ರಾಯಚೂರು: ತೆಲಂಗಾಣದ ನಾರಾಯಣಪೇಟ್ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ರೆಡ್ಡಿ ಮತ್ತು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ನಡುವೆ ವಾಗ್ವಾದ ನಡೆಯುತ್ತಿದೆ. ಇತ್ತೀಚೆಗೆ ನಾರಾಯಣಪೇಟೆಯಲ್ಲಿ ಎಸ್.ಆರ್.ರೆಡ್ಡಿ ವಿರುದ್ಧ ಶಾಸಕ ಡಾ.ಶಿವರಾಜ್ ಪಾಟೀಲ್ ಕಿಡಿಕಾರಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ರಾಯಚೂರು ನಗರದಲ್ಲಿ ಎಸ್.ಆರ್.ರೆಡ್ಡಿ ಸಿಟ್ಟಿನಲ್ಲಿ ಮಾತನಾಡಿದ್ದಾರೆ. ಇವರಿಬ್ಬರ ಜಗಳ ಇದೀಗ ಸಾರ್ವಜನಿಕರ ಚರ್ಚೆಯ ವಿಷಯವಾಗಿದೆ. ನವೋದಯ ಕಾಲೇಜು ಮೆಡಿಕಲ್ ಸೀಟು ಹಂಚಿಕೆ ವಿಚಾರವಾಗಿ ಇವರಿಬ್ಬರ ನಡುವೆ ಮನಸ್ತಾಪ ಆರಂಭವಾಗಿತ್ತು.
ಮತ್ತಷ್ಟು ರಾಜ್ಯ ಸುದ್ದಿ ಓದಲು ಲಿಂಕ್ ಕ್ಲಿಕ್ ಮಾಡಿ
ರಾಯಚೂರಿನಲ್ಲಿ ಮಾತನಾಡಿದ ನಾರಾಯಣಪೇಟೆ ಶಾಸಕ ಎಸ್.ಆರ್.ರೆಡ್ಡಿ, ‘ಶಾಸಕ ಸ್ಥಾನ ಎನ್ನುವುದು ಅಪ್ಪ ಕೊಡುವ ಆಸ್ತಿಯಲ್ಲ. ಇದು ಜನರು ಕೊಡುವ ಅಧಿಕಾರ. ಕೆಲಸ ಮಾಡಿದರೆ ಜನರು ನಮಗೆ ಅಧಿಕಾರ ಕೊಡುತ್ತಾರೆ. ಇಲ್ಲದಿದ್ದರೆ ಒದ್ದು ಮನೆಗೆ ಕಳಿಸುತ್ತಾರೆ’ ಎಂದು ಪರೋಕ್ಷವಾಗಿ ರಾಯಚೂರು ಶಾಸಕ ಶಿವರಾಜ್ ಪಾಟೀಲ್ಗೆ ಟಾಂಗ್ ಕೊಟ್ಟರು. ಈ ಹಿಂದೆ ರಾಯಚೂರು ನಗರವನ್ನು ತೆಲಂಗಾಣಕ್ಕೆ ಸೇರಿಸಬೇಕಿತ್ತು ಎಂದು ಶಿವರಾಜ್ ಪಾಟೀಲ್ ಹೇಳಿದ್ದರು ಎಂದು ಆರೋಪ ಮಾಡಿದ ರೆಡ್ಡಿ, ನೀವು ನಿಮ್ಮ ಸರ್ಕಾರಕ್ಕೆ, ನಿಮ್ಮ ಜನರಿಗೆ ಬ್ಲ್ಯಾಕ್ಮೇಲ್ ಮಾಡಿದಿರಿ. 40 ಪರ್ಸೆಂಟ್ ಪಡೆಯೋರು, ಝೀರೋ ಪರ್ಸೆಂಟ್ ಇರುವ ನಮ್ಮಲ್ಲಿಗೆ ಬಂದು ಪ್ರಶ್ನಿಸುತ್ತಾರೆ ಎಂದು ರೆಡ್ಡಿ ಆರೋಪ ವಾಗ್ದಾಳಿ ಮಾಡಿದರು. ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುತ್ತೇನೆ ಎಂದು ಇದೆ ಸಂದರ್ಭ ಪ್ರಮಾಣ ಮಾಡಿದರು.
‘ನಾನು ಕಾಲೇಜು ಓದೊವಾಗ ಶಿವರಾಜ್ ಪಾಟೀಲ್ ಚಡ್ಡಿ ಹಾಕೊಂಡು ತಿರುಗುತ್ತಿದ್ದ’ ಎಂದು ರೆಡ್ಡಿ ಹಿಂದೊಮ್ಮೆ ಹೇಳಿದ್ದರು. ಈ ಹೇಳಿಕೆಗೆ ಟಾಂಗ್ ಕೊಟ್ಟಿದ್ದ ಶಿವರಾಜ್ ಪಾಟೀಲ್, ನಾನು ಚಡ್ಡಿ ಹಾಕ್ತಿದ್ನೋ, ಇಲ್ವೋ ನನ್ನ ತಂದೆ-ತಾಯಿಗೆ ಗೊತ್ತು. ಆತ ಮೆಡಿಕಲ್ ಕಾಲೇಜು ಅನುಮತಿ ಪಡೆಯಲು ಹೋಗುವಾಗ ರೈಲಿನಲ್ಲಿ ಮುನಿಯಪ್ಪ, ರಂಗಪ್ಪನ ಜೊತೆ ಎಲ್ಲಿ ಮಲಗಿದ್ದನೋ ಕೇಳಿ ಎಂದು ಪ್ರಶ್ನಿಸಿದರು.
ನಾನು ಮಾತನಾಡಿದರೆ ಇನ್ನೂ ಮಜಾ ಮಜಾ ವಿಚಾರಗಳು ಹೊರಬರುತ್ತವೆ. ‘ನೀನು ಗಂಡಸಾಗಿದ್ರೆ ನಿನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಎಸ್ಸಿ, ಎಸ್ಟಿ ಕೆಲಸಗಾರರಿಗೆ ಬ್ಯಾಂಕ್ ಖಾತೆ ಮಾಡಿಸು. ನೇರವಾಗಿ ಅವರ ಸಂಬಳದ ಹಣವನ್ನು ವರ್ಗಾವಣೆ ಮಾಡು’ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಮೈಸೂರು ಬಸ್ಸಿಗಾಗಿ ರಾಯಚೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಯುವಕನ ಕೈಗೆ 9 ತಿಂಗಳ ಹಸುಗೂಸು ನೀಡಿ ನಾಪತ್ತೆಯಾದ ಮಹಿಳೆ!
Published On - 11:58 am, Wed, 11 May 22