‘ನಿಮ್ಮ ಕಾಲುಗಳು ಎಷ್ಟು ಸುಂದರ‘: ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯೊಂದಿಗೆ ಆಸ್ಪತ್ರೆ ಸಿಬ್ಬಂದಿ ಅಸಭ್ಯ ವರ್ತನೆ

ರಾಯಚೂರಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆಗೆ ದಾಖಲಾದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಸಂತ್ರಸ್ತೆ ಸಹೋದರಿ ಆತನಿಗೆ ಸಾರ್ವಜನಿಕವಾಗಿ ಥಳಿಸಿದ ವಿಡಿಯೋ ವೈರಲ್ ಆಗಿತ್ತು. ಇನ್ನು ಸಂತ್ರಸ್ತೆ ಸಾಮಾಜಿಕ ಜಾಲತಾಣದಲ್ಲಿ ಧೈರ್ಯವಾಗಿ ವಿಷಯ ಬಹಿರಂಗಪಡಿಸಿದ್ದು, ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆರೋಪಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

‘ನಿಮ್ಮ ಕಾಲುಗಳು ಎಷ್ಟು ಸುಂದರ‘: ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯೊಂದಿಗೆ ಆಸ್ಪತ್ರೆ ಸಿಬ್ಬಂದಿ ಅಸಭ್ಯ ವರ್ತನೆ
ಆಸ್ಪತ್ರೆ ಸಿಬ್ಬಂದಿಗೆ ಸಂತ್ರಸ್ತೆ ಸಹೋದರಿಯಿಂದ ಥಳಿತ
Image Credit source: tv9 kannada
Edited By:

Updated on: Apr 24, 2026 | 9:42 PM

ರಾಯಚೂರು, ಏಪ್ರಿಲ್​ 24: ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಬಂದಿದ್ದ ಮಹಿಳೆ ಜೊತೆ ಆಸ್ಪತ್ರೆ ಸಿಬ್ಬಂದಿ ಕಾಲು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ (physical assault) ಘಟನೆ ರಾಯಚೂರು (Raichur) ನಗರದಲ್ಲಿ ಇತ್ತೀಚೆಗೆ ನಡೆದಿತ್ತು. ಇದೇ ಕಾರಣಕ್ಕೆ ಸಂತ್ರಸ್ತೆ ಕಡೆಯವರು ಸಿಬ್ಬಂದಿಗೆ ಸಾರ್ವಜನಿಕವಾಗಿ ಥಳಿಸಿದ್ದು, ವಿಡಿಯೋ ವೈರಲ್ ಆಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಖೆಡ್ಡಾಗೆ ಬಿದ್ದಿದ್ದಾರೆ.

ರಾಯಚೂರು ನಗರದಲ್ಲಿ ಇತ್ತೀಚೆಗೆ ವಿಚಿತ್ರ ಘಟನೆಯೊಂದು ನಡೆದಿತ್ತು. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೆಹಬೂಬ್ ಎನ್ನುವ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಜೊತೆ ತೀರಾ ಅಸಭ್ಯವಾಗಿ ವರ್ತಿಸಿದ್ದನಂತೆ. ಆಗ ಕಣ್ಣೀರಿಡುತ್ತಾ ಆ ಸಂತ್ರಸ್ತೆ ಅಲ್ಲಿಂದ ಹೊರಟು ಹೋಗಿದ್ದರು. ಈ ವಿಚಾರ ತಿಳಿದ ಸಂತ್ರಸ್ತೆ ಸಹೋದರಿ, ಮೆಹಬೂಬ್​​ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಹಾರಿಕೆ ಉತ್ತರ ಕೊಡುತ್ತಿದ್ದಂತೆ ಕೆರಳಿದ್ದ ಸಂತ್ರಸ್ತೆ ಸಹೋದರಿ ಆತನಿಗೆ ಸರಿಯಾಗಿ ಥಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಇಂಜಿನಿಯರ್; ಫೋಟೋ, ವೀಡಿಯೋ ಸಮೇತ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಘಟನೆ ಬಗ್ಗೆ ಎಳೆಎಳೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಮಾಹಿತಿ ಬಿಚ್ಚಿಟ್ಟಿದ್ದಾಳೆ. ಆತನಿಗೆ ಥಳಿಸಿದ್ದರ ಹಿಂದಿನ ಅಸಲಿ ಕಾರಣವನ್ನ ರಿವೀಲ್ ಮಾಡಿದ್ದಾರೆ.

ಸಂತ್ರಸ್ತೆ ಬಿಚ್ಚಿಟ್ಟ ಅಸಲಿ ಕಥೆ ಏನು?

ರಾಯಚೂರಿನ ಪ್ರತಿಯೊಬ್ಬರಿಗೂ ನಾನು ಈ ವಿಷಯವನ್ನು ತಿಳಿಸಲು ಬಯಸುತ್ತೇನೆ. ಆತನ ಹೆಸರು ಮೆಹಬೂಬ್. ಈತ ಸುರಕ್ಷಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ನಾನು ತೀವ್ರವಾದ ಡಿವಿಟಿ (DVT) ಸಮಸ್ಯೆಯಿಂದ ಬಳಲುತ್ತಿದ್ದೆ, ಹಾಗಾಗಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ವೈದ್ಯರು ನನ್ನನ್ನು ಅಡ್ಮಿಟ್ ಆಗಲು ಹೇಳಿದರು. ಆಗ ಮೆಹಬೂಬ್ ಬಂದು ಪರದೆಯನ್ನು ಎಳೆದು, ನನ್ನ ಕಾಲನ್ನು ಮುಟ್ಟುತ್ತಾ, “ನಿಮ್ಮ ಕಾಲುಗಳು ಎಷ್ಟು ಸುಂದರ ಮತ್ತು ಮೃದುವಾಗಿವೆ, ನಿಮಗೆ ಮದುವೆಯಾಗಿದೆ ಅಲ್ವಾ, ಗಂಡನ ಜೊತೆ ನಿಮಗೆ ಆಪ್ತವಾಗಲು ಅನಿಸುವುದಿಲ್ಲವೇ?” ಎಂದು ಅಸಭ್ಯವಾಗಿ ಮಾತನಾಡಲಾರಂಭಿಸಿದ.

ನಾನು ಈಗಾಗಲೇ ನೋವಿನಲ್ಲಿದ್ದೆ, ಇದನ್ನು ಕೇಳಿ ಅಳಲು ಪ್ರಾರಂಭಿಸಿದೆ. ಸುರಕ್ಷಾ ಆಸ್ಪತ್ರೆಯವರು ಆತನನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ಅಗತ್ಯ ಕ್ರಮಕೈಗೊಂಡರು. ಪೊಲೀಸರು ಸ್ಥಳಕ್ಕೆ ಬಂದರು, ಆದರೆ ಆತನನ್ನು ಕೆಲಸದಿಂದ ತೆಗೆದುಹಾಕಿದ್ದರಿಂದ ಆತ ಬುದ್ದಿ ಕಲಿತಿರಬಹುದು ಎಂದು ನಾವು ಭಾವಿಸಿದೆವು. ಆದರೆ ನಂತರ ನನ್ನ ಅಕ್ಕ ಆತನಿಗೆ ಎಚ್ಚರಿಕೆ ನೀಡಲು ಫೋನ್ ಮಾಡಿದಾಗ, ಆತ “ನಾನು ನಿಮಗೆ ಯಾರಿಗೂ ಹೆದರುವುದಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಉದ್ಧಟತನದಿಂದ ಉತ್ತರಿಸಿದ್ದಾನೆ. ಇದು ನನ್ನ ಕುಟುಂಬದವರನ್ನು ಮತ್ತೆ ಕೆರಳಿಸಿತು. ನಾನು ಸಹಾಯಕ್ಕಾಗಿ ಬಜರಂಜದಳ, ಬಿಜೆಪಿ ನಾಯಕರು ಮತ್ತು ಎಲ್ಲರನ್ನೂ ವಿನಂತಿಸಿದೆ. ಎಲ್ಲರಿಗೂ ಕರೆ ಮಾಡಿದೆ. ಆದರೆ ನಮಗೆ ಸಹಾಯ ಮಾಡಲು ಯಾರೂ ಬರಲಿಲ್ಲ. ಆದ್ದರಿಂದಲೇ ಈ ಕ್ರಮವನ್ನು ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಮೆಹಬೂಬ್​​ಗೆ ಪೊಲೀಸರಿಂದ ಖಡಕ್​ ಎಚ್ಚರಿಕೆ

ಇತ್ತ ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸದರ ಬಜಾರ್ ಪೊಲೀಸರು ಆರೋಪಿ ಮೆಹಬೂಬ್ ನನ್ನ ಬಂಧಿಸಿ ದಂಡಾಧಿಕಾರಿಗಳ ಎದುರು ಹಾಜರುಪಡಿಸಿದ್ದಾರೆ. ಇನ್ನೊಮ್ಮೆ ಹೆಣ್ಣು ಮಕ್ಕಳ ತಂಟೆಗೆ ಹೋಗದಂತೆ, ಚುಡಾಯಿಸಿದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಸಂತ್ರಸ್ತೆ ಈ ಬಗ್ಗೆ ಖುದ್ದು ದೂರು ನೀಡಿಲ್ಲ. ಹೀಗಾಗಿ ಪೊಲೀಸರು ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿರುವುದರಿಂದ ನೀವೇ ದೂರು ದಾಖಲಿಸಿ ಅಂತ ಆ ಖಾಸಗಿ ಆಸ್ಪತ್ರೆ ಆಡಳಿತ ವರ್ಗದವರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ತಾಯಿ ಸಾವು: ಮಹಿಳಾ ಉದ್ಯೋಗಿ ಸಾವಿನ ಸುತ್ತ ಅನುಮಾನದ ಹುತ್ತ

ಇತ್ತ ಸಂತ್ರಸ್ತೆ ಧೈರ್ಯವಾಗಿ ನಡೆದ ಘಟನೆಯನ್ನ ಪೋಸ್ಟ್ ಮಾಡಿರುವ ಹಿನ್ನೆಲೆ ನೆಟ್ಟಿಗರು ಆಕೆಯ ಧೈರ್ಯಕ್ಕೆ ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ. ನ್ಯಾಯಕ್ಕಾಗಿ ಧ್ವನಿ ಎತ್ತಿರುವ ಸಂತ್ರಸ್ತೆ ಪರ ನೆಟ್ಟಿಗರು ವಾದ ಮಾಡ್ತಿದ್ದು, ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಅಂತ ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us