ರಾಯಚೂರು: ನವೆಂಬರ್ 14 ಮಕ್ಕಳ ದಿನಾಚರಣೆ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸರು ತಮ್ಮ ಸಿಬ್ಬಂದಿ ಮಕ್ಕಳ ಜೊತೆ ವಿನೂತನವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಒತ್ತಡದ ಜೀವನದ ಮಧ್ಯೆ ಕುಟುಂಬಕ್ಕೆ ಸಮಯ ಕೊಡಲಾಗುತ್ತಿರಲಿಲ್ಲ, ಇದೇ ಕಾರಣಕ್ಕೆ ಸಿಬ್ಬಂದಿ, ಅವರ ಕುಟುಂಬಸ್ಥರು ಮತ್ತು ಮಕ್ಕಳನ್ನ ಒಟ್ಟುಗೂಡಿಸಿ ವಿನೂತನವಾಗಿ ಆಚರಿಸಲಾಯಿತು. ಪ್ರತಿ ಬಾರಿ ಪೊಲೀಸ್ ಇಲಾಖೆಯು ಕ್ರೀಡೆಯನ್ನ ಏರ್ಪಡಿಸುತ್ತಿದ್ದು, ಈ ಬಾರಿ ಜಿಲ್ಲಾ ಪೊಲೀಸ್ ವತಿಯಿಂದ ಸಿಬ್ಬಂದಿ ಮಕ್ಕಳಿಗಾಗಿಯೇ ಆಟಗಳನ್ನು ಏರ್ಪಡಿಸಲಾಗಿತ್ತು. ರಾಯಚೂರು ನಗರದಲ್ಲಿರುವ ಪೊಲೀಸ್ ಮೈದಾನದಲ್ಲಿ ಮಕ್ಕಳ ಕಾರ್ಯಕ್ರಮಗಳು ನಡೆಸಿದ್ದು. ಪುಟಾಣಿ ಮಕ್ಕಳಿಗಾಗಿ ಲೆಮೆನ್ ಸ್ಪೂನ್ ರೇಸ್, ಗೋಣಿ ಚೀಲದ ಓಟ ಹಾಗೂ ಕಪ್ಪೆ ಜಿಗಿತ ಸೇರಿ ವಿವಿಧ ಕ್ರೀಡೆಗಳನ್ನು ಆಡಿಸಿ ಮಕ್ಕಳನ್ನು ಮನರಂಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಇದೇ ಮೊದಲ ಬಾರಿಗೆ ಸಿಬ್ಬಂದಿ ಮಕ್ಕಳು ಮತ್ತು ಕುಟುಂಬಸ್ಥರಿಗಾಗಿಯೇ ವಿಶೇಷ ಕಾರ್ಯಕ್ರಮವನ್ನು ನಡೆಸಲಾಗಿದೆ. ಮಕ್ಕಳು ಕ್ರೀಡೆ ಹಾಗೂ ವಿವಿಧ ಫ್ಯಾಂಟಸಿ ಆಟಗಳನ್ನು ಆಡಿ ಸಂಭ್ರಮಿಸಿದ್ದಾರೆ. ಇದರ ಜೊತೆಗೆ ನಟ ಪುನೀತ್ ರಾಜ್ಕುಮಾರ್ ಅವರ ಜೀವನದ ಮೌಲ್ಯಗಳಿಂದ ಮಕ್ಕಳು ಪ್ರೇರೇಪಿತರಾಗಬೇಕು ಎನ್ನುವ ಉದ್ದೇಶದಿಂದ ನಟ ಪುನೀತ್ ರಾಜ್ಕುಮಾರ್ ಅಭಿನಯದ ಗಂಧದಗುಡಿ ಸಿನಿಮಾವನ್ನು ತೋರಿಸಲಾಯಿತು ಎಂದರು.
ಎಸ್ಪಿ ನಿಖಿಲ್ ಅವರು ತಮ್ಮ ಧರ್ಮಪತ್ನಿ ಜೊತೆ ಆಗಮಿಸಿ ಸಿಬ್ಬಂದಿ ಮಕ್ಕಳ ಜೊತೆ ಕೂತು ಗಂಧದಗುಡಿ ಸಿನಿಮಾ ವೀಕ್ಷಿಸಿದರು. ಅಷ್ಟೇ ಅಲ್ಲದೇ ಗಂಧದಗುಡಿ ಸಿನಿಮಾದಲ್ಲಿ ಇಡೀ ರಾಜ್ಯದ ಅರಣ್ಯಗಳು, ಪ್ರಾಣಿಗಳು ಅದರ ವೈಶಿಷ್ಟ್ಯಗಳನ್ನ ತೋರಿಸಲಾಗಿದ್ದು, ಪ್ರಾಣಿ ಸಂಕುಲಗಳು, ಅರಣ್ಯಗಳ ಇತಿಹಾಸಗಳನ್ನ ತಿಳಿದುಕೊಳ್ಳಲು ಮಕ್ಕಳಿಗೆ ಅನಕೂಲವಾಗಲಿದೆ ಎಂದರು.
ಇನ್ನು ಗಂಧದಗುಡಿ ಸಿನಿಮಾ ನೋಡುವಾಗ ಮಾತನಾಡಿದ ಬಾಲಕಿಯೊಬ್ಬಳು, ಇಂದಿನ ಕಾರ್ಯಕ್ರಮಗಳಿಂದ ತುಂಬಾ ಸಂತೋಷವಾಗಿದೆ. ಅದಕ್ಕಿಂತ ನನಗೆ ಅಪ್ಪು ಅವರ ಗಂಧದಗುಡಿ ಸಿನಿಮಾ ನೋಡಿ ನನ್ನಲ್ಲಿನ ಖುಷಿ ದುಪ್ಪಟ್ಟಾಗಿದೆ. ಆದರೆ ಅವರು ನಮ್ಮ ಜೊತೆಗೆ ಇಲ್ಲದಿರುವುದು ಬೇಸರವಾಗಿದೆ ಎಂದಿದ್ದಾಳೆ.
ಇದಷ್ಟೇ ಅಲ್ಲದೆ ಪುಟಾಣಿ ಮಕ್ಕಳಿಗಾಗಿ ಚಿತ್ರಕಲಾ, ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಹಾಡು ಹೇಳುವ ಹಾಗೂ ನೃತ್ಯ ಸ್ಪರ್ಧೆಗಳನ್ನು ನಡೆಸಲಾಯಿತು. ತಮ್ಮ ಒತ್ತಡದ ಜೀವನದ ಮಧ್ಯೆ ರಾಯಚೂರು ಜಿಲ್ಲಾ ಪೊಲೀಸರು ತಮ್ಮ ಮಕ್ಕಳ ಜೊತೆ ವಿನೂತನವಾಗಿ ಮಕ್ಕಳ ದಿನಾಚರಣೆ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.
ವರದಿ: ಭೀಮೇಶ್ ಪೂಜಾರ್,ಟಿವಿ9 ರಾಯಚೂರು
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ