
ರಾಯಚೂರು, ನ.16: ತಂದೆಯ ಅಗಲಿಕೆಯ ನೋವನ್ನು ಅರಗಿಸಿಕೊಳ್ಳಲಾಗದೆ ಮಗನೂ ಕೊನೆಯುಸಿರೆಳೆದು ತಂದೆ-ಮಗ ಸಾವಿನಲ್ಲೂ ಒಂದಾದ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ತಂದೆ ಅಮೀನ್ ಸಾಬ್ (58) ಹಾಗೂ ಪುತ್ರ ಮೆಹಬೂಬ್ ಸಾಬ್ (37) ಎಂದು ಗುರುತಿಸಲಾಗಿದೆ. ಒಂದೇ ಕುಟುಂಬದ ಇಬ್ಬರು ಆಧಾರಸ್ತಂಭಗಳನ್ನು ಕಳೆದುಕೊಂಡು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.
ತಿಪ್ಪನಹಟ್ಟಿ ಗ್ರಾಮದ ನಿವಾಸಿ ಅಮೀನ್ ಸಾಬ್ (58) ಅವರಿಗೆ ನಿನ್ನೆ (ನವೆಂಬರ್ 15) ದಿಢೀರ್ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದರು. ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪುತ್ರ ಮೆಹಬೂಬ್ ಸಾಬ್ (37) ತೀವ್ರ ಆಘಾತಕ್ಕೊಳಗಾಗಿ ಬಿಕ್ಕಿಬಿಕ್ಕಿ ಕಣ್ಣೀರಿಟ್ಟಿದ್ದಾರೆ. ತಂದೆಯ ಅಗಲಿಕೆಯ ದುಃಖವನ್ನು ತಡೆಯಲಾಗದೆ ಮೆಹಬೂಬ್ ಸಾಬ್ ತೀವ್ರವಾಗಿ ನಿತ್ರಾಣಗೊಂಡಿದ್ದು, ಇದೇ ವೇಳೆ ಅವರ ರಕ್ತದೊತ್ತಡ ದಿಢೀರ್ ಕುಸಿದು ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರಾದರೂ, ಮಾರ್ಗಮಧ್ಯೆಯೇ ಮೆಹಬೂಬ್ ಸಾಬ್ ಕೊನೆಯುಸಿರೆಳೆದಿದ್ದಾರೆ. ಬಳಿಕ ಸ್ವಗ್ರಾಮ ತಿಪ್ಪನಹಟ್ಟಿಯಲ್ಲಿ ತಂದೆ ಮತ್ತು ಮಗನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.
ಇದೇ ರೀತಿಯ ಮತ್ತೊಂದು ಮನಕಲಕುವ ಘಟನೆ ಹಾವೇರಿ ತಾಲೂಕಿನ ಮರೋಳ ಗ್ರಾಮದಲ್ಲಿ ನಡೆದಿದ್ದು, ಇಬ್ಬರು ಆತ್ಮೀಯ ಸ್ನೇಹಿತರಾದ ಅಭಿಷೇಕ್ ಮಾಗಡಿ ಮತ್ತು ಮುತ್ತು ಹುಲಿಕಟ್ಟಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕುಷ್ಟಗಿ-ಗಜೇಂದ್ರಗಡ ರಸ್ತೆಯಲ್ಲಿ ಸಂಭವಿಸಿದ ದುರಂತದಲ್ಲಿ ಸಾವಿಗೀಡಾದ ಇವರ ಅಂತ್ಯಕ್ರಿಯೆಯನ್ನು ಪೋಷಕರು ಸ್ವಗ್ರಾಮ ಮರೋಳದಲ್ಲಿ ಒಂದೇ ಕಡೆ, ಒಟ್ಟಿಗೇ ನೆರವೇರಿಸಿದ್ದಾರೆ. ಬದುಕಿದ್ದಾಗ ಸದಾ ಜೊತೆಯಲ್ಲೇ ಇರುತ್ತಿದ್ದ ಗೆಳೆಯರ ದುರಂತ ಸಾವು ಮತ್ತು ಒಂದೇ ಕಡೆ ನಡೆದ ಅಂತ್ಯಕ್ರಿಯೆ ಇಡೀ ಗ್ರಾಮವನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 am, Mon, 16 November 26