯ ಶ್ರೀಮಠದಲ್ಲಿ ವಿಶೇಷ ಪೂಜೆಗೆ ಸಲಕ ಸಿದ್ಧತೆ ಮಾಡಿದ್ದು, ನಿರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ನಡೆಯಲಿದೆ. ತಿರುಪತಿಯಿಂದ ಮಂತ್ರಾಲಯಕ್ಕೆ ಶೇಷ ವಸ್ತ್ರ ಆಗಮಿಸಲಿದ್ದು, ಶ್ರೀಮಠ ಮುಖ್ಯ ದ್ವಾರದಿಂದ ವಾದ್ಯ ಮೆರವಣಿಗೆಯೊಂದಿಗೆ ಶೇಷ ವಸ್ತ್ರಕ್ಕೆ ಸ್ವಾಗತಿಸಲಾಗುತ್ತದೆ. ಪ್ರಾಂಗಣದಲ್ಲಿ ಶೇಷ ವಸ್ತ್ರದೊಂದಿಗೆ ಪ್ರದಕ್ಷಿಣೆ ಹಾಕಲಾಗುತ್ತದೆ. ಆ ಬಳಿಕ ರಾಯರ ಮೂಲ ಬೃಂದಾವನಕ್ಕೆ ಶೇಷ ವಸ್ತ್ರ ಸಮರ್ಪಣೆಯಾಗುತ್ತದೆ. ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ ನೆರವೇರಲಿದ್ದು,  ಪ್ರಾಂತ ಕಾಲದಲ್ಲಿ ಸುವರ್ಣ ರಥೋತ್ಸವ ‌ನಡೆಯುವುದು. ಮೂಲರಾಮ ದೇವರ ಪೂಜೆ, ಆ ಬಳಿಕ ಶ್ರೀಮಠದಿಂದ ಪ್ರಸಾದ ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Mantralaya: ಮಂತ್ರಾಲಯದಲ್ಲಿ ಇಂದು ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ, ಹರಿದು ಬಂದ ಜನಸಾಗರ

ಮಂಗಳಾರತಿ ನಂತರ ಉಯ್ಯಾಲೆ ವೇದಿಕೆ ಬಳಿ ಟಿಟಿಡಿ ಸದಸ್ಯರಿಗೆ ಶ್ರೀಮಠದಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಯೋಗಿಂದ್ರ ಮಂಟಪದಲ್ಲಿ ಅನುಗ್ರಹ ಪ್ರಶಸ್ತಿ ವಿತರಿಸಲಾಗುವುದು. ಶ್ರೀಮಠದ ಪ್ರಾಂಗಣದಲ್ಲಿ ವಿಶೇಷ ಉತ್ಸವಗಳು, ನವರತ್ನ ರಥೋತ್ಸವ ಜೊತೆಗೆ ಪಲ್ಲಕ್ಕಿ ವಾಹನ ಉತ್ಸವ ನಡೆಯಲಿದ್ದು, ಇಂದು ಮಂತ್ರಾಲಯಕ್ಕೆ ಲಕ್ಷಾಂತರ ಭಕ್ತರು ಹರಿದು ಬರಲಿದೆ.
ಶ್ರೀಮಠದಿಂದ ಭಕ್ತರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ.

ಎರಡು ಹೊತ್ತು ದಾಸೋಹ:

ಆರಾಧನೆ ಹಿನ್ನೆಲೆಯಲ್ಲಿ ಶ್ರೀಮಠದಿಂದ ಎರಡು ಹೊತ್ತು ದಾಸೋಹಕ್ಕೆ (ಊಟ) ವ್ಯವಸ್ಥೆ ಮಾಡಲಾಗಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ನಿತ್ಯ ಸುಮಾರು 60 ಕ್ವಿಂಟಲ್ ಅಕ್ಕಿಯನ್ನು ಬೇಯಿಸಿ, ಅನ್ನ ಸಿದ್ಧಪಡಿಸಲಾಗುತ್ತಿದೆ. ಅಡುಗೆ ವಿಭಾಗದ ಉಗ್ರಾಣದಲ್ಲಿ ಈಗಾಗಲೇ 800 ಕ್ವಿಂಟಲ್ ಅಕ್ಕಿ, 900 ಕ್ವಿಂಟಲ್ ಸಕ್ಕರೆ-ಬೆಲ್ಲ ದಾಸ್ತಾನು ಮಾಡಲಾಗಿದೆ. 2 ಟನ್ ತುಪ್ಪ ದಾಸ್ತಾನು ಮಾಡಲಾಗಿದ್ದು, ನಿತ್ಯ 350 ಕೆಜಿ ತುಪ್ಪ ಬಳಕೆಯಾಗುತ್ತಿದೆ.

ಮೈಸೂರು ಪಾಕ್, ಶ್ರೀಮಠದ ‘ಪರಿಮಳ’ ಪ್ರಸಾದ, ಚಾಕೊಲೇಟ್ ಬರ್ಫಿ, ಮ್ಯಾಂಗೊ ಬರ್ಫಿ, ಲಾಡು, ಬಾಲುಷಾ ಸೇರಿ ಸೇರಿದಂತೆ ಹಲವು ರೀತಿಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗಿದೆ. ರಾಯಚೂರು, ಬೆಂಗಳೂರು ಮತ್ತು ಸ್ಥಳೀಯರು ಸೇರಿದಂತೆ ಸುಮಾರು 80 ಬಾಣಸಿಗರು ಅಡುಗೆ ಸಿದ್ಧಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತುಂಗಭದ್ರೆಯಲ್ಲಿ ಪ್ರವಾಹ:

ಕರ್ನಾಟಕದ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿ ನೀರಿನಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ನದಿತೀರದಲ್ಲಿದ್ದ ಗಂಗಮ್ಮ ದೇವಸ್ಥಾನ ಜಲಾವೃತಗೊಂಡಿತ್ತು. ಮಠದ ಸುತ್ತಲ ನದಿ ತೀರದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿಯಬಾರದು ಎಂದು ಎಚ್ಚರಿಸಲಾಗಿದೆ. ಅವಘಡ ಸಂಭವಿಸಿದ ಸಂದರ್ಭದಲ್ಲಿ ರಕ್ಷಣೆಗಾಗಿ ತೆಪ್ಪಗಳ ಜೊತೆಗೆ ಅಂಬಿಗರನ್ನು ನಿಯೋಜಿಸಲಾಗಿದೆ. ಮಂತ್ರಾಲಯ ಪೊಲೀಸರು, ಸ್ವಯಂಸೇವಕರು, ಮಂತ್ರಾಲಯ ಆಡಳಿತದ ಮಂಡಳಿಯ ಸೆಕ್ಯುರಿಟಿ ಗಾರ್ಡ್​ಗಳನ್ನು ದಡದಲ್ಲಿ ನಿಯೋಜನೆ ಮಾಡಲಾಗಿದೆ. ಭಕ್ತರ ಸ್ನಾನಕ್ಕೆ ತಾತ್ಕಾಲಿಕವಾಗಿ ಸ್ನಾನಘಟ್ಟಗಳನ್ನು ನಿರ್ಮಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:32 am, Sat, 13 August 22