ರಾಯಚೂರು: ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶವಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೊಹರಂ ದೇವರನ್ನ ಹೊತ್ತಿದ್ದ ಛತ್ರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ದೇವರನ್ನು ಹೊತ್ತಿದ್ದ ಹುಸೇನ್ ಸಾಬ್ (50) ಮತ್ತು ಒಬ್ಬ ಮಹಿಳೆ ಅಸುನೀಗಿದ್ದಾರೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆ ಕೆಲ್ಲೂರು ಗ್ರಾಮದಲ್ಲಿ ಮೊಹರಂ ಮೆರವಣಿಗೆ ವೇಳೆ ಈ ದುರ್ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶದಿಂದ ನೆಲಕ್ಕೆ ಬಿದ್ದವರನ್ನ ಲಿಂಗಸಗೂರು ತಾಲೂಕು ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಸ್ಥಳಕ್ಕೆ ಮಸ್ಕಿ ಠಾಣೆಯ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಗದಗ ವರದಿ:
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರಿನಲ್ಲಿ ನಿನ್ನೆ ರಾತ್ರಿ ಕೋವಿಡ್ ಮಾರ್ಗಸೂಚಿಗಳನ್ನು ಬ್ರೇಕ್ ಮಾಡಿ ಭರ್ಜರಿ ಮೊಹರಂ ಮೆರವಣಿಗೆ ನಡೆಸಲಾಗಿದೆ. ಸರ್ಕಾರದ ನಿಯಮಗಳಿಗೆ ಡೋಂಟ್ ಕೇರ್ ಎಂದ ಹೊಳೆ ಆಲೂರು ಜನ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಪಂಜಾ ಮೆರವಣಿಗೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮಾಯವಾಗಿದೆ. ಸಂಭವನೀಯ ಮೂರನೇ ಅಲೆ ಆತಂಕದ ಮಧ್ಯೆ ಜನರ ನಿರ್ಲಕ್ಷ್ಯ ತೋರಿರುವುದು ಆತಂಕಕಾರಿಯಾಗಿದೆ. ಇನ್ನು ತಾಲೂಕು ಆಡಳಿತ ಅಧಿಕಾರಿಗಳು ಸಹ ಜನ ಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಮನವಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರಮಹಾಲಕ್ಷ್ಮೀ ಹಬ್ಬ ಮತ್ತು ಮೊಹರಂ ಹಬ್ಬಕ್ಕೆ ಶುಭ ಕೋರಿದ್ದಾರೆ. ರಾಜ್ಯದ ಜನತೆಗೆ ಶುಭ ಕೋರಿದ ಸಿಎಂ ಬೊಮ್ಮಾಯಿ, ಹಬ್ಬದ ಸಂಭ್ರಮದಲ್ಲಿ ಯಾರೂ ಮೈಮರೆಯಬೇಡಿ. ಕೊವಿಡ್ ನಿಯಮಗಳನ್ನು ಪಾಲಿಸಿ ಎಂದು ಸೂಚಿಸಿದ್ದಾರೆ. ಜನ ಸೇರದೆ ಕೊವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ ಎಂದು ರಾಜ್ಯದ ಜನರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
(muharram celebration electrocution 2 died in maski taluk raichur)
Published On - 9:37 am, Fri, 20 August 21