ಶಾಲಾ ವಿದ್ಯಾರ್ಥಿಗೆ ಬಿಸಿ ನೀರು ಎರಚಿದ ಶಿಕ್ಷಕ: ತಲೆಮರೆಸಿಕೊಂಡ ಶಿಕ್ಷಕನನ್ನು ಬಂಧಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸೂಚನೆ

| Updated By: ಆಯೇಷಾ ಬಾನು

Updated on: Sep 11, 2022 | 5:40 PM

ಎಫ್​ಐಆರ್ ದಾಖಲಾಗ್ತಿದ್ದಂತೆಯೇ, ಮಸ್ಕಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿ ಮಸ್ನೂರ್ ಅಹ್ಮದ್ ನೇತೃತ್ವದಲ್ಲಿ ಇಂದು ಸ್ಥಳ ಮಹಜರು ನಡೆಸಲಾಗಿದೆ.

ಶಾಲಾ ವಿದ್ಯಾರ್ಥಿಗೆ ಬಿಸಿ ನೀರು ಎರಚಿದ ಶಿಕ್ಷಕ: ತಲೆಮರೆಸಿಕೊಂಡ ಶಿಕ್ಷಕನನ್ನು ಬಂಧಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸೂಚನೆ
ಡಿಸಿಪಿಓ ಮನ್ಸೂರ್ ಅಹ್ಮದ್
Follow us on

ರಾಯಚೂರು: ಶಾಲಾ ಬಾಲಕನಿಗೆ ಶಿಕ್ಷಕ ಬಿಸಿ ನೀರು ಎರಚಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಘಟನೆ ಬಳಿಕ ಶಿಕ್ಷಕ ತಲೆಮರೆಸಿಕೊಂಡಿದ್ದು, ಕೂಡಲೇ ಆತನ ಬಂಧನದ ಕ್ರಮಕೈಗೊಳ್ಳಿ ಅಂತ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಕಟ್ಟಪ್ಪಣೆ ಹೊರಡಿಸಿದೆ.

ಶಾಲಾ ಬಾಲಕನ ಮೇಲೆ ಶಿಕ್ಷಕನೊಬ್ಬ ಬಿಸಿ ನೀರು ಎರಚಿರೊ ಆರೋಪ ಪ್ರಕರಣ ಇತ್ತೀಚೆಗೆ ಭಾರೀ ಸಂಚಲಕ್ಕೆ ಕಾರಣವಾಗಿದೆ. ಘಟನೆ ನಡೆದ ಬಳಿಕವೂ ಆ ಬಗ್ಗೆ ಕ್ರಮವಾಗ್ತಿಲ್ಲ, ಪ್ರಕರಣ ದಾಖಲಾಗಿಲ್ಲ ಅನ್ನೊ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಈಗ ಜಿಲ್ಲಾ ಮಕ್ಕಳ ರಕ್ಷಣಾ ನಿರ್ದೇಶನಾಲಯ ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಮಸ್ಕಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಸಪ್ಟೆಂಬರ್ 2 ರಂದು ಘಟನೆ ನಡೆದಿದ್ದು, ಬಾಲಕ ಸಮವಸ್ತ್ರದಲ್ಲಿ ಮಲ ವಿಸರ್ಜನೆ ಮಾಡಿದ್ದ. ಇದರಿಂದ ಕೋಪಗೊಂಡ ಶಿಕ್ಷಕರೊಬ್ಬರು ಆತನಿಗೆ ಬಿಸಿ ನೀರು ಎರಚಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವೂ ಅಲರ್ಟ್ ಆಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಸಂತ್ರಸ್ತ ಬಾಲಕನಿಗೆ ಶಿಕ್ಷಕ ಹುಲಿಗೆಪ್ಪ ಅನ್ನೋರು ನೀರು ಎರಚಿರೊ ಬಗ್ಗೆ ಉಲ್ಲೇಖಿಸಲಾಗಿದೆ. ಜೊತೆಗೆ ಘಟನೆ ಬಳಿಕ ಆ ಶಿಕ್ಷಕ ಹುಲಿಗೆಪ್ಪ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಕ್ರಮಕೈಗೊಳ್ಳಬೇಕು ಅಂತ ಸೂಚಿಸಿದೆ. ಏಳು ದಿನಗಳ ಒಳಗಾಗಿ ಘಟನೆಯ ತನಿಖಾ ವರದಿ ಸಲ್ಲಿಸಬೇಕು ಅಂತ ಕಟ್ಟಪ್ಪಣೆ ಹೊರಡಿಸಿದೆ.

ಎಫ್​ಐಆರ್ ದಾಖಲಾಗ್ತಿದ್ದಂತೆಯೇ, ಮಸ್ಕಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿ ಮಸ್ನೂರ್ ಅಹ್ಮದ್ ನೇತೃತ್ವದಲ್ಲಿ ಇಂದು ಸ್ಥಳ ಮಹಜರು ನಡೆಸಲಾಗಿದೆ. ಘಟನೆ ನಡೆದ ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರಿನ ಶ್ರೀಘಣಮಠೇಶ್ವರ ಶಾಲೆಯಲ್ಲಿ ಸ್ಥಳ ಮಹಜರು ನಡೆಸಲಾಗಿದೆ.

ಘಟನೆ ಬಳಿಕ ಶಂಕಿತ ಹುಲಿಗೆಪ್ಪ ಶಾಲೆಗೆ ಗೈರಾಗುತ್ತಿದ್ದು, ಮತ್ತಷ್ಟು ಅನುಮಾನ ಹೆಚ್ಚುವಂತೆ ಮಾಡಿದೆ. ಸದ್ಯ ಶಂಕಿತ ಶಿಕ್ಷಕ ಹುಲಿಗೆಪ್ಪ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಹಲವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸುವ ಸಾಧ್ಯತೆಯಿದೆ.

ಪ್ರಕರಣ ಸಂಬಂಧ ಮಾತನಾಡಿದ ಡಿಸಿಪಿಓ ಮನ್ಸೂರ್ ಅಹ್ಮದ್, ಈ ಪ್ರಕರಣದಲ್ಲಿ ಒತ್ತಡವಿಲ್ಲ. ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕಗೊಳ್ಳುತ್ತೇವೆ. ಸದ್ಯ ಘಟನಾ ಸ್ಥಳದ ಮಹಜರು ಪ್ರಕ್ರಿಯೆ ಮುಗಿದಿದ್ದು, ಮುಂದಿನ ಹಂತದ ತನಿಖೆ ನಡೀತಿದೆ ಎಂದರು.

Published On - 5:39 pm, Sun, 11 September 22