ರಾಯಚೂರು, ನ.3: ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಮಂಜುಳಾ ಅವರ ಮೃತದೇಹ (Dead Body) ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಸಹೋದರ ಆತ್ಮಹತ್ಯೆ ಎಂದು ದೂರು ನೀಡಿದ್ದನು. ಆದರೆ, ತನ್ನ ತಾಯಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಮೃತಳ ಮಗ ಕೊಲೆ ಎಂದು ದೂರು ನೀಡಿದ್ದಾನೆ. ಮನೆಯಲ್ಲಿದ್ದ ಅಪಾರ ಚಿನ್ನಾಭರಣ ನಾಪತ್ತೆಯಾಗಿದ್ದು, ಯಾರೋ ಪರಿಚಯಸ್ಥರು ಹಣ, ಚಿನ್ನ ಲೂಟಿ ಮಾಡಿ ಹತ್ಯೆಗೈದಿರುವ ಆರೋಪ ಮಾಡಲಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಮಂಜುಳಾ (45) ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸಾವಿಗೂ ಮುನ್ನ ಮಂಜುಳಾ, ಬ್ಯಾಂಕ್ನಿಂದ ಪಡೆದ 10 ಲಕ್ಷ ಸಾಲದ ಹಣವನ್ನು ವಿತ್ ಡ್ರಾ ಮಾಡಿ ಮನೆಯಲ್ಲಿಟ್ಟಿದ್ದಳು. ಆದರೆ, ಈ ಹಣ ಮತ್ತು ಮನೆಯಲ್ಲಿದ್ದ ಅಪಾರ ಚಿನ್ನಾಭರಣ ನಾಪತ್ತೆಯಾಗಿದೆ.
ಇದನ್ನೂ ಓದಿ: ಗೃಹಿಣಿ ಆತ್ಮಹತ್ಯೆ ಪ್ರಕರಣ: ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದೇ ರೋಚಕ
ಯಾರೋ ಪರಿಚಯಸ್ಥರು ಬ್ಲ್ಯಾಕ್ ಮೇಲ್ ಮಾಡಿ ಹಣ, ಚಿನ್ನ ಲೂಟಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಮಂಜುಳ ಮಗ ಸಚಿನ್ ದೂರು ನೀಡಿದ್ದಾನೆ. ಪೆಟ್ರೋಲ್ ಹಾಗೂ ಕೆಮಿಕಲ್ನಿಂದ ಬೆಂಕಿ ಹಚ್ಚಿ ಕೊಲೆಗೈದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ಸ್ವೀಕರಿಸಿದ ಹಟ್ಟಿ ಠಾಣಾ ಪೊಲೀಸರು, ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದರ ಭಾಗವಾಗಿ ಮಂಜುಳ ಕೊನೆಯದಾಗಿ ಯಾರಿಗೆ ದೂರವಾಣಿ ಕರೆ ಮಾಡಿದ್ದರು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರ ಜೊತೆಗೆ ಮೃತಳ ಬ್ಯಾಂಕ್ ಡಿಟೇಲ್ಸ್ ಪಡೆಯಲು ಮುಂದಾಗಿದ್ದಾರೆ.
ಪತಿಯನನ್ನ ಕಳೆದುಕೊಂಡು ತನ್ನ ಮಕ್ಕಳೊಂದಿಗೆ ಮಂಜುಳಾ ಹಟ್ಟಿ ಕಂಪನಿಯ ಕ್ಯಾಂಪ್ನ ಜಿ.ಆರ್.ಕಾಲೋನಿಯಲ್ಲಿ ವಾಸವಿದ್ದರು. ಪತಿಯನ್ನು ಕಳೆದುಕೊಂಡಿದ್ದ ಆಕೆ, ಮಾನಿಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅ.26 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರ ಮೇಲೂ ಶಂಕೆ ಇಲ್ಲವೆಂದು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ