ರಾಜಕೀಯ ತಿರುವು ಪಡೆದ ಲೈನ್​ಮ್ಯಾನ್ ಸಾವು ಪ್ರಕರಣ: 2 ಸಾವಿರ ಪ್ರತಿಭಟನಾಕಾರರ ಮಧ್ಯೆ ಜೆಡಿಎಸ್​ ಶಾಸಕಿಯನ್ನು ಬೈದಿದ್ದು ಯಾರು? ಅರೆಸ್ಟ್ ಆಗಿದ್ದು ಬಿಜೆಪಿ ಮುಖಂಡ!

| Updated By: ಸಾಧು ಶ್ರೀನಾಥ್​

Updated on: Jun 07, 2023 | 3:13 PM

ಉಗ್ರ ಪ್ರತಿಭಟನೆ ವೇಳೆ ಜನ ಆಳಿಗೊಬ್ಬರಂತೆ ಕಿಡಿಕಾರುತ್ತಿದ್ರು.. ಇದೇ ವೇಳೆ ಬಿಜೆಪಿ ಮುಖಂಡ ಬದ್ರಪ್ಪ ಅನ್ನೋರು ಏಕಾಏಕಿ ಜೆಡಿಎಸ್ ಶಾಸಕಿ ಕರಿಯಮ್ಮ ವಿರುದ್ಧ ಹರಿಹಾಯ್ದಿದ್ರು..

ರಾಜಕೀಯ ತಿರುವು ಪಡೆದ ಲೈನ್​ಮ್ಯಾನ್ ಸಾವು ಪ್ರಕರಣ: 2 ಸಾವಿರ ಪ್ರತಿಭಟನಾಕಾರರ ಮಧ್ಯೆ ಜೆಡಿಎಸ್​ ಶಾಸಕಿಯನ್ನು ಬೈದಿದ್ದು ಯಾರು? ಅರೆಸ್ಟ್ ಆಗಿದ್ದು ಬಿಜೆಪಿ ಮುಖಂಡ!
ರಾಜಕೀಯ ತಿರುವು ಪಡೆದ ಲೈನ್​ಮ್ಯಾನ್ ಸಾವು ಪ್ರಕರಣ
Follow us on

ದುರಸ್ತಿ ಕೆಲಸಕ್ಕೆ ಹೋಗಿದ್ದ ಲೈನ್​ಮ್ಯಾನ್ ಕರೆಂಟ್ ಶಾಕ್​​ನಿಂದ ವಿದ್ಯುತ್ ಕಂಬದ ಮೇಲೆಯೇ ಮೃತಪಟ್ಟ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಹೌದು, ವಿದ್ಯುತ್ ಕಂಬದ ಮೇಲಿದ್ದ ಮೃತದೇಹ ಇಳಿಸಲು ನಾಲ್ಕೈದು ಗಂಟೆ ವಿಳಂಬ ಮಾಡಿದ್ದಕ್ಕೆ ಜನ ಆಕ್ರೋಶಗೊಂಡಿದ್ರು. ಅದೇ ವೇಳೆ ಶಾಸಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರೊ ಆರೋಪ ಕೇಳಿ ಬಂದಿದ್ದು, ಎಂಟು ಜನ ಬಿಜೆಪಿ ಕಾರ್ಯಕರ್ತರ (BJP leader) ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಓರ್ವ ಮುಖಂಡ ಅರೆಸ್ಟ್ ಸಹ ಆಗಿದ್ದಾನೆ. ಹೌದು.. ಅದು ಕಳೆದ ಜೂನ್ 4 ಭಾನುವಾರ.. ಅಂದು ರಾಯಚೂರು (Raichur) ಜಿಲ್ಲೆ ಅರಕೇರಾ ತಾಲ್ಲೂಕಿನ (arkera taluk) ಆಲದಮರದ ತಾಂಡಾದಲ್ಲಿ ವಿದ್ಯುತ್ ಸಮಸ್ಯೆಯಾಗಿತ್ತು. ಆಗ ಲೈನ್​ಮ್ಯಾನ್ ವಿರೂಪಾಕ್ಷ ಎಂಬಾತ ಆಲದ ಮರದ ತಾಂಡಾಕ್ಕೆ ಬಂದು ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ನಡೆಸಿದ್ದ. ಇನ್ನೇನು ರಿಪೇರಿ ಕೆಲಸ ಆಗ್ಬೇಕು ಅನ್ನೋವಾಗಲೇ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲೈನ್​ಮ್ಯಾನ್ ವಿರೂಪಾಕ್ಷ ಕರೆಂಟ್ ಶಾಕ್ ಹೊಡೆದು ವಿದ್ಯುತ್ ಕಂಬದ ಮೇಲೆಯೇ ಮೃತಪಟ್ಟಿದ್ದ.

ಘಟನೆ ಬಳಿಕ ದೇವದುರ್ಗ ಪೊಲೀಸರು ಸ್ಥಳಕ್ಕೆ ಬಂದಿದ್ರು.. ಇದಾದ ಬಳಿಕ ತಡವಾಗಿ ಬಂದಿದ್ದ ಜೆಸ್ಕಾಂ ಅಧಿಕಾರಿಯೊಬ್ಬ ಉಡಾಫೆ ಮಾತನಾಡಿದ್ದಕ್ಕೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ರು. ನಂತ್ರ ಪೊಲೀಸರು ಜೆಸ್ಕಾಂ ಅಧಿಕಾರಿಯನ್ನ ವಾಪಸ್ ಕಳುಹಿಸಿದ್ದರು. ಸುತ್ತ ಐದಾರು ಹಳ್ಳಿಗೆ ಲೈನ್​ಮ್ಯಾನ್ ವಿರೂಪಾಕ್ಷ ಮನೆಮಗನಂತಿದ್ದ. ಅಂಥವನನ್ನ ಹಿರಿಯ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯಕ್ಕೆ ಬಲಿ ಕೊಟ್ರು ಅಂತ ಹೋರಾಟಕ್ಕಿಳಿದಿದ್ರು. ಘಟನೆ ನಡೆದು ನಾಲ್ಕೈದು ಗಂಟೆಯಾದ್ರೂ ಯಾವೊಬ್ಬ ಅಧಿಕಾರಿಯಾಗಲಿ, ಇಲ್ಲ ಜನಪ್ರತಿನಿಧಿಯಾಗಲಿ ಘಟನಾ ಸ್ಥಳಕ್ಕೆ ಬಂದಿರ್ಲಿಲ್ಲ.. ಆಗ ಅಕ್ಷರಶಃ ಕೆಂಡವಾಗಿದ್ದ ಜನ ಅಧಿಕಾರಿಗಳ ದುರ್ವರ್ತನೆ ಖಂಡಿಸಿ ಸ್ಥಳೀಯ ಜೆಡಿಎಸ್ ಶಾಸಕಿ ಕರಿಯಮ್ಮ ಕೂಡ ಘಟನಾ ಸ್ಥಳಕ್ಕೆ ಬಂದು ನ್ಯಾಯ ಕೊಡಿಸ್ತಿಲ್ಲ ಅಂತ ಬೀದಿಗಿಳಿದ್ದರು. ಸುಮಾರು 2 ಸಾವಿರ ಜನ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು.

ಹೀಗೆ.. ಉಗ್ರ ಪ್ರತಿಭಟನೆ ವೇಳೆ ಜನ ಆಳಿಗೊಬ್ಬರಂತೆ ಕಿಡಿಕಾರುತ್ತಿದ್ರು.. ಇದೇ ವೇಳೆ ಬಿಜೆಪಿ ಮುಖಂಡ ಬದ್ರಪ್ಪ ಅನ್ನೋರು ಏಕಾಏಕಿ ಜೆಡಿಎಸ್ ಶಾಸಕಿ ಕರಿಯಮ್ಮ ( JDS MLA Kariyamma ) ವಿರುದ್ಧ ಹರಿಹಾಯ್ದಿದ್ರು.. ಲೈನ್​​ಮ್ಯಾನ್ ಒಬ್ಬ ಮೃತಪಟ್ಟು ನಾಲ್ಕೈದು ಗಂಟೆ ಆಯ್ತು.. ಘಟನಾ ಸ್ಥಳಕ್ಕೆ ಶಾಸಕಿ ಕರಿಯಮ್ಮ ಯಾಕೆ ಬಂದಿಲ್ಲ? ಬರೀ ಶಾಸಕಿಯಾದ್ರೆ ಸಾಕಾ ಅಂತೆಲ್ಲಾ ಬಾಯಿಗೆ ಬಂದಂತೆ ಬೈದಿದ್ರು. ನಂತ್ರ ಅವಾಚ್ಯ ಶಬ್ದಗಳಿಂದ ನಿಂದಿಸಿರೊ ವಿಡಿಯೋ ಕೂಡ ವೈರಲ್ ಆಗಿತ್ತು. ಆ ನಂತ್ರ ಶಾಸಕಿ ಕರಿಯಮ್ಮ ನಾಯಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದರು.

ಆದ್ರೆ ಶಾಸಕಿ ಕರಿಯಮ್ಮಗೆ ಅತೀ ಕೀಳುಮಟ್ಟದಲ್ಲಿ ಅವಾಚ್ಯ  ಶಬ್ದಗಳಿಂದ ನಿಂದಿಸಲಾಗಿದೆ ಅಂತ ಆರೋಪಿಸಿ ಜೆಡಿಎಸ್​ ಕಾರ್ಯಕರ್ತರು ದೇವದುರ್ಗ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರೇ ಈ ರೀತಿ ದುರ್ವರ್ತನೆ ತೋರಿದ್ದಾರೆ ಅಂತ ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು. ನಂತ್ರ ಜೆಡಿಎಸ್ ಕಾರ್ಯಕರ್ತರು ನೀಡಿದ ದೂರಿನನ್ವಯ ಎಂಟು ಜನ ಸ್ಥಳೀಯ ಬಿಜೆಪಿ ಕಾರ್ಯಕರ್ತರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಎಫ್​ಐಆರ್ ದಾಖಲಾಯಿತು. ಈ ಪೈಕಿ ವಿಡಿಯೋದಲ್ಲಿ ವೈರಲ್ ಆಗಿದ್ದ ಬದ್ರಪ್ಪ ಅನ್ನೋನನ್ನ ಬಂಧಿಸಲಾಗಿದೆ.

ಇತ್ತ ಬಿಜೆಪಿ ಕಾರ್ಯಕರ್ತರು ಈ ಕೇಸ್ ದಾಖಲಾಗಿರೊ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಸಾವು ಆದ ಬಳಿಕ ಮೃತದೇಹ ಶಿಫ್ಟ್ ಮಾಡಲು ಅಧಿಕಾರಿಗಳು, ಸಿಬ್ಬಂದಿ ಮುಂದಾಗಿಲ್ಲ.. ಆ ಬಗ್ಗೆ ಕ್ರಮವಹಿಸಬೇಕಿದ್ದ ಶಾಸಕಿ ಕೂಡ ಘಟನಾ ಸ್ಥಳಕ್ಕೆ ಬಂದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಲಾಗಿತ್ತಷ್ಟೆ.

ಅದೊಂದು ಕಾರಣಕ್ಕೆ ರಾಜಕೀಯ ದುರುದ್ದೇಶದಿಂದ ಈ ರೀತಿ ಕೇಸ್ ಮಾಡಿ ಅರೆಸ್ಟ್ ಮಾಡಲಾಗಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ. ಅದೆನೆ ಇರಲಿ ಲೈನ್​ ಮ್ಯಾನ್ ಸಾವಿಗೆ ನ್ಯಾಯ ಒದಗಿಸೊ ಭಾಗವಾಗಿ ಜೆಸ್ಕಾಂ ಅಧಿಕಾರಿಗಳ ವಿರುದ್ಧ ನಡೆಯಬೇಕಿದ್ದ ಹೋರಾಟ ರಾಜಕೀಯ ತಿರುವು ಪಡೆದುಕೊಂಡು, ನಿರ್ಲಕ್ಷ್ಯ ತೋರಿದವರನ್ನೇ ಬಚಾವ್ ಮಾಡಿದಂತಾಗಿದೆ.

ರಾಯಚೂರು ಜಿಲ್ಲಾ ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:10 pm, Wed, 7 June 23