ರಾಯಚೂರು: ನಗರದ ಬಾಲಕಿಯರ ಸರ್ಕಾರಿ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಮೂವರು ವಿದ್ಯಾರ್ಥಿನಿಯರು ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿದ್ದರೆ ಒಬ್ಬರು ಮಾತ್ರ ಪ್ರಥಮ ಪಿಯುಸಿ ಓದುತ್ತಿದ್ದರು. ವಿದ್ಯಾರ್ಥಿನಿಯರ ನಾಪತ್ತೆ ಕುರಿತು ಪ್ರತಿಕ್ರಿಯಿಸಿರುವ ಪ್ರಾಚಾರ್ಯ ಚಂದ್ರಶೇಖರ್, ವಿದ್ಯಾರ್ಥಿನಿಯರ ನಾಪತ್ತೆ ವಿಷಯವು ಜುಲೈ 23ರಂದು ಗೊತ್ತಾಯಿತು. ಕಾಲೇಜು ಕ್ಯಾಂಪಸ್ನ ಆಚೆ ಈ ವಿದ್ಯಮಾನ ನಡೆದಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯರ ಬಗ್ಗೆ ತರಗತಿ ಉಪನ್ಯಾಸಕರಿಂದ ಮಾಹಿತಿ ಪಡೆದಿದ್ದೇವೆ. ಇವರು ನಾಲ್ವರೂ ಕಾಲೇಜಿಗೆ ಸರಿಯಾಗಿ ಬರುತ್ತಿರಲಿಲ್ಲ. ಕಲಿಕೆಯಲ್ಲಿಯೂ ಹಿಂದುಳಿದಿದ್ದರು. ಹಾಜರಾತಿ ದಾಖಲೆ ಪ್ರಕಾರ 4 ದಿನಗಳಿಂದ ಕಾಲೇಜಿಗೆ ಗೈರುಹಾಜರಾಗಿದ್ದಾರೆ. ಪೊಲೀಸರು ಕೇಳಿದ್ದರಿಂದ ಅವರಿಗೆ ಹಾಜರಾತಿ ಪುಸ್ತಕ ಮತ್ತು ಅಗತ್ಯ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.
ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದೇವೆ. ಕಾಲೇಜ್ ಕ್ಯಾಂಪಸ್ನಲ್ಲಿ ಸಿಸಿ ಕ್ಯಾಮೆರಾ ಸ್ಥಗಿತಗೊಂಡಿದೆ. ಅದರಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಪ್ರಾಚಾರ್ಯರು ಹೇಳಿದರು. ನಾಪತ್ತೆಯಾದ ವಿದ್ಯಾರ್ಥಿನಿಯರನ್ನು ಹುಡುಕಲು ಯತ್ನಿಸಿದ ಪೋಷಕರು ತಮ್ಮ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಕ್ಕಳನ್ನು ಹುಡುಕಿಕೊಂಡು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಗಡಿಭಾಗಗಳಿಗೂ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ರಾಯಚೂರು ಮಹಿಳಾ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಲಿಂಗಸುಗೂರು: ಕಿಡ್ನಿ ವೈಫಲ್ಯದಿಂದ ಯೋಧನ ಸಾವು
ಕಿಡ್ನಿ ವೈಫಲ್ಯದಿಂದ ಲಿಂಗಸುಗೂರು ತಾಲೂಕಿನ ಉಪ್ಪಾರನಂದಿಹಾಳ ಗ್ರಾಮದ ಸಿಆರ್ಪಿಎಫ್ ಯೋಧ ನೂರ್ಸಾಬ್ ನಿಧನರಾಗಿದ್ದಾರೆ. 2009ರಲ್ಲಿ ಛತ್ತೀಸಗಡದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ ವೇಳೆ ಯೋಧ ನೂರ್ಸಾಬ್ ಗಾಯಗೊಂಡಿದ್ದರು. ಈ ವೇಳೆ ಅವರ ಕಿಡ್ನಿಗೆ ಘಾಸಿಯಾಗಿತ್ತು. ನಂತರ ಯೋಧನ ತಾಯಿ ಕಿಡ್ನಿ ದಾನ ಮಾಡಿದ್ದರು. ಗುಣಮುಖರಾಗಿ ಹೈದರಾಬಾದ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೂರ್ಸಾಬ್ ಅವರ ಕಿಡ್ನಿ ಮತ್ತೆ ವಿಫಲವಾದ ಹಿನ್ನೆಲೆಯಲ್ಲಿ ಮೃತಪಟ್ಟರು.
Published On - 2:10 pm, Mon, 25 July 22