ರಾಯಚೂರು: ಜಿಲ್ಲೆಯಲ್ಲಿ ಈ ಬಾರಿ ರೈತರು ಹತ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಸುಮಾರು 2.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಇದೆ. ಮಾರುಕಟ್ಟೆಯಲ್ಲಿ ಹತ್ತಿಗೆ ಬಂಗಾರದ ಬೆಲೆ ಇದೆ. ಕ್ವಿಂಟಲ್ ಹತ್ತಿಯು 8-9 ಸಾವಿರ ರೂಪಾಯಿಯವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ರಾಯಚೂರು ತಾಲೂಕಿನ ಹಲವು ಗ್ರಾಮಗಳು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದ ಗಡಿಯಲ್ಲಿವೆ. ಆ ಭಾಗದಲ್ಲಿ ಹತ್ತಿ ಬೆಳೆಯ ಸಮಸ್ಯೆ ಎದುರಾಗಿದೆ. ಈ ಹಿಂದೆ ಇರದ ಇಳುವರಿ ಸಮಸ್ಯೆಯನ್ನು ರೈತರು ಈ ಬಾರಿ ಅನುಭವಿಸುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿಯಲ್ಲಿದ್ದಾರೆ ರೈತರು.
ರಾಯಚೂರು ತಾಲೂಕಿನ ಗಿಲ್ಲೆಸುಗೂರು, ಸಗಮಕುಂಟಾ, ಮೀರಾಪುರ, ಮಟಮಾರಿ ಸೇರಿ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಹತ್ತಿ ಇಳುವರಿ ಕುಂಠಿತವಾಗಿದೆ. ಈ ಬಾರಿ ಇಳುವರಿ ಕಡಿಮೆಯಾಗಲು ಕಳಪೆ ಬೀಜದ ಸಮಸ್ಯೆಯೇ ಮುಖ್ಯ ಕಾರಣ ಎಂದು ರೈತರು ಆರೋಪಿಸಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಗಡಿ ಭಾಗದಲ್ಲಿಯೂ ರೈತರು ಹತ್ತಿ ಬೆಳೆ ಸಮಸ್ಯೆ ಎದುರಿಸುತ್ತಿದ್ದು,ಕೃಷಿ ಇಲಾಖೆಗೆ ಈ ಸಂಬಂಧ ಸರಣಿ ದೂರುಗಳು ಬಂದಿವೆ. ಈ ಸಮಸ್ಯೆಯನ್ನು ಕೃಷಿ ಇಲಾಖೆ ಕೂಡ ಗಂಭೀರವಾಗಿ ಪರಿಣಮಿಸಿದೆ. ಗಡಿ ಭಾಗದಲ್ಲಿ ಹತ್ತಿ ಇಳುವರಿ ಕುಂಠಿತವಾಗಿರುವ ಬಗ್ಗೆ ಅಧ್ಯಯನಕ್ಕೆ ಮುಂದಾಗಿದೆ. ಹತ್ತಿ ಬಿತ್ತನೆ ಪದ್ದತಿ, ಕಳಪೆ ಬೀಜಗಳಿಂದಲೂ ಈ ರೀತಿ ಇಳುವರಿ ಸಮಸ್ಯೆಯಾಗಿರುವ ಸಾಧ್ಯತೆಯಿದೆ. ಈ ಬಾರಿ ಮಳೆಯೂ ಹೆಚ್ಚಾಗಿದ್ದು, ಜೊತೆಗೆ ಕೀಟ ಭಾದೆಯೂ ಕಂಡು ಬಂದಿದೆ. ಆದರೆ ಹತ್ತಿ ಇಳುವರಿ ಕಡಿಮೆಯಾಗಲು ಈ ಪೈಕಿ ಯಾವುದು ಮುಖ್ಯ ಕಾರಣ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ, ಹತ್ತಿ ಇಳುವರಿಯು ಕುಂಠಿತಗೊಂಡಿರುವ ಹೊಲಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿದೆ. ಗಿಲ್ಲೆಸುಗೂರು ಭಾಗದಲ್ಲಿ ಹತ್ತಿ ಇಳುವರಿ ಸಮಸ್ಯೆಗೆ ಕಳಪೆ ಬೀಜ, ರೋಗ ಹಾಗೂ ಕೀಟ ಬಾಧೆ ಕಾರಣ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಈ ವರದಿ ಆಧಾರದ ಮೇಲೆ ಹಾನಿಗೊಳಗಾದ ಸಂತ್ರಸ್ತ ರೈತರು ಗ್ರಾಹಕರ ನ್ಯಾಯಾಲಯಕ್ಕೆ ಹೋಗಬಹುದು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ವಿಶೇಷವಾಗಿ ಮಕ್ಕಳ ದಿನಾಚರಣೆ ಆಚರಿಸಿಕೊಂಡ ರಾಯಚೂರು ಜಿಲ್ಲಾ ಪೊಲೀಸರು
ವರದಿ: ಭೀಮೇಶ್ ಪೂಜಾರ್ ಟಿವಿ9 ರಾಯಚೂರು
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ