ರಾಯಚೂರಿನಲ್ಲಿ ಭೀಕರ ಅಪಘಾತ: ಜಾಗ್ವಾರ್ ಕಾರು ಗುದ್ದಿದ ರಭಸಕ್ಕೆ 15 ಅಡಿ ದೂರ ಹಾರಿ ಬಿದ್ದ ವಿದ್ಯಾರ್ಥಿನಿ, ವಿಡಿಯೋ ಇಲ್ಲಿದೆ

ರಾಯಚೂರು ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ವಿಡಿಯೋ ವೈರಲ್ ಆಗಿದ್ದು, ಕಾರು ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿ 15 ಅಡಿ ದೂರ ಹಾರಿ ಬಿದ್ದಿದ್ದಾಳೆ.

ರಾಯಚೂರು, (ಜುಲೈ 27): ಬೈಕ್‍ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯಾರ್ಥಿನಿಯರಿಗೆ (Students) ಜಾಗ್ವಾರ್ ಕಾರು (Car)  ಗುದ್ದಿದ ಘಟನೆ ರಾಯಚೂರು (Raichur) ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಮೈ ಜುಮ್ಮೆನಿಸುವಂತಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಫುಲ್​ ವೈರಲ್ ಆಗಿದೆ. ರಾಯಚೂರು ನಗರದ ಅಂಬೇಡ್ಕರ್​ ವೃತ್ತದರಿಂದ ರೈಲ್ವೆ ನಿಲ್ದಾಣದ ಕಡೆಗೆ ಹೋಗುವ ರಸ್ತೆಯಲ್ಲಿ ದ್ವಿಚಕ್ರವಾಹನ ಕ್ರಾಸ್​ ಮಾಡುವಾಗ ವೇಗವಾಗಿ ಬಂದ ಜಾಗ್ವಾರ್ ಕಾರು ಬೈಕ್​ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಗುದ್ದಿದೆ. ಪರಿಣಾಮ ಓರ್ವ ವಿದ್ಯಾರ್ಥಿನಿ ಅಲ್ಲದೇ ನೆಲಕ್ಕೆ ಬಿದ್ದಿದ್ದು, ಮತ್ತೋರ್ವ ಓರ್ವ ವಿದ್ಯಾರ್ಥಿನಿ 15 ಅಡಿ ದೂರದಲ್ಲಿ ಹಾರಿ ಬಿದ್ದಿದ್ದಾಳೆ. ಅದೃಷ್ಟವಶಾತ್​ ಇಬ್ಬರೂ ಬದುಕುಳಿದಿದ್ದಾಳೆ. ಇನ್ನು ಘಟನೆಯಲ್ಲಿ ಬೈಕ್​ ಸವಾರನ ಕಾಲು ಮುರಿದಿದೆ.

ಇದನ್ನೂ ಓದಿ: Karnataka Breaking Kannada News Live: ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ರೈಲ್ವೆ ನಿಲ್ದಾಣ ರಸ್ತೆಯಲ್ಲಿ ರಾಮಮಂದಿರ ಮುಂಭಾಗದಿಂದ ಬಂದ ಬೈಕ್ ಸವಾರ, ದಿಢೀರ್​ ಯುಟರ್ನ್​ ಪಡೆದುಕೊಂಡಿದ್ದಾನೆ. ಆ ವೇಳೆ ಎದುರಿಗೆ ವೇಗ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣಕ್ಕೆ ಬಾರದೇ ಬೈಕ್​ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿಯೋರ್ವಳು ಸುಮಾರು 15 ಅಡಿ ಹಾರಿ ಬಿದ್ದಿದ್ದಾಳೆ. ಬೈಕ್ ಸವಾರ ಶಿವರಾಜ್ ಪಾಟೀಲ್ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯರಾದ ದೇವದುರ್ಗ ತಾಲೂಕು ಬೂಮನಗುಂಡ ತಾಲೂಕಿನ ಶಿವಮಂಗಳ ಹಾಗೂ ಸಿರವಾರ ತಾಲೂಕು ಬೇವಿನೂರು ಗ್ರಾಮದ ಜ್ಯೋತಿ ಎಂದು ಗುರುತಿಸಲಾಗಿದೆ.


ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವಿಡಿಯೋ ವೈರಲ್​ ಆಗಿರುವ ಬೆನ್ನಲ್ಲೇ ರಾಯಚೂರು ನಗರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಮೊಹಮ್ಮದ್ ಜಾಫರ್ ಎನ್ನುವರಿಗೆ ಸೇರಿದ ಜಗ್ವಾರ್ ಕಾರು ಎಂದು ತಿಳಿದುಬಂದಿದೆ. ಜಾಫರ್ ಈ ಜಾಗ್ವಾರ್ ಕಾರಿನ ಮೂರನೇ ಮಾಲೀಕನಾಗಿದ್ದು, ಪ್ರಕರಣ ಸಂಭವಿಸಿದ ಬಳಿಕ ತಲೆಮರೆಸಿಕೊಂಡಿದ್ದಾನೆ. ಸದ್ಯ ಪೊಲೀಸರು ಕಾರನ್ನು ವಶಕ್ಕೆ ಪಡೆದಿರುವ ತನಿಖೆ ಮುಂದುವರೆಸಿದ್ದಾರೆ.

ಇನ್ನು ಈ ವಿಡಿಯೋ ವೈರಲ್​ ಆಗಿರುವ ಬಗ್ಗೆ ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೇ ಬೈಕ್ ಹಾಗೂ ಕಾರು ಚಾಲಕನ ಡಿಎಲ್​ ಸಸ್ಪೆಂಡ್ ಮಾಡುವಂತೆ ಟ್ವಿಟ್ಟರ್​ ಮೂಲಕ ಸೂಚನೆ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:44 am, Thu, 27 July 23