ಸಾವಿನ ಹೆದ್ದಾರಿಯಾದ ಬೆಂಗಳೂರು ಹೈದರಾಬಾದ್ ರಸ್ತೆ: ಒಂದೇ ವರ್ಷದಲ್ಲಿ 76 ಅಪಘಾತ, 36 ಸಾವು
ಅದು ಹೇಳಿ ಕೇಳಿ ಬೆಂಗಳೂರು-ಹೈದರಾಬಾದ್(Bangalore to Hyderabad) ರಾಷ್ಟ್ರೀಯ ಹೆದ್ದಾರಿ. ಹೀಗಾಗಿ ನಿತ್ಯ ಆ ರಸ್ತೆಯಲ್ಲಿ ಸಾವಿರಾರು ವಾಹನಗಳ ಸಂಚಾರ ಸಾಮಾನ್ಯ. ಆದ್ರೆ, ಇದೀಗ ಅದೆ ರಸ್ತೆಯಲ್ಲೇ ಈಶಾ ಪೌಂಡೇಷನ್ ಸಹ ಆದ ಹಿನ್ನೆಲೆಯಲ್ಲಿ ವಾಹನಗಳ ಒಡಾಟ ದುಪ್ಪಟ್ಟಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇದೀಗ ಸ್ಥಳೀಯರಿಗೆ ಸಾವಿನ ಹೆದ್ದಾರಿಯಾಗಿ ಬದಲಾಗಿದೆ.
ಬೆಂಗಳೂರು ಗ್ರಾಮಾಂತರ, ಫೆ.22: ಬೆಂಗಳೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೂಲಕ ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗವಾಗಿ ಹೈದರಾಬಾದ್ಗೆ ರಾಷ್ಟ್ರೀಯ ಹೆದ್ದಾರಿ(Bangalore to Hyderabad Highway) ಹಾದು ಹೋಗಿದೆ. ಅದರಲ್ಲೂ ಇದೇ ಹೆದ್ದಾರಿಯಲ್ಲೆ ನಂದಿಬೆಟ್ಟ, ಈಶಾ ಪೌಂಡೇಷನ್ ಸಹ ಬರುತ್ತದೆ. ವಾರಂತ್ಯ ಬಂದರೆ ಸಾಕು ಸಾವಿರಾರು ವಾಹನಗಳು ಮುಂಜಾನೆಯಿಂದಲೇ ರಸ್ತೆಗಿಳಿಯುತ್ತದೆ. ಹೀಗಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ನಿತ್ಯ ಹೆದ್ದಾರಿ ಬದಿಯಲ್ಲಿನ ಗ್ರಾಮಸ್ಥರು ಹೆದ್ದಾರಿ ದಾಟಲು ಸಾವಿನ ಮನೆ ಗೆದ್ದು ಬರುಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.
ಸ್ಕೈ ವಾಕ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಒತ್ತಾಯ
ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ, ವೆಂಕಟಗಿರಿಕೋಟೆ, ಮುದಗುರ್ಕಿ ಸೇರಿದಂತೆ ಹತ್ತಾರು ಗ್ರಾಮಸ್ಥರು ಹೆದ್ದಾರಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ರಸ್ತೆ ದಾಟಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಗ್ರಾಮಸ್ಥರೆಲ್ಲ ಗ್ರಾಮದ ಬಳಿ ಸ್ಕೈ ವಾಕ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಿ ಕೊಡುವಂತೆ ಹಲವು ಭಾರಿ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಬೆಂಗಳೂರು-ಸೇಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಹುಚ್ಚಾಟ; ಬೈಕ್ ಡಿವೈಡರ್ ಗೆ ಡಿಕ್ಕಿ
ಚಿಕ್ಕಬಳ್ಳಾಪುರ ಬಳಿ ಈಶಾ ಪೌಂಡೇಶನ್ ಆದ ನಂತರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, 10 ನಿಮಿಷಕ್ಕೂ ಅಧಿಕ ಕಾಲ ಕಾದರೂ ರಸ್ತೆ ದಾಟಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಶಾಲಾ-ಕಾಲೇಜುಗಳು ಸಹ ಹೆದ್ದಾರಿ ಬದಿಯಲ್ಲೆ ಇದ್ದು ಶಾಲಾ ಮಕ್ಕಳು ಒಟ್ಟಾಗಿ ಕೈ ಹಿಡಿದು ರಸ್ತೆ ದಾಟುತ್ತಿದ್ದಾರೆ. ಇನ್ನು ಕಳೆದ ಒಂದು ವರ್ಷದಲ್ಲಿ ಇದೇ ರಸ್ತೆಯಲ್ಲಿ 76 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 45 ಜನ ಕೈ ಕಾಲು ಮುರಿದುಕೊಂಡು ಗಾಯಗೊಂಡಿದ್ದರೆ, 36 ಜನ ಜೀವವನ್ನೆ ಕಳೆದುಕೊಂಡಿದ್ದಾರೆ.
ಹೀಗಾಗಿ ಮುಂದೆ ಮತ್ತಷ್ಟು ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತು ಸ್ಕೈ ವಾಕ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಒಟ್ಟಾರೆ ಸಿಲಿಕಾನ್ ಸಿಟಿಯ ಔಟ್ ಸ್ಕಟ್ಸ್ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವಂತೆಲ್ಲ ಹೆದ್ದಾರಿಯಲ್ಲಿ ಸಾವು ನೋವುಗಳು ಹೆಚ್ಚಾಗ್ತಿರುವುದು ನಿಜಕ್ಕೂ ದುರಂತ. ಇನ್ನಾದ್ರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತು ಹೆದ್ದಾರಿ ಬದಿಯಲ್ಲಿನ ಗ್ರಾಮಗಳ ಬಳಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ