ರಾಯಚೂರು, ಅ.21: ಸುಳ್ಳು ಎಂದರೂ ಕೇಳುತ್ತಿಲ್ಲ. ಒಟ್ಟಿನಲ್ಲಿ ಫ್ರೀ ಸೈಟ್ (Site) ಕೊಡುತ್ತಾರೆ ಎನ್ನುವುದನ್ನೇ ಸತ್ಯ ಎಂದು ಕೆಲವರು ನಿನ್ನೆ(ಅ.20) ಕೂಡ ಫ್ರೀ ಸೈಟ್ ಜಾಗ ಹುಡುಕಾಟಕ್ಕೆ ಮುಂದಾಗಿದ್ದರು. ಮೊನ್ನೆಯಷ್ಟೇ ಟಿವಿ9, ಜನರನ್ನು ದಿಕ್ಕು ತಪ್ಪಿಸಲಾಗುತ್ತಿರುವ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು. ಇದೆಲ್ಲಾ ಸುಳ್ಳು, ಯಾರೋ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಾರಿ ಸಾರಿ ಹೇಳಲಾಗಿತ್ತು. ಬಳಿಕ ಟಿವಿ9 ವರದಿ ಬೆನ್ನಲ್ಲೇ ನಗರ ಸಭೆ ಅಧಿಕಾರಿಗಳು ಕೂಡ ಅತಿಕ್ರಮಣ(Trespass) ತೆರವಿಗೆ ಮುಂದಾಗಿದ್ದರು. ವಾಗ್ವಾದಗಳ ಮಧ್ಯೆಯೇ ತೆರವು ಕಾರ್ಯಾಚರಣೆ ನಡೆದಿತ್ತು. ನಗರ ಸಭೆ ಕೂಡ ಕಾನೂನು ರೀತಿ ಅವಕಾಶ ಇದೆ. ಉಚಿತ ಸೈಟ್ ತೆಗೆದುಕೊಳ್ಳಿ. ಆದರೀಗ ಏಕಾಏಕಿ ಫ್ರೀ ಕೊಡಲಾಗುತ್ತಿದೆ ಎನ್ನುತ್ತಿರುವುದು ಸುಳ್ಳು ಎಂದು ಖಚಿತಪಡಿಸಿತ್ತು. ಆದರೂ ಜನ ಮಾತ್ರ ಅಧಿಕಾರಿಗಳ ಮಾತು ಒಪ್ಪುತ್ತಿಲ್ಲ. ಈ ಹಿನ್ನಲೆ ನಿನ್ನೆ ಕೂಡ ಕೆಲವರು ಫ್ರೀ ಸೈಟ್ಗಾಗಿ ಹುಡುಕಾಟ ನಡೆಸಿದ್ದರು.
ಹೌದು, ವದಂತಿ ಎಂದು ಹೇಳಿದರೂ ಕೇಳದೇ, ರಾಯಚೂರು ನಗರದ ಆಶ್ರಯ ಕಾಲೋನಿಯ ನಗರಸಭೆಗೆ ಸೇರಿದ ಸರ್ವೆ ನಂಬರ್ 559 ರ 10 ಎಕರೆ ಸ್ಥಳದಲ್ಲಿ ಅತೀಕ್ರಮಣಕ್ಕೆ ಕೆಲವರು ಮತ್ತೆ ಮುಂದಾಗಿದ್ದರು. ಹೀಗಾಗಿ ವಿಧಿಯಿಲ್ಲದೇ ನಗರಸಭೆ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಹೌದು, ಕಂದಾಯ ಇಲಾಖೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳ ತಂಡಗಳಿಂದ ಬಡ ಜನರಿಗೆ ತಿಳಿ ಹೇಳಿದ್ದಾರೆ. ಆದ್ರೆ, ಯಾರೋ ತೆರೆ ಹಿಂದೆಯಿಂದ ಬಡವರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಹೀಗಾಗಿ ಬಡಜನ ಫ್ರೀ ಸೈಟ್ ಆಸೆ ಜೀವಂತವಾಗಿರಿಸಿಕೊಂಡಿದ್ದಾರೆ.
ಇದನ್ನೂ ಓದಿ:ರಾಯಚೂರು: ಜನ ಮರುಳೋ ಜಾತ್ರೆ ಮರುಳೋ, ಫ್ರೀ ಸೈಟ್ ಕೊಡ್ತಾರೆ ಅಂತ ಬೆಟ್ಟಕ್ಕೆ ಬೇಲಿ ಹಾಕಿದ ಜನ
ರಾಯಚೂರು ಗ್ರಾಮೀಣ ಪೊಲೀಸರು, ನಗರ ಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಾಗೂ ಇನ್ನುಳಿದ ಅಧಿಕಾರಿಗಳ ತಂಡ ಘಟನಾ ಸ್ಥಳ ಪರಿಶೀಲನೆ ಮಾಡಿದೆ. ಆದ್ರೆ, ಅಧಿಕಾರಿಗಳ ಮಾತನ್ನು ಕೇಳದೇ ಜೆಸಿಬಿ ಮೂಲಕ ಸರ್ಕಾರಿ ಸ್ಥಳದಲ್ಲಿ ಸೈಟ್ ಗುರುತು ಮಾಡಲಾಗುತ್ತಿತ್ತು. ಈ ಹಿನ್ನಲೆ ಅಂತಹವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗಿದೆ. ಜೆಸಿಬಿ ಚಾಲಕ ಸಾಬಣ್ಣ ಹಾಗೂ ಜಾಗ ಗುರುತು ಮಾಡುತ್ತಿದ್ದ ಜಾವೆದ್ ವಿರುದ್ಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅತೀಕ್ರಮಣಕ್ಕೆ ಬಳಸಲಾದ ಜೆಸಿಬಿಯನ್ನು ಕೂಡ ಜಪ್ತಿ ಮಾಡಲಾಗಿದೆ. ಇದಷ್ಟೇ ಅಲ್ಲ ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡದಿಂದ ತನಿಖೆ ಚುರುಕುಗೊಳಿಸಲಾಗಿದೆ. ಅದೇನೆ ಇರಲಿ ಜನರು ಅಧಿಕಾರಿಗಳ ಮಾತನ್ನ ಕೇಳಿ ವಸತಿ ರಹಿತರು ನಗರಸಭೆಯಲ್ಲೇ ಫ್ರೀ ಸೈಟ್ಗೆ ಅರ್ಜಿ ಸಲ್ಲಿಸಬಹುದು. ಕಾನೂನು ರೀತಿಯಲ್ಲೇ ಸೈಟ್ ಪಡೆದು ನಿಮಗಿಷ್ಟದ ಮನೆ ಕಟ್ಟಿಸಿಕೊಳ್ಳಿ. ವಿನಾಕಾರಣ ಸುಳ್ಳು ವದಂತಿ ನಂಬಿ ಮೋಸ ಹೋಗದಿರಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Sat, 21 October 23