ಬೇಸಿಗೆ (Summer) ಬಂದ್ರೆ ಸಾಕು ಮಾವಿನ ಹಣ್ಣಿನ ಸೀಸನ್ ಶುರು, ಇಡೀ ರಾಜ್ಯಕ್ಕೆ ಮಾವು ಪ್ರವೇಶ ಆಗೋದೆ ರಾಮನಗರ (Ramanagara) ಜಿಲ್ಲೆಯಿಂದ. ಆದರೆ ಈ ಬಾರಿ ಕಂಡೂಕೇಳರಿಯದ ರೀತಿಯಲ್ಲಿ ಮಾವಿಗೆ ಬರಗಾಲ ಬಂದಿದೆ. ಸುಮಾರು 4 ನೂರು ಕೋಟಿ ಅಧಿಕ ಮೌಲ್ಯ ಲಾಸ್ ಆಗಿದ್ದು 28 ಸಾವಿರ ರೈತ ಕುಟುಂಬಗಳ (Farmers) ಸ್ಥಿತಿ ಶೋಚನೀಯವಾಗಿದೆ…ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ… ಮಾವು.. ಮಾವಿಗೆ ಹಣ್ಣಿನ ರಾಜ (Mango) ಎಂದು ಕರೆಯುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಮಾವಿನ ಸೀಸನ್ ಶುರುವಾಗೋದೇ ರಾಮನಗರದಿಂದ. ಅತ್ಯಂತ ಉತೃಷ್ಟ ಹಾಗೂ ವಿವಿಧ ವೆರೈಟಿ ಮಾವು ತಳಿಗಳನ್ನು ವಿದೇಶಕ್ಕೆ ರಫ್ತು ಮಾಡುವ ರೇಷ್ಮೆ ನಗರಿ ರಾಮನಗರಕ್ಕೆ ಈ ಬಾರಿ ಮಾವು ಬೆಳೆಯ ಇತಿಹಾಸದಲ್ಲೇ ಕಂಡೂಕೇಳರಿಯದ ಬರಗಾಲ ಬಂದಿದೆ.
2 ಲಕ್ಷ 50 ಸಾವಿರ ಮೆಟ್ರಿಕ್ ಟನ್ ಮಾವು ಉತ್ಪಾದನೆ ಆಗುತ್ತಿದ್ದ ಜಿಲ್ಲೆಯಲ್ಲಿ ಈಗ ಕೆಲವೇ ಕೆಲವು ಟನ್ ಗಳ ಮಾವು ಉತ್ಪಾದನೆ ಆಗಬಹದು ಎಂದು ಲೆಕ್ಕಾಚಾರ ಮಾಡಲಾಗಿದ್ದು ರೈತರು ಬೆಳೆದ ಶೇ 100 ರಷ್ಟು ಬೆಳೆಯಲ್ಲಿ ಕೇವಲ10 ರಿಂದ 15 ಪರ್ಸೆಂಟ್ ಮಾತ್ರ ಇಳುವರಿ ಬರಲಿದೆ ಅಂತ ರಾಮನಗರ ತೋಟಗಾರಿಕಾ ಇಲಾಖೆಯ ವತಿಯಿಂದ ಉಪ ನಿರ್ದೇಶಕ ಎಮ್ ಎಸ್ ರಾಜು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಲಕ್ಷಾಂತರ ಟನ್ ನಷ್ಟು ಮಾವು ಬೆಳೆದು ಮುಂಬೈ ವಹಿವಾಟುದಾರರಿಗೆ ಮಾರಾಟ ಮಾಡುತ್ತಿದ್ದ ರಾಮನಗರ ರೈತರಿಗೆ ಈಗ ಬರಸಿಡಿಲು ಬಡಿದಂತಾಗಿದೆ. ಸಾಲ ಸೋಲ ಮಾಡಿ ಎಕರೆಗಟ್ಟಲೇ ಮಾವು ಬೆಳೆದು, ಮಾವು ಮಾರಿ, ಬಂದ ಲಾಭದಲ್ಲಿ ಮನೆ ಕಟ್ಟಬೇಕು, ಮಗಳ ಮದುವೆ ಮಾಡಿಸಬೇಕು, ಮಗನ ಕಾಲೇಜು ಫೀಸ್ ಕಟ್ಟಬೇಕು ಎಂದುಕೊಂಡಿದ್ದ ಮಾವು ಬೆಳೆಗಾರರು ಹವಾಮಾನ ವೈಪರೀತ್ಯ, ಬಿರು ಬಿಸಿಲಬೇಗೆಗೆ ಮಾವಿನ ಮರದಲ್ಲಿ ಕಾಯಿ ಕಟ್ಟಬೇಕಿದ್ದ ಹೂಗಳೆಲ್ಲವು ಉದುರಿಹೋಗಿ ಮಾವು ಭ್ರೂಣಾವಸ್ಥೆಯಲ್ಲಿಯೇ ಕೈಕೊಟ್ಟಿದೆ. ಬಿಸಿಲ ಝಳ ತಾಳಲಾರದೇ ಮರದ ಎಲೆಗಳೂ ಕೂಡ ಮುದುಡಿ ಹೋಗಿವೆ.
ಇದನ್ನೂ ಓದಿ: Viral Video: ಸರಳತೆಯ ಸಾಹುಕಾರ, ವಿದ್ಯಾರ್ಥಿನಿಗೆ ತನ್ನ ಆಸನ ಬಿಟ್ಟುಕೊಟ್ಟ ಬಾಗಲಕೋಟೆ ಜಿ.ಪಂ ಸಿಇಒ
ಮಾವಿನ ಬೆಳೆ ಬರುತ್ತೆ ಅಂತ ಕನಸು ಕಟ್ಟಿದ್ದ ರೈತರ ಕನಸು ನುಚ್ಚುನೂರಾಗಿ ಹೋಗಿದೆ. ಮುಂಗಾರು ಚೆನ್ನಾಗಿ ಆಗುತ್ತೆ, ಮಾವು ಬೆಳೆಗಾರರು ಆದಷ್ಟು ಪ್ರಯತ್ನ ಪಡಿ ಎಂದಿದ್ದಕ್ಕೆ ರೈತರು ಸಾಲಸೋಲ ಮಾಡಿ ಮಾವಿನ ತೋಟಕ್ಕೆ ದುಡ್ಡು ಸುರಿದು ಕಷ್ಟ ಪಟ್ಟಿದ್ದರು. ಆದರೆ ಆ ಕಡೆ ಮುಂಗಾರು ಆಗದೇ, ಈ ಕಡೆ ಬಿಸಿಲು ಸಹ ಕಡಿಮೆ ಆಗದೇ ಇಡೀ ಮಾವಿನ ಬೆಳೆ ನಾಶವಾಗಿದೆ ಎನ್ನುತ್ತಾರೆ ಸ್ಥಳೀಯ ಮಾವು ಬೆಳೆಗಾರ ಶಿವರಾಜು.
ಜಿಲ್ಲೆಯಲ್ಲಿ ಒಂದೇ ಒಂದು ಮಳೆಯಾಗದ ಹಿನ್ನೆಲೆ ಪರಿಸ್ಥಿತಿ ಅರಿತಿದ್ದ ಜಿಲ್ಲಾಡಳಿತ ವಸ್ತುಸ್ಥಿತಿ ಅರಿಯಲು ಗ್ರೌಂಡ್ ಜೀರೋಗೆ ತೆರಳಿ ಸರ್ವೇ ಮಾಡಿದ್ದು, ಎನ್ ಡಿ ಆರ್ ಎಫ್ ತಂಡದ ಜೊತೆ ಸೇರಿ ನಷ್ಟವಾಗಿರುವ ಒಟ್ಟು ಅಂಕಿಅಂಶವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಬೆಳೆ ವಿಮೆ ಮಾಡಿಸಿಕೊಂಡಿರುವ ರೈತರು ಎಕರೆಗೆ 20 ರಿಂದ 22 ಸಾವಿರ ರೂಪಾಯಿಯಷ್ಟು ಪರಿಹಾರ ಸಿಗುವ ಭರವಸೆಯಲ್ಲಿದ್ದರೆ, ವಿಮೆ ಮಾಡಿಸಿಕೊಳ್ಳದ ಸಣ್ಣಪುಟ್ಟ ರೈತರು ಖಾಲಿ ಕಣ್ಣುಗಳಿಂದ ಆಕಾಶ ನೋಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Mon, 13 May 24