ರಾಯಚೂರು, ಅಕ್ಟೋಬರ್ 25: ಬಿಸಿಲುನಾಡು ರಾಯಚೂರಿನಲ್ಲೀಗ (Raichur) ಮತ್ತೊಮ್ಮೆ ಜನ ಬೆಚ್ಚಿಬಿದ್ದಿದ್ದಿದ್ದಾರೆ. ಪದೇ ಪದೇ ಪ್ರತ್ಯಕ್ಷವಾಗ್ತಿರೊ ಚಿರತೆಗೆ (Leopard) ಆ ಭಾಗದವ್ರು ಉಸಿರು ಬಿಗಿಹಿಡಿದು ಬದುಕುತ್ತಿದ್ದಾರೆ. ಈಗ ಆ ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಮೇಕೆಯ ರಕ್ತ ಹೀರಿ ಕೊಂದು ಹಾಕಿದೆ. ಹೌದು, ಗಡಿ ಜಿಲ್ಲೆ ರಾಯಚೂರಿನಲ್ಲಿ ಮತ್ತೊಮ್ಮೆ ಚಿರತೆ ಪ್ರತ್ಯಕ್ಷವಾಗಿದೆ. ಜಿಲ್ಲೆಯ ಮಾನ್ವಿ ತಾಲ್ಲೂಕಿನ ನಿರಮಾನ್ವಿ ಹಾಗೂ ಸುತ್ತಲಿನ ಬೆಟ್ಟಗಳು ನಾಲ್ಕೈದು ಗ್ರಾಮಗಳ ಪಕ್ಕದಲ್ಲೇ ಇವೆ. ಈ ಭಾಗದಲ್ಲಿ ಚಿರತೆಗಳ ಹಾವಳಿ ಇದೇ ಮೊದಲೇನಲ್ಲ. ಈ ಹಿಂದಿನಿಂದಲೂ ನಿರಮಾನ್ವಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಲೇ ಇವೆ.
ನಿರಮಾನ್ವಿ ಗ್ರಾಮ ಸೇರಿ ನಾಲ್ಕೈದು ಹಳ್ಳಿಗಳ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಸ್ಥಳೀಯ ಗ್ರಾಮಸ್ಥರು ಕೃಷಿ ಮಾಡ್ತಾರೆ. ಅನೇಕರು ಕೂಲಿ ನಾಲೆಗೆ ಇದೇ ಮಾರ್ಗದಲ್ಲೇ ಹೋಗ್ತಾರೆ. ಇನ್ನೂ ಈ ಭಾಗದಲ್ಲಿ ಹೆಚ್ಚಾಗಿ ಕುರಿಗಾಹಿಗಳಿದ್ದು ಅವ್ರಿಗೆ ಕುರಿ, ಮೇಕೆಗಳನ್ನ ಮೇಯಿಸಲು ಈ ಬೆಟ್ಟಗಳೇ ಆಧಾರ. ಹೀಗೆ ನಿತ್ಯ ಓಡಾಡೋ ಈ ಬೆಟ್ಟಗಳಲ್ಲಿ ವಿವಿಧ ಕಾಡು ಪ್ರಾಣಿಗಳಿವೆ. ಇಲ್ಲಿ ಅರಣ್ಯ ಪ್ರದೇಶ ಹೆಚ್ಚಿರೊ ಕಾರಣಕ್ಕೆ ಕಾಡು ಪ್ರಾಣಿಗಳ ಹಾವಳಿ ಕೂಡ ಅಷ್ಟೆ ಹೆಚ್ಚಾಗಿದೆ. ಇದೇ ಆಗಸ್ಟ್ನಲ್ಲೂ ಚಿರತೆ ನಿರಮಾನ್ವಿಯ ಬೆಟ್ಟದಲ್ಲಿ ಕಾಣಿಸಿಕೊಂಡಿತ್ತು.
ಇದಕ್ಕೂ ಮೊದಲು ನಾಲ್ಕೈದು ತಿಂಗಳುಗಳ ಹಿಂದೆ ಇದೇ ನಿರಮಾನ್ವಿ ಬೆಟ್ಟದಲ್ಲಿ ನಾಲ್ಕೈದು ಚಿರತೆಗಳು ಕಾಣಿಸಿಕೊಂಡಿದ್ವು. ಆಗ ಗ್ರಾಮಸ್ಥರು,ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಚಿರತೆಗಳ ಪತ್ತೆಗೆ ಮುಂದಾಗಿದ್ರು. ನಂತ್ರ ಚಿರತೆಗಳನ್ನ ಪತ್ತೆಹಚ್ಚಿ ಒಂದು ಚಿರತೆ ಸೆರೆಹಿಡಿದಿದ್ರು. ಇದಾದ ಬಳಿಕ ಚಿರತೆಗಳು ಇತ್ತ ತಲೆ ಹಾಕಿರ್ಲಿಲ್ಲ. ಆದ್ರೀಗ ಕಳೆದ ನಾಲ್ಕೈದು ದಿನಗಳ ಹಿಂದೆ ಮತ್ತೆ ಚಿರತೆಗಳ ದಂಡು ಬೀಡುಬಿಟ್ಟಿವೆ..
ನಿರಮಾನ್ವಿ ಬೆಟ್ಟದ ಬಳಿ ಮಾನ್ವಿ ಪಟ್ಟಣಕ್ಕೆ ಹೊಂದಿಕೊಂಡಿರೊ ಬೆಟ್ಟವೊಂದರಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಇಲ್ಲಿಯೂ ಕುರಿಗಾಹಿಗಳು ಹೆಚ್ಚಾಗಿ ಕುರಿ-ಮೇಕೆಗಳನ್ನ ಮೇಯಿಸಲು ಹೋಗ್ತಾರೆ. ಅದೇ ರೀತಿ ಮಂಗಳವಾರವಷ್ಟೇ ಚಿರತೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹಾಗೂ ಸ್ಥಳೀಯರು ಚಿರತೆ ಪ್ರತ್ಯಕ್ಷವಾಗಿದೆ ಅಂತ ಹೇಳಲಾದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿತ್ತು. ಆಗ ಸ್ಥಳೀಯರು ಬೆಚ್ಚಿ ಬೀಳಿಸುವಂತೆ ಘಟನೆ ಅಲ್ಲಿ ನಡೆದುಹೋಗಿತ್ತು. ಅಲ್ಲಿ ಮೇಕೆಯೊಂದನ್ನ ಚಿರತೆ ಕೊಂದು ಹಾಕಿತ್ತು. ಮೇಕೆ ರಕ್ತ ಹೀರಿ ಬಳಿಕ ಅದನ್ನ ಅರ್ಧಂಬರ್ಧ ತಿಂದು ಹಾಕಿ ಹೋಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಇನ್ನು ಈ ಮೇಕೆ ಬಸವರಾಜ್ ಅನ್ನೋ ಕುರಿಗಾಹಿಗೆ ಸೇರಿದ್ದು. ಈತ ಎಂದಿನಂದತೆ ಬೆಟ್ಟಕ್ಕೆ ಮೇಕೆಗಳನ್ನ ಮೇಯಿಸಲು ಹೋದಾಗ ಈ ಸತ್ತ ಮೇಕೆ ಅಂದು ಸಿಕ್ಕಿರ್ಲಿಲ್ಲ. ಸದ್ಯ ಘಟನೆ ಬೆಳಕಿಗೆ ಬಂದ ಬಳಿಕ ಈ ಭಾಗದ ಜನ ಬೆಚ್ಚಿಬಿಚ್ಚಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಗೆ ರೈತರು ಹೈರಾಣು: ರಾತ್ರಿ ವಿದ್ಯುತ್ ಸಮಸ್ಯೆ, ಗೃಹಿಣಿಯರು ಮಕ್ಕಳ ಪರದಾಟ
ಅದೆನೇ ಇರ್ಲಿ ಪದೇ ಪದೇ ಒಂದಾದ ಮೇಲೋಂದರಂತೆ ಚಿರತೆಗಳ ಹಾವಳಿ ಹೆಚ್ಚಾಗ್ತಿದೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳನ್ನ ಹಿಡಿದು ಜನರ ರಕ್ಷಣೆ ಮಾಡಬೇಕಿದೆ. ಇಲ್ದಿದ್ರೆ ಹೊಲ ಗದ್ದೆಗಳಿಗೆ ಹೋಗೊ ರೈತರು,ಮಹಿಳೆಯರು ಹಾಗೂ ಕುರಿಗಾಹಿಗಳು ಭಯದಲ್ಲೇ ಜೀವನ ಕಳೆಯೋ ಸ್ಥಿತಿ ನಿರ್ಮಾಣವಾಗೋದಂತು ಸತ್ಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ