ರಾಯಚೂರು, ಫೆ.22: ಜಿಲ್ಲೆಯ ಗಡಿ ಭಾಗದ ಮಂತ್ರಾಲಯದ ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿ 167 ರಲ್ಲೇ ಭೀಕರ ಅಪಘಾತ(Accident)ವೊಂದು ಸಂಭವಿಸಿತ್ತು. ನಿನ್ನೆ(ಫೆ.21) ರಾತ್ರಿ ಕೆಎಸ್ಆರ್ಟಿಸಿ ಬಸ್ ರಾಯಚೂರಿ(Raichur)ನಿಂದ ಮಂತ್ರಾಲಯಕ್ಕೆ ಹೊರಟಿತ್ತು. ನಗರದ ಹೊರಭಾಗದ ಮಿಟ್ಟಿಮಲ್ಕಾಪುರ ಬಳಿಯಲ್ಲಿ ಮೂವರು ಬೈಕ್ ಸವಾರರು ಒಂದೇ ಬೈಕ್ನಲ್ಲಿ ರಾಯಚೂರು ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ನಲ್ಲಿ ರಾಯಚೂರು ನಗರದ ನಿವಾಸಿಗಳಾದ ಪರಶುರಾಮ, ಗೋವಿಂದ ಹಾಗೂ ರಾಘವೇಂದ್ರ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಈ ಘಟನೆ ನಡೆದು ಅರ್ಧ ಗಂಟೆ ಅವಧಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿ, ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಪ್ರಾಣೇಶ್ ಎನ್ನುವ ಯುವಕ ಮೃತಪಟ್ಟಿದ್ದ.
ಮೃತ ಪರಶುರಾಮ, ಗೋವಿಂದ ಹಾಗೂ ರಾಘವೇಂದ್ರ ಮೂವರು ಪ್ರಾಣ ಸ್ನೇಹಿತರು. ಪರಶುರಾಮ ತನ್ನ ತಂದೆ ಮಲ್ಲೇಶಪ್ಪಗೆ ಅನಾರೋಗ್ಯ ಹಿನ್ನೆಲೆ ನಿನ್ನೆ ರಾತ್ರಿ ರಾಯಚೂರಿನಿಂದ ರೈಲಿನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಪರಶುರಾಮ, ತಂದೆ ಮಲ್ಲೇಶಪ್ಪ ಹಾಗೂ ಅಣ್ಣ ಗಂಗಾಧರ್ ಮೂವರು ಹೋಗಲು ಟಿಕೆಟ್ ರಿಸರ್ವೇಶನ್ ಕೂಡ ಮಾಡಿದ್ದರು. ನಿನ್ನೆ ಅಣ್ಣ ಗಂಗಾಧರ್ ಹಾಗೂ ಕುಟುಂಬಸ್ಥರು ಜಾತ್ರೆಗೆ ಹೋಗಿ ವಾಪಸ್ ಬಂದು ಬೆಂಗಳೂರಿಗೆ ಹೋಗಲು ರೆಡಿ ಆಗಿದ್ದರು. ಆದ್ರೆ, ಪರಶುರಾಮ ಬಂದಿರಲಿಲ್ಲ. ಆಗ ಎಲ್ಲಿದ್ದಾನೆ ಎಂದು ಕಾಲ್ ಮಾಡಿದಾಗ ಆತ ಅಪಘಾತದಲ್ಲಿ ಮೃತಪಟ್ಟಿರುವ ವಿಷಯ ತಿಳಿದಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಭೀಕರ ಅಪಘಾತ, ಸ್ಥಳದಲ್ಲೇ 6 ಜನ ದುರ್ಮರಣ: ಭೀಕರತೆ ವಿವರಿಸುವ ಚಿತ್ರಗಳು
ಇದಷ್ಟೇ ಅಲ್ಲ, ಈ ಅಪಘಾತವಾದ ಮಾರ್ಗದಲ್ಲೇ ಅರ್ಧ ಗಂಟೆ ಅವಧಿಯಲ್ಲಿಯೇ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಪ್ರಾಣೇಶ್ ಎನ್ನುವ ಯುವಕ ಮೃತಪಟ್ಟಿದ್ರೆ, ಆಂಜನೇಯ ಎನ್ನುವವರಿಗೆ ಗಂಭೀರ ಗಾಯವಾಗಿದೆ. ಪ್ರಾಣೇಶ್ ಪತ್ನಿ ಕಳೆದ 10 ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಳು, ಮಗು ನೋಡಲು ಬಂದಿದ್ದ ಪ್ರಾಣೇಶ್ ಹೀಗೆ ಹೆಣವಾಗಿ ಹೋಗಿದ್ದಾನೆ. ಈ ಬಗ್ಗೆ ಯರಗೇರಾ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇತ್ತ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ