ರಾಯಚೂರು: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ನಾಲ್ವರು ವಿದ್ಯಾರ್ಥಿಗಳು (students) ಅಸ್ವಸ್ಥರಾಗಿರುವಂತಹ ಘಟನೆ ತಾಲೂಕಿನ ಅಪ್ಪನದೊಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಸದ್ಯ ವೈದ್ಯರನ್ನು ಕರೆಸಿ ಶಾಲೆಯಲ್ಲೇ ಅಸ್ವಸ್ಥ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇಂದು ಮಧ್ಯಾಹ್ನ ಬಿಸಿಯೂಟಕ್ಕೆ ಸಿಬ್ಬಂದಿಗಳು ಉಪ್ಪಿಟ್ಟು ಮಾಡಿದ್ದರು. ಅಡುಗೆ ಪಾತ್ರೆಯ ತಳಹದಿಯಲ್ಲಿ ಹಲ್ಲಿ ಪತ್ತೆಯಾಗಿದೆ. ಘಟನೆಗೆ ಸದ್ಯ ಇಬ್ಬರು ಅಡುಗೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಕೇಳಿಬಂದಿದೆ.
ಸರ್ಕಾರಿ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶಾಲೆ ಆವರಣದಲ್ಲಿ ಮಕ್ಕಳ ಪೋಷಕರು ಜಮಾಯಿಸಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಬಡವರ ದೃಷ್ಟಿಯಲ್ಲಿಟ್ಟುಕೊಂಡೆ ಇನ್ಫೋಸಿಸ್ ಮತ್ತು ಅದಮ್ಯ ಚೇತನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 5 ರೂಪಾಯಿಗೆ ಊಟ ಕೊಡ್ತಿದೆ!
ಹಾವೇರಿ: ಮದುವೆ ಸಮಾರಂಭದಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಪ್ಪದಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಚಪ್ಪದಹಳ್ಳಿಯ ಶಂಕರಪ್ಪ ಹಿತ್ತಲಮನಿ ಎಂಬುವರ ಪುತ್ರಿಯ ಮದುವೆ ಕಾರ್ಯಕ್ರಮದಲ್ಲಿ ಜನರು ಊಟ ಮಾಡಿದ್ದರು. ಮೇ. 23ರ ರಾತ್ರಿಯಿಂದ 50ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ ಶುರುವಾಗಿತ್ತು. ಕೂಡಲೇ ಅಸ್ವಸ್ಥಗೊಂಡವರಿಗೆ ರಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಹಾಸನ: ಮಧ್ಯಾಹ್ನದ ಬಿಸಿ ಊಟ ಸೇವಿಸಿದ 35 ಸೈನಿಕರು ಅಸ್ವಸ್ಥರಾಗಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಕುಡುಗರಹಳ್ಳಿಯಲ್ಲಿ ಇತ್ತೀಚೆಗೆ ಕಂಡುಬಂದಿತ್ತು. ಅಸ್ವಸ್ಥ ಸೈನಿಕರಿಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ಕೊಪ್ಪಳ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಭ್ರೂಣ ಪತ್ತೆ! ಡಿಹೆಚ್ಒ ವಿರುದ್ಧ ಸಚಿವ ತಂಗಡಗಿ ಗರಂ
ವಾಹನ ಚಾಲನಾ ತರಬೇತಿಗೆ ಸೈನಿಕರು ಬಂದಿದ್ದರು ಎನ್ನಲಾಗಿದೆ. ಮಧ್ಯಾಹ್ನ ಕ್ಯಾಂಪ್‌ನಲ್ಲೇ ತಯಾರಾದ ಆಹಾರ ಸೇವಿಸಿದ ಬಳಿಕ ಸೈನಿಕರು ಅಸ್ವಸ್ಥತೆಗೆ ಒಳಗಾಗಿದ್ದಾರೆ ಎನ್ನಲಾಗಿತ್ತು. ಸದ್ಯ ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿದ್ದು, ಅಸ್ವಸ್ಥಗೊಂಡಿರುವ ಸೈನಿಕರ ಆರೋಗ್ಯ ವಿಚಾರಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:51 pm, Sat, 1 July 23