ರಾಮನಗರ: ಜಿಲ್ಲೆಯ ಐತಿಹಾಸಿಕ ಚಾಮುಂಡೇಶ್ವರಿ ಕರಗ ಉತ್ಸವವು (Chamandi Karaga Festival) ಜುಲೈ 4 ರಂದು ನಡೆಯಲಿದೆ. ಈ ಉತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಂಚನೆ ಆರೋಪ ಎದುರಿಸುತ್ತಿರುವ ಅಟ್ಟಿಕಾ ಗೋಲ್ಡ್ ಕಂಪನಿಯಿಂದ (Attica Gold Company) ದೇಣಿಗೆ ಸಂಗ್ರಹಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಆರೋಪ ಎದಿರುಸುತ್ತಿರುವ ಕಂಪನಿ ಬಳಿಯಿಂದ ದೇಣಿಗೆ ಸಂಗ್ರಹ ಯಾಕೆ ಎಂದು ಪ್ರಶ್ನಿಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಇಕ್ಬಾಲ್ ಹುಸೇನ್, ಅಟ್ಟಿಕಾ ಗೋಲ್ಡ್ ಕಂಪನಿ ಜಾಹಿರಾತು ನೀಡಿದೆ. ಈ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಕ್ರಮ ವಹಿಸುತ್ತೇನೆ. ಇಡೀ ಕರಗ ಮಹೋತ್ಸವ ನಮ್ಮ ಖರ್ಚಿನಿಂದ ಆಗಲಿದೆ. ಪ್ರತಿಯೊಂದು ವೆಚ್ಚ ನಾವೇ ಭರಿಸಲಿದ್ದೇವೆ. ಕಾರ್ಯಕ್ರಮಕ್ಕೆ ನಟರು, ಕಲಾವಿದರು ಬರಲಿದ್ದಾರೆ ಎಂದರು.
ರಾಮನಗರದ ಮಿನಿ ದಸರಾ ಎಂದೇ ಕರೆಯಲಾಗುವ ಕಗರ ಮಹೋತ್ಸವ ಪ್ರಯುಕ್ತ ನಡೆಯುವ ಸಾಂಸ್ಕೃತಿ ಕಾರ್ಯಕ್ರಮದ ಆಯೋಜಕತ್ವದಲ್ಲಿ ರಾಜಕೀಯ ಬೆರೆತುಕೊಂಡಿದೆ. ಅದರಂತೆ ಕಳೆದ 2004 ರಿಂದ ಜೆಡಿಎಸ್ ಈ ಕಾರ್ಯಕ್ರಮದ ಆಯೋಜಕತ್ವ ಮಾಡಿಕೊಂಡು ಬಂದಿದೆ. ಆದರೆ ಈ ಬಾರಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಇಕ್ಬಾಲ್ ಹುಸೇನ್ ಗೆಲುವು ಸಾಧಿಸಿದ್ದು, ಇದರಿಂದಾಗಿ ಕರಗ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜಕತ್ವ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ.
ಅಷ್ಟೇ ಅಲ್ಲದೆ, ಕಾರ್ಯಕ್ರಮ ಆಯೋಜಕತ್ವ ಪಡೆಯುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಟಾಪಟಿಯೂ ನಡೆದಿದೆ. ಹಲವು ವರ್ಷಗಳಿಂದ ನಾವೇ ಆಯೋಜಕತ್ವ ವಹಿಸಿದ್ದೇವೆ. ಈ ಬಾರಿಯೂ ನಮಗೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದ ಜೆಡಿಎಸ್ ಶಾಸಕರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಅದಾಗ್ಯೂ, ಕಾರ್ಯಕ್ರಮದ ಆಯೋಜಕತ್ವವನ್ನು ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ