ಬಸ್‌ನಲ್ಲಿ ಸೀಟು ಸಿಗದೆ ಮಗುವನ್ನು ಲಗೇಜ್‌ ಕ್ಯಾರಿಯರ್‌ನಲ್ಲಿ ಮಲಗಿಸಿದ ತಾಯಿ, ವಿಡಿಯೋ ವೈರಲ್

| Updated By: ರಮೇಶ್ ಬಿ. ಜವಳಗೇರಾ

Updated on: Apr 08, 2024 | 6:29 PM

ಹಬ್ಬ-ಹರಿದಿನ ಬಂತೆಂದರೆ ಸಾಕು ಎಲ್ಲ ಬಸ್‌ಗಳಲ್ಲೂ ಫುಲ್. ಅದರಲ್ಲೂ ಶಕ್ತಿ ಯೋಜನೆ ಬಂದಾಗಿನಿಂದ ಕೆಎಸ್​ಆರ್​ಟಿಸಿ ಬಸ್​ಗಳು ತುಂಬಿ ತುಳುಕುತ್ತಿವೆ. ಸೀಟಿಗಾಗಿ ಹಲವು ಕಡೆ ಗಲಾಟೆ ಮಾಡಿಕೊಂಡ ಉದಾಹರಣೆಗಳು ಇವೆ. ಇದರ ಮಧ್ಯ, ಮಹಿಳೆಯೊಬ್ಬರು ಸೀಟು ಸಿಗದಿದ್ದಕ್ಕೆ ತನ್ನ ಮಗುವನ್ನು ಬಸ್​ನ ಲಗೇಜ್ ಕ್ಯಾರಿಯರ್​ನಲ್ಲಿ ಮಲಗಿಸಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ರಾಯಚೂರು, (ಏಪ್ರಿಲ್, 08): ಯುಗಾದಿ (Ugadi) ಮತ್ತು ರಂಜಾನ್ ಹಬ್ಬ (Festival) ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳ ತೆರಳುತ್ತಿದ್ದಾರೆ. ಇದರಿಂದ ಬಸ್​ಗಳು (Bus( ಫುಲ್ ರಶ್​ ಆಗಿದ್ದು, ಸೀಟುಗಳು ಸಿಗದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇದರ ಮಧ್ಯೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಸೀಟು ಇಲ್ಲದಕ್ಕೆ ಮಹಿಳೆಯೊಬ್ಬರು ತನ್ನ ಮಗುವನ್ನು ಲಗೇಜ್​ ಕ್ಯಾರಿಯರ್​​ನಲ್ಲಿ ಮಲಗಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು-ಕಲಬುರಗಿ ತೆರಳುತ್ತಿದ್ದ ಬಸ್​ ಪುಲ್ ಗದ್ದಲ ಇದ್ದರಿಂದ ಮಹಿಳೆ ತನ್ನ ಮಗುವನ್ನು ಲಗೇಜ್ ಕ್ಯಾರಿಯರ್​ನಲ್ಲಿ ಮಲಗಿಸಿದ್ದು, ಸದ್ಯ ಮಗುವಿನ ಪ್ರಯಾಣದ ವಿಡಿಯೋ ಫುಲ್ ವೈರಲ್ ಆಗಿದೆ.

ಸೋಮವಾರ ಯುಗಾದಿ ಅಮಾವಾಸ್ಯೆ. ಹಾಗೇ ಶಕ್ತಿ ಯೋಜನೆ ಪರಿಣಾಮ ರಾಯಚೂರಿನಲ್ಲೂ ಸಹ ಬಹುತೇಕ ಸರಕಾರಿ ಬಸ್‌ಗಳು ಫುಲ್ ರಶ್ ಆಗಿವೆ. ಹೀಗಾಗಿ ಲಿಂಗಸಗೂರು-ಕಲಬುರಗಿ ಮಾರ್ಗದ ಬಸ್‌ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಮೊದಲೇ ಹೊರಗಡೆ ಸುಡು ಬಿಸಿಲು. ಇದರಿಂದ ಉಸಿರಾಡಲು ಕಷ್ಟ ಎಂಬಂತೆ ಪ್ರಯಾಣಿಕಕರು ಒಬ್ಬರಿಗೊಬ್ಬರು ತಳ್ಳಾಡುತ್ತಾ ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ.

ಹೀಗಾಗಿ ಸೀಟ್‌ ಸಿಗದೆ ನಿಂತಿದ್ದ ಮಹಿಳೆಯೊಬ್ಬರು, ಮಗುವನ್ನು ಹಿಡಿದುಕೊಂಡು ಪ್ರಯಾಣಿಸುವುದು ಕಷ್ಟ ಎಂದು ಲಗೇಜ್‌ಗಳನ್ನು ಕ್ಯಾರಿಯರ್‌ನಲ್ಲಿ ಮಲಗಿಸಿದ್ದಾರೆ. ಇನ್ನು ಮಹಿಳೆಯ ಐಡಿಯಾ ನೋಡಿ ಸಹ ಪ್ರಯಾಣಿಕರು ಫಿದಾ ಆಗಿದ್ದಾರೆ. ಅದರಲ್ಲೊಬ್ಬರು ತಮ್ಮ ಕೈಯಲ್ಲಿದ್ದ ಮೊಬೈಲ್​ ಮೂಲಕ ವಿಡಿಯೋ ಮಾಡಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಮಗು ಲಗೇಜ್​ ಕ್ಯಾರಿಯರ್​ನಲ್ಲಿ ಆಯಾಗಿ ಮಲಗಿ ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:28 pm, Mon, 8 April 24