Karnataka Breaking Kannada News Highlights: ಚಿಕ್ಕಮಗಳೂರು ಪ್ರವಾಸಕ್ಕೆ ಬರದಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಮನವಿ
Breaking News Today Live Updates: ಕರ್ನಾಟಕ ರಾಜ್ಯ ರಾಜಕೀಯ, ಅಪರಾಧ, ಮಳೆ, ಹವಾಮಾನ, ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ತಾಜಾ ಮಾಹಿತಿಯನ್ನು ಟಿವಿ9 ಕನ್ನಡ ಲೈವ್ಬ್ಲಾಗ್ ಮೂಲಕ ಪಡೆಯಿರಿ.
Karnataka Rains: ರಾಜ್ಯದಲ್ಲಿ ಮುಂಗಾರು(Monsoon) ಮಳೆ ಚುರುಕುಗೊಂಡಿದೆ. ಮಳೆ ಅಬ್ಬರಕ್ಕೆ ಅನೇಕ ಜಿಲ್ಲೆಗಳು ತತ್ತರಿಸಿದ್ದು ಡ್ಯಾಂಗಳು ತುಂಬಿ ಹರಿಯುತ್ತಿವೆ. ರಸ್ತೆಗಳು, ಸೇತುವೆಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ(Karnataka Flood). ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಟ್ರಕ್ಕಿಂಗ್ಗೆ ನಿಷೇಧ ಹೇರಲಾಗಿದೆ. ಪ್ರವಾಹ ಭೀತಿ ಇರುವ ಜಿಲ್ಲೆಗಳಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೆರೆ, ನದಿ, ಸಮುದ್ರತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಮುನ್ನೆಚ್ಚರಿಕೆ ವಹಿಸಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಡಿಸಿಗಳು ಮನವಿ ಮಾಡಿದ್ದಾರೆ. ಇನ್ನು ಮಳೆ ಹಿನ್ನಲೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ನಿನ್ನೆ ಸಂಜೆ 4ಗಂಟೆಗೆ ಸಿಎಂ ಮಳೆ ಸಂಬಂಧ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ, ಪ್ರತಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಅನುದಾನ ಲಭ್ಯವಿದ್ದು, ಮಳೆ ದುರಸ್ತಿಗೆ ತಕ್ಷಣ ಕ್ರಮ ವಹಿಸಿ. ಹೆಚ್ಚಿನ ಅನುದಾನ ಅಗತ್ಯವಿದ್ದರೆ ಮನವಿ ಕಳುಹಿಸಿ ಎಂದು ಸೂಚಿಸಿದರು. ಮಳೆ ಸೇರಿದಂತೆ ರಾಜ್ಯದಲ್ಲಿಂದಾಗುವ ಲೇಟೆಸ್ಟ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
LIVE NEWS & UPDATES
-
Karnataka Breaking News Live: ಚಿಕ್ಕಮಗಳೂರು ಪ್ರವಾಸಕ್ಕೆ ಬರದಂತೆ ಜಿಲ್ಲಾಡಳಿತ ಮನವಿ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂದುವರಿದ ಧಾರಾಕಾರ ಮಳೆಯಾಗುತ್ತಿದ್ದು, ಒಂದೇ ತಿಂಗಳಿನಲ್ಲಿ 270% ಅಧಿಕ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ವಾಡಿಕೆ ಮಳೆಗಿಂತ 270% ಅಧಿಕ ಮಳೆಯಾಗಿದೆ. ಹೀಗಾಗಿ ಎರಡು ವಾರ ಚಿಕ್ಕಮಗಳೂರು ಪ್ರವಾಸಕ್ಕೆ ಬರದಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಪ್ರವಾಸಿಗರ ಬಳಿ ಮನವಿ ಮಾಡಿದ್ದಾರೆ.
-
Karnataka Breaking News Live: ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಸಿಎಂ ಎಚ್ಚರಿಕೆ
ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿ ನೀಡಿರುವ ತೀರ್ಪು ಇಡಿ ದೇಶದ ರಾಜಕಾರಣಕ್ಕೆ ಗೇಮ್ ಚೇಂಜರ್ ಎನ್ನುವ ವಿಶ್ಲೇಷಣೆಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ. ಹೀಗಾಗಿ ಸುಳ್ಳಿನ ಸರಮಾಲೆಗಳ ಮೂಲಕ ಅವರು ಐದು ಗ್ಯಾರಂಟಿಗಳ ಯಶಸ್ಸು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಈ ಬಗ್ಗೆ ಪ್ರತಿಯೊಬ್ಬ ಶಾಸಕರೂ ಎಚ್ಚರದ ಸ್ಥಿತಿಯಲ್ಲಿದ್ದು ಅವರ ಸುಳ್ಳುಗಳಿಗೆ ನೀವೂ ದಾಳ ಆಗಬೇಡಿ ಎಂದು ಎಚ್ಚರಿಸಿದರು.
-
Karnataka Breaking News Live: ಬಾಗಲಕೋಟೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಣೆ
ಜಿಟಿಜಿಟಿ ಮಳೆಯಿಂದ ಶಾಲೆಗಳ ಕಟ್ಟಡಗಳು ಸೋರಿಕೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಶಾಲಾ ಕಟ್ಟಡಗಳಲ್ಲಿ ಸೋರಿಕೆ ಬಗ್ಗೆ ಡಿಡಿಪಿಐರಿಂದ ಪತ್ರ ಬರೆದ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ನಾಳೆ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಎಂ.ಜಾನಕಿ ಆದೇಶ ಹೊರಡಿಸಿದ್ದಾರೆ.
Karnataka Breaking News Live: ಶಾಸಕಾಂಗ ಸಭೆಗೆ ಸಿಎಂ ಸಿದ್ದರಾಮಯ್ಯ ಆಗಮನ
ಶಾಸಕಾಂಗ ಪಕ್ಷದ ಸಭೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಸಚಿವ ಜಮೀರ್ ಅಹಮದ್, ಶಾಸಕ ವಿನಯ್ ಕುಲಕರ್ಣಿ, ಸಚಿವ ಕೆ ಹೆಚ್ ಮುನಿಯಪ್ಪ, ಶಾಸಕ ಬಸವರಾಜ ರಾಯರೆಡ್ಡಿ ಸೇರಿದಂತೆ ಸಚಿವರು, ಶಾಸಕರು ಆಗಮಿಸಿದ್ದಾರೆ,
Karnataka Breaking News Live: ಸಂಪುಟ ಸಭೆಯಲ್ಲಿ 15 ವಿಷಯಗಳ ಚರ್ಚೆ
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಹೆಚ್ ಕೆ.ಪಾಟೀಲ್, ಸಭೆಯಲ್ಲಿ 15 ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಹಕಾರ ಇಲಾಖೆ ಅಡಿಯಲ್ಲಿ ಎಪಿಎಮ್ಸಿಗಳಿಗೆ ರಸ್ತೆ ಮಾಡಲು, ಮೂಲಭೂತ ಸೌಲಭ್ಯ ಒದಗಿಸಲು 130.40 ಕೋಟಿ ಮಂಜೂರು, ಮೊಟ್ಟೆ ನೀಡುವ ವಿಚಾರದಲ್ಲಿ ವಿಭಾಗವಾರು ಮೊಟ್ಟೆ ಖರೀದಿಸಿ ವಿತರಿಸುವ ನಿರ್ಣಯ, ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿದ್ದೆರೆ ಅದರ ಆಟಿಟ್ ಮಾಡಲು ನಿರ್ಣಯ, ಅಕ್ರಮ ಸಾಗಾಣಿಕೆ ಇದ್ದರೆ ಅಂತವರ ಮೇಲೆ ಕ್ರಮಕ್ಕೆ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಸಿಎಂ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದರು.
Karnataka Breaking News Live: ಜೀವಹಾನಿ, ಮನೆಹಾನಿ ಆದ್ರೆ ಕೂಡಲೇ ಪರಿಹಾರ ನೀಡಲು ಸೂಚನೆ: ಅಂಜುಮ್ ಪರ್ವೇಜ್
ಬೆಳಗಾವಿ ಜಿಲ್ಲೆ, ಮಹಾರಾಷ್ಟ್ರದಲ್ಲಿ ಸತತ 1 ವಾರದಿಂದ ಮಳೆ ಆಗುತ್ತಿದ್ದು, ಜೀವಹಾನಿ, ಮನೆಹಾನಿ ಆದರೆ ಕೂಡಲೇ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಹೇಳಿದ್ದಾರೆ. ನದಿ ತೀರದಲ್ಲಿರುವವರು ಮುಂಚಿತವಾಗಿ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಲಾಗಿದೆ. ಬಾರವಾಡ ಗ್ರಾಮದಲ್ಲಿ ಎರಡು ಕುಟುಂಬ ಸ್ಥಳಾಂತರ ಮಾಡಲಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇರಬೇಕು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಬೆಳೆ ಹಾನಿ ಆದ ರೈತರಿಗೆ SDRF, NDRF ನಿಯಮದಡಿ ಪರಿಹಾರ ನೀಡಲಾಗುವುದು. ಇದಕ್ಕೆ ಹಣದ ಕೊರತೆ ಇಲ್ಲ ಎಂದರು.
Karnataka Breaking News Live: ಲಾರಿ ಡಿಕ್ಕಿ, ಬೈಕ್ನಲ್ಲಿ ತೆರಳುತ್ತಿದ್ದ ಮೂವರ ಸಾವು
ದೇವನಹಳ್ಳಿ: ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಮೂವರ ಸಾವನ್ನಪ್ಪಿದ ಘಟನೆ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ನಡೆದಿದೆ. ಜಡಿಗೇನಹಳ್ಳಿ ಬಳಿ ಮನೋಹರ(19), ಶ್ವೇತಾ(38), ಸುಕೃತಾ (4) ಮೃತರು. ಇವರು ಗೊಣಕನಹಳ್ಳಿ ನಿವಾಸಿಗಳಾಗಿದ್ದಾರೆ. ಡಿಕ್ಕಿ ನಂತರ ಲಾರಿ ಬೈಕ್ ಸಹಿತ ಹಳ್ಳಕ್ಕೆ ಬಿದ್ದಿದೆ.
Karnataka Breaking News Live: ಮಧ್ಯಾಹ್ನ ಊಟ ಸೇವಿಸಿದ ಬಳಿಕ 7 ಶಾಲಾ ಮಕ್ಕಳು ಅಸ್ವಸ್ಥ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಏಳು ಶಾಲಾ ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಊಟ ಸೇವಿಸಿದ್ದ 210 ಶಾಲಾ ಮಕ್ಕಳ ಪೈಕಿ 7 ಮಕ್ಕಳಿಗೆ ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಸದ್ಯ ಅಸ್ವಸ್ಥಗೊಂಡ ಮಕ್ಕಳನ್ನು ವರಿಯಾಲ, ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಿದ್ದಾರೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ.
Karnataka Breaking News Live: ನಿರಂತರ ಮಳೆಗೆ ಗದಗ ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ತ
ಗದಗ: ನಿರಂತರ ಮಳೆಗೆ ಗದಗ ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆ ಹಿನ್ನೆಲೆ ಬಾಣಂತಿಯೊಬ್ಬರು ಲಕ್ಕುಂಡಿ ಗ್ರಾಮದ ಗಂಡನ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಾರೆ. ನಿರಂತರ ಮಳೆಯಿಂದ ಮಣ್ಣಿನ ಮನೆ ಸೋರುತ್ತಿದೆ. ಇದರಿಂದಾಗಿ ಬಾಣಂತಿ ಹಾಗೂ ನಾಲ್ಕು ತಿಂಗಳ ಹಸುಗೂಸು ಪರದಾಟ ನಡೆಸುವಂತಾಗಿತ್ತು. ನಂತರ ಮನೆ ಬಿಟ್ಟು ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಿದ್ದರು. ಎರಡು ದಿನ ದೇವಸ್ಥಾನದಲ್ಲಿ ಹಸುಗೂಸು ಕಟ್ಟಿಕೊಂಡು ವಾಸ್ತವ್ಯ ಮಾಡಿದ್ದ ಬಾಣಂತಿ ಇದೀಗ ತವರು ಮನೆಗೆ ಹೋಗಿದ್ದಾರೆ.
Karnataka Breaking News Live: ಅಖಂಡ ಮನೆಗೆ ಬೆಂಕಿ ಹಚ್ಚಿದವರು ಅಮಾಯಕರೆಂದು ಸರ್ಟಿಫಿಕೆಟ್ ಕೊಟ್ಟ ಪರಮೇಶ್ವರ್: ಕಾರಜೋಳ
ಕಾಂಗ್ರೆಸ್ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದವರು ಅಮಾಯಕರು ಎಂದು ಗೃಹಸಚಿವ ಜಿ ಪರಮೇಶ್ವರ್ ಅವರು ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಎಂ ಕಾರಜೋಳ ಆಕ್ರೋಶ ಹೊರಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. ಮತ ಕೊಟ್ಟ ಜನರಿಗೂ ಇವರು ಅಪಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಿಂದ ದಲಿತರಿಗೆ ಅವಮಾನ ಆಗಿದೆ. ಈ ಮೊಕದ್ದಮೆ ವಾಪಸ್ ತೆಗೆದುಕೊಂಡರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ. ನಾವು ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ತನ್ವೀರ್ ಸೇಠ್ಗೆ ಎಸ್ಡಿಪಿಐನವರು ಚೂರಿ ಹಾಕಿ ಸಾಯಿಸಲು ಹೊರಟಿದ್ದರು. ಆದರೆ ಅವರನ್ನು ನೋಡೋಕೆ ಯಾರು ಹೋಗಿರಲಿಲ್ಲ. ಆಗ ನಮ್ಮ ಸೋಮಣ್ಣ ಅವರ ಮನೆಗೆ ಹೋಗಿದ್ದರು. ಮುಸಲ್ಮಾನ ಮತಕ್ಕೆ ಅಂಜಿ ಇವರು ಇಷ್ಟು ಕೆಟ್ಟ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಮತಕ್ಕಾಗಿ ಈ ರೀತಿ ರಾಜಕಾರಣ ಮಾಡೋದು ಸರಿಯಲ್ಲ ಎಂದರು. ಅಭಿವೃದ್ಧಿಗೆ ಹಣ ಇಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಭಿವೃದ್ಧಿ ಮಾಡಲ್ಲ ಅಂದರೆ ಇವರು ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇದೆಯಾ? ಗ್ಯಾರಂಟಿಗಳಿಗೆ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ ಅಂತ ಮಾನ ಮರ್ಯಾದೆ ಇಲ್ಲದೇ ಇರುವವರು ಹೇಳುತ್ತಾರೆ ಎಂದರು.
Karnataka Breaking News Live: ಸಚಿವ ಸಂಪುಟ ಸಭೆ ಆರಂಭ
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭಗೊಂಡಿದೆ.
Karnataka Breaking News Live: ಶಾಸಕರು ಪತ್ರ ಬರೆದಿರುವುದು ಸುಳ್ಳು: ಪ್ರಿಯಾಂಕ್ ಖರ್ಗೆ
ಸಚಿವರ ವಿರುದ್ಧ ಕಾಂಗ್ರೆಸ್‌ನ ಹಿರಿಯ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರು ಪತ್ರ ಬರೆದಿರುವುದು ಸುಳ್ಳು ಎಂದರು. 2 ಬಾರಿ CLP ಮುಂದೂಡಿಕೆ ಆಗಿತ್ತು, ಹಾಗಾಗಿ CLP ಸಭೆ ಕರೆದಿದ್ದಾರೆ. ಇದನ್ನೇ ಬಿಜೆಪಿ ನಾಯಕರು ಫೋಟೋಶಾಪ್ ಮಾಡಿ ಹಾಕಿದ್ದಾರೆ. ಆ ಬಗ್ಗೆ ಕ್ರಿಮಿನಲ್ ಕೇಸ್ ಹಾಕಿ ತನಿಖೆಗೆ ಕೊಡಲಾಗಿದೆ. ಓರ್ವ ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅನ್ನೋದು ತಪ್ಪಾ? ಎಂದು ಪ್ರಶ್ನಿಸಿದರು. ಅಲ್ಲದೆ, ಕಳೆದ ಸರ್ಕಾರದಲ್ಲಿ ಅನುಮತಿ ಇಲ್ಲದೆ ಅನುದಾನ ಮಂಜೂರು ಆಗಿದೆ. ಈಗಾಗಲೇ ಗ್ಯಾರಂಟಿ ಯೋಜನೆ ಜಾರಿಮಾಡಲಾಗಿದೆ. ಕಾಮಗಾರಿಗೆ ಈ ವರ್ಷ ತೊಂದರೆ ಆಗಲಿದೆ ಅಂತಾ ಸಿಎಂ ಹೇಳಿದ್ದಾರೆ ಎಂದರು.
Karnataka Breaking News Live: ಪುತ್ತಿಲ ಪರಿವಾರದ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಅನುಮತಿ ಇಲ್ಲದೆ ವಿಜಯೋತ್ಸವ ನಡೆಸಿದ ಹಿನ್ನೆಲೆ ಪುತ್ತಿಲ ಪರಿವಾರದ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯತ್ನ ಆರ್ಯಾಪು ವಾರ್ಡ್ಗೆ ನಡೆದ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ. ಇದು ಪರಿವಾರದ ಮೊದಲ ಜಯವಾಗಿದ್ದು, ಡಿಜೆ ಬಳಸಿ ವಿಜಯೋತ್ಸವ ನಡೆಸಲಾಗಿದೆ. ಅನುಮತಿ ಪಡೆಯದೇ ಡಿಜೆ ಮೆರವಣಿಗೆ ನಡೆಸಿದ ಹಿನ್ನೆಲೆ ಪೊಲೀಸರು ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಿಸಿದ್ದಾರೆ.
Karnataka Breaking Kannada News Live: ನಿರಂತರ ಮಳೆಗೆ ಜೇವರ್ಗಿ ತಾಲೂಕಿನ ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿತ
ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ವಸ್ತಾರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರಂತರ ಮಳೆಗೆ ಶಾಲಾ ಕೊಠಡಿಯ ಮೇಲ್ಚಾವಣಿ ಕುಸಿತವಾಗಿದ್ದು, ಅದೃಷ್ಟವಶಾತ್ ಶಾಲೆಯಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿರುವ ಹಿನ್ನಲೆ ಶಿಕ್ಷಕರು ವಿದ್ಯಾರ್ಥಿಗಳನ್ನು ಶಾಲೆಯ ಕಾರಿಡಾರ್ನಲ್ಲಿ ಕೂರಿಸಿದ್ದರು ಈ ಹಿನ್ನಲೆ ಮಕ್ಕಳು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.
Karnataka Breaking Kannada News Live: ಡಿ.ಜೆ.ಹಳ್ಳಿ ಗಲಭೆ ಆರೋಪಿಗಳ ಕೇಸ್ ವಾಪಸ್ಗೆ ಪತ್ರ; ಈಗಾಗಲೇ ಅಮಾಯಕರನ್ನ ಬಿಡುಗಡೆ ಮಾಡಲಾಗಿದೆ ಎಂದ ಅಖಂಡ ಶ್ರೀನಿವಾಸ್ ಮೂರ್ತಿ
ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಆರೋಪಿಗಳ ಕೇಸ್ ವಾಪಸ್ಗೆ ಪತ್ರ ಕುರಿತು ಮಾತನಾಡಿದ ಅಖಂಡ ಶ್ರೀನಿವಾಸ್ ಮೂರ್ತಿ ‘ಅಮಾಯಕರನ್ನ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆರೋಪಿಗಳನ್ನ ಬಿಡುಗಡೆ ಮಾಡುವ ಹುನ್ನಾರ ಸರ್ಕಾರದಿಂದ ನಡೆಯುತ್ತಿದೆ ಅನ್ನೋ ಅನುಮಾನವಿದೆ ಎಂದಿದ್ದಾರೆ.
Karnataka Breaking Kannada News Live: ಉಡುಪಿಯಲ್ಲಿ ವಿಡಿಯೋ ಚಿತ್ರೀಕರಣ; ಸೂಕ್ತ ತನಿಖೆಗೆ ಆಗ್ರಹಿಸಿ ಎಬಿವಿಪಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಉಡುಪಿ: ಉಡುಪಿ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಹುತಾತ್ಮರ ಸ್ಮಾರಕದ ಬಳಿ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದು, ಪ್ರತಿಭಟನಾ ಸ್ಥಳಕ್ಕೆ ಉಡುಪಿ ಎಸ್‌ಪಿ ಅಕ್ಷಯ್ ಮಚ್ಚೀಂದ್ರ ಭೇಟಿ ನೀಡಿದ್ದಾರೆ.
Karnataka Breaking Kannada News Live: ಉಡುಪಿಯಲ್ಲಿ ವಿಡಿಯೋ ಚಿತ್ರೀಕರಣ; ಬೆಂಗಳೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ಬೆಂಗಳೂರು: ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ವೀಡಿಯೋ ಚಿತ್ರೀಕರಣ ವಿಚಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಸಾಥ್ ಕೊಟ್ಟಿದ್ದು, ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
Karnataka Breaking Kannada News Live: ಉಡುಪಿಯಲ್ಲಿ ವಿಡಿಯೋ ಚಿತ್ರೀಕರಣ; ಸ್ನೇಹಿತರಲ್ಲಿ ಇಂತಹ ಘಟನೆಗಳು ನಡೆಯುತ್ತೆ, ಸಚಿವ ಪರಮೇಶ್ವರ್
ಬೆಂಗಳೂರು: ಸ್ನೇಹಿತರಲ್ಲಿ ಇಂತಹ ಘಟನೆಗಳು ನಡೆಯುತ್ತೆ, ಅದೆಲ್ಲ ಅಲ್ಲಿಗೆ ಬಿಟ್ಟು ಹೋಗುತ್ತಿತ್ತು ಎಂದು ಹೇಳಿದ್ದು, ಅಂತಹ ಘಟನೆ ಕುರಿತು ಪ್ರಿನ್ಸಿಪಾಲ್ಗೆ ಬಿಡಬೇಕು. ಅದಕ್ಕೆ ಅವರನ್ನ ಸಸ್ಪೆಂಡ್ ಮಾಡೋದಾದರೇ ಅಥವಾ ಇನ್ನು ಹೆಚ್ಚಿನ ಕ್ರಮ ಬೇಕು ಅಂದರೆ ತೆಗೆದುಕೊಳ್ಳುತ್ತಾರೆ, ಅವರಿಗೆ ಬಿಟ್ಟಿದ್ದು. ನಾವು ಇದಕ್ಕೆ ಮಧ್ಯಪ್ರವೇಶ ಮಾಡಬಾರದು ಎಂದರು. ಇನ್ನು ಘಟನೆ ಕುರಿತು ಈಗಾಗಲೇ ಪೊಲೀಸರು ಸೊಮೋಟೋ ದಾಖಲಿಸಿಕೊಂಡಿದ್ದಾರೆ. ತನಿಖೆ ಆಗುತ್ತೆ, ಸತ್ಯಾ ಸತ್ಯತೆ ಹೊರ ಬರುತ್ತೆ ಎಂದಿದ್ದಾರೆ.
Karnataka Breaking Kannada News Live: ಉಡುಪಿಯಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ; ಬಿಜೆಪಿ ಕಾರ್ಯಕರ್ತರಿಂದ ಪರಮೇಶ್ವರ್ ಮನೆಗೆ ನುಗ್ಗಲು ಯತ್ನ
ಬೆಂಗಳೂರು: ಉಡುಪಿ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜು.27) ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸುತ್ತಿದ್ದು. ಇದೀಗ ಗೃಹ ಸಚಿವ ಪರಮೇಶ್ವರ್ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಈ ಹಿನ್ನಲೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.
Karnataka Breaking Kannada News Live: ಬಿಬಿಎಂಪಿ ಅಧಿಕಾರಿಗಳಿಂದ ಬೆಳ್ಳಂಬೆಳಗ್ಗೆ ಬೊಮ್ಮನಹಳ್ಳಿ ರೌಂಡ್ಸ್
ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬೊಮ್ಮನಹಳ್ಳಿ ರೌಂಡ್ಸ್ ಹಾಕುತ್ತಿದ್ದಾರೆ. ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಅಜಿತ್ ಹಾಗೂ ಅಧಿಕಾರಿಗಳೊಂದಿಗೆ ಎಚ್ಎಸ್ಆರ್ ಬಡಾವಣೆ ವೀಕ್ಷಣೆ ಮಾಡಿದ್ದು, ರಾಜಕಾಲುವೆ ಮತ್ತು ಕಸ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮಳೆ ಸಂಬಂಧಿತ ಸಮಸ್ಯೆಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಲವು ಕಡೆ ಪರಿಶೀಲನೆ ನಡೆಸುತ್ತಿದ್ದಾರೆ.
Karnataka Breaking Kannada News Live: ಉಡುಪಿಯಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ; ಇಂದು ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ
ಬೆಂಗಳೂರು: ಉಡುಪಿ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜು.27) ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಲಿದ್ದಾರೆ. ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ ಮನೆಗೆ ಮುತ್ತಿಗೆ ಹಾಕುವ ನಿರ್ಧಾರ ಹಿನ್ನಲೆ ಸಚಿವರ ಮನೆ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅದರಂತೆ ಸದಾಶಿವನಗರ ನಿವಾಸದ ರಸ್ತೆಗೆ ಬ್ಯಾರಿಕೇಟ್ ಹಾಕಿರುವ ಪೊಲೀಸರು, ಒಂದು ಕೆಎಸ್ಆರ್ಪಿ ತುಕಡಿ ಕೂಡ ನಿಯೋಜನೆ ಮಾಡಲಾಗಿದೆ.
Karnataka Breaking Kannada News Live: ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ, ಸಿಎಂ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ತುರ್ತು ಸಿಎಲ್‌ಪಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಪರಿಷತ್ ಸಭಾ ನಾಯಕ ಎನ್.ಎಸ್.ಬೋಸರಾಜು ಹಾಗೂ ಸಚಿವರು ಸೇರಿದಂತೆ ಕಾಂಗ್ರೆಸ್‌ನ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ. ಇಂದು ನಡೆಯುವ ಸಭೆ ಮಹತ್ವದಾಗಿದ್ದು, ಈಗಾಗಲೇ ಸಚಿವರ ವಿರುದ್ದ ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಸಿಎಂ ಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnataka Breaking Kannada News Live: ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ; ಸಾವಿರಾರು ಎಕರೆಗೂ ಅಧಿಕ ಕೃಷಿ ಜಮೀನು ಜಲಾವೃತ
ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ಜಿಲ್ಲೆಯ ಸಿದ್ರಳ್ಳಿ, ಎಮ್ಮೆದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ನೆರೆ ಆತಂಕ ಎದುರಾಗಿದೆ. ಈ ಹಿನ್ನಲೆ ಸಾವಿರಾರು ಎಕರೆಗೂ ಅಧಿಕ ಕೃಷಿ ಜಮೀನು ಜಲಾವೃತವಾಗಿದ್ದು, ಆಲೂಗಡ್ಡೆ, ಶುಂಠಿ, ಟೊಮ್ಯಾಟೊ, ತೆಂಗಿನ ತೋಟಗಳು ಮುಳುಗಡೆಯಾಗಿದೆ.
Karnataka Breaking Kannada News Live: ಅಥಣಿಯಲ್ಲಿ ಮಳೆಯಿಂದ ಮನೆಗೋಡೆ ಕುಸಿದು ಯುವಕ ದುರ್ಮರಣ
ಬೆಳಗಾವಿ: ಜಿಲ್ಲೆಯ ಅಥಣಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯಿಂದ ಮನೆಗೋಡೆ ಕುಸಿದು 23 ವರ್ಷದ ಕಾಶಿನಾಥ್ ಸುತಾರ್ ಎಂಬ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ನಿರಂತರ ಮಳೆಗೆ ಮನೆ ಗೋಡೆ ನೆನೆದು ಈ ಅವಘಡ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Karnataka Breaking Kannada News Live: ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಹವಾಮಾನ ಇಲಾಖೆ ಇಂದು ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಜಿಲ್ಲೆಯ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಿದ್ದಾರೆ.
Karnataka Breaking Kannada News Live: ಮುಂಗಾರು ಮಳೆ ಅಬ್ಬರ; ಹಲವು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಮಳೆ ಅಬ್ಬರಕ್ಕೆ ಅನೇಕ ಜಿಲ್ಲೆಗಳು ತತ್ತರಿಸಿದ್ದು ಡ್ಯಾಂಗಳು ತುಂಬಿ ಹರಿಯುತ್ತಿವೆ. ಅದರಂತೆ ಇಂದು(ಜು.27) ಬಳ್ಳಾರಿ, ಹಾಸನ, ಚಿಕ್ಕಮಗಳೂರು, ರಾಯಚೂರು, ಉಡುಪಿ, ಕೊಪ್ಪಳ ಜಿಲ್ಲೆಗಳಲ್ಲಿ ಮುಂಜಾಗೃತ ಕ್ರಮವಾಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
Published On - Jul 27,2023 8:16 AM