ರಾಮನಗರ: ಈ ವರ್ಷ ಫೆಬ್ರವರಿ ಅಂತ್ಯಕ್ಕೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ (Bengaluru-Mysuru expressway ) ಲೋಕಾರ್ಪಣೆಯಾಗಲಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಧಾನಿ ಅಥವಾ ರಾಷ್ಟ್ರಪತಿಗಳನ್ನು ಆಹ್ವಾನಿಸುತ್ತೇವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಘೋಷಣೆ ಮಾಡಿದರು.
ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯಿಂದ ಇಂದು ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಪರಿಶೀಲನೆ
ಇಂದು(ಜನವರಿ 05) ರಾಮನಗರಕ್ಕೆ ಹೆಲಿಕಾಫ್ಟರ್ನಲ್ಲಿ ಆಗಮಿಸಿದ ನಿತಿನ್ ಗಡ್ಕರಿ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಪರಿಶೀಲನೆ ನಡೆಸಿದರು. ಬಳಿಕ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅಥವಾ ರಾಷ್ಟ್ರಪತಿಗಳು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಶಾಸಕರು ಮತ್ತು ಸಂಸದರು ಒಂದಷ್ಟು ಸಲಹೆ ನೀಡಿದ್ದಾರೆ. ಎಲ್ಲವನ್ನೂ ಪರಿಶೀಲನೆ ಮಾಡಲಾಗುವುದು. ಹೆದ್ದಾರಿ ಪೂರ್ಣಗೊಂಡರೆ 90 ನಿಮಿಷದಲ್ಲಿ ಬೆಂಗಳೂರು-ಮೈಸೂರು ನಡುವೆ ಸಂಚಾರ ಮಾಡಬಹುದು. ಹೆದ್ದಾರಿಯಿಂದ ಮೈಸೂರು, ಶ್ರೀರಂಗಪಟ್ಟಣ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಪಬ್ಲಿಕ್ ಟ್ರಾನ್ಸ್ಪೋರ್ಟ್ಗೂ ಹೆಚ್ಚಿನ ಒತ್ತು ನೀಡುತ್ತೇವೆ. ರಾಮನಗರ ಹಾಗೂ ಮಂಡ್ಯ ಜಿಲ್ಲೆಗೆ ಕನೆಕ್ಟಿವಿಟಿ ಸುಗಮ ಆಗಲಿದೆ. ಐಟಿ ಉದ್ಯಮಕ್ಕೂ ಇದು ಅನುಕೂಲ ಎಂದರು.
ರಾಮನಗರ ಜಿಲ್ಲೆಯ ಬಳಿಯ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಹೆಲಿಕಾಪ್ಟರ್ನಲ್ಲಿ ಇಳಿದ ನಿತಿನ್ ಗಡ್ಕರಿ ಹೆದ್ದಾರಿಯ ಕಾಮಗಾರಿಯನ್ನು ಪರಿಶೀಲಿಸಿದರು. ಈಗಾಗಲೇ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವೆಡೆ ಇನ್ನೂ ಕೆಲಸಗಳು ಬಾಕಿ ಉಳಿದಿವೆ.
4,473 ಕೋಟಿ ರೂ. ವೆಚ್ಚದಲ್ಲಿ ಒಟ್ಟು 118 ಕಿ.ಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮೊದಲ ಹಂತದ ಕಾಮಗಾರಿಯು ಬೆಂಗಳೂರಿನ ಪಂಚಮುಖಿ ಆಂಜನೇಯ ದೇವಾಲಯದಿಂದ ಹಿಡಿದು ನಿಡಘಟ್ಟದವರೆಗೆ ಹಾಗೂ ನಿಡಘಟ್ಟದಿಂದ ಮೈಸೂರಿನ ವರೆಗೂ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ.
ಕೆಂಗೇರಿಯಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ವೇ ಪ್ರಸ್ತುತ 3.5 ಗಂಟೆಗಳ ಪ್ರಯಾಣವನ್ನು ಕೇವಲ 1.5 ಗಂಟೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. 8,453 ಕೋಟಿ ರೂ. ವೆಚ್ಚದ ಈ ಯೋಜನೆಯ ಕಾಮಗಾರಿಯನ್ನು ನಿತಿನ್ ಗಡ್ಕರಿ ವೀಕ್ಷಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ