ರಾಮನಗರ: ರೇಷ್ಮೆ ರೀಲರ್ಸ್​ಗೆ ಆಗಿರುವ ನಷ್ಟವನ್ನು ಸರ್ಕಾರವೇ ಭರಿಸಲಿದೆ: ಸಿಎಂ ಬೊಮ್ಮಾಯಿ

| Updated By: ವಿವೇಕ ಬಿರಾದಾರ

Updated on: Aug 29, 2022 | 7:08 PM

ರಾಜ್ಯದ 14 ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ರಾಮನಗರ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಕಾಲುವೆ ಮುಚ್ಚಿದ್ದರಿಂದ ಸಮಸ್ಯೆಯಾಗಿದೆ ಎಂದು ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಮನಗರ: ರೇಷ್ಮೆ ರೀಲರ್ಸ್​ಗೆ ಆಗಿರುವ ನಷ್ಟವನ್ನು ಸರ್ಕಾರವೇ ಭರಿಸಲಿದೆ: ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ರಾಮನಗರ: ರಾಜ್ಯದ 14 ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ರಾಮನಗರ-ಮೈಸೂರು ರಾಷ್ಟ್ರೀಯ ಹೆದ್ದಾರಿಯ (National Highway) ಹಲವೆಡೆ ಕಾಲುವೆ ಮುಚ್ಚಿದ್ದರಿಂದ ಸಮಸ್ಯೆಯಾಗಿದೆ ಎಂದು ರಾಮನಗರದಲ್ಲಿ (Ramanagara) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಇಂದು (ಆ 29) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು ಕಾಲುವೆ ತೆರವುಗೊಳಿಸುವಂತೆ ಎನ್​ಹೆಚ್​ಎಐಗೆ ಸೂಚಿಸಿದ್ದೇನೆ. ಅವರು ಕಾಲುವೆ ತೆರವುಗೊಳಿಸುವವರೆಗು ನಾವು ಕಾಯುವುದಿಲ್ಲ. ರಾಜ್ಯ ಸರ್ಕಾರವೇ ಕಾಲುವೆಗಳನ್ನು ತೆರವುಗೊಳಿಸಲಿದೆ. ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಸಂಕಷ್ಟದಲ್ಲಿರುವವರಿಗೆ ಶೀಘ್ರದಲ್ಲೇ ತಾತ್ಕಾಲಿಕ ಪರಿಹಾರ ನೀಡುತ್ತೇವೆ. ಸರ್ಕಾರದ ವತಿಯಿಂದ ಪಡಿತರ ಕಿಟ್ ವಿತರಿಸುತ್ತಿದ್ದೇವೆ. ರೇಷ್ಮೆ ರೀಲರ್ಸ್​ಗೆ ಆಗಿರುವ ನಷ್ಟವನ್ನು ಸರ್ಕಾರವೇ ಭರಿಸಲಿದೆ ಎಂದು ಚನ್ನಪಟ್ಟಣದ ಶೇರ್ವಾ ಸರ್ಕಲ್ ಬಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಹೇಳಿದ್ದಾರೆ.

ಕರೆ ಕೋಡಿ ಒಡೆದು ರಾಮನಗರದಲ್ಲಿ ಸಾಕಷ್ಟು ಸಮಸ್ಯೆ ಆಗಿದೆ. ನಾಲ್ಕೈದು ಬಡಾವಣೆಯ ಎರಡು ಸಾವಿರಕ್ಕಿಂತ ಹೆಚ್ಚು ಮನೆಗೆ ಹಾನಿಯಾಗಿದೆ. ದಿನ ನಿತ್ಯದ ಬದುಕಿಗೆ ಬೇಕಾದ ದಿನಸಿ ಉಚಿತ ನೀಡುತ್ತೇವೆ. ಸಿಲ್ಕ್ ಫ್ಯಾಕ್ಟರಿಗೆ ನಷ್ಟವಾಗಿದೆ, ಸಿಲ್ಕ್ ರೀಲ್ ಗೆ ನೀರು ನುಗ್ಗಿ ಹಾನಿಯಾಗಿದೆ. ಮನೆಗಳಿಗೆ ಒಂದು ವಾರದೊಳಗೆ ಪರಿಹಾರ ನೀಡುತ್ತೇವೆ. ಪಾತ್ರೆ ಮತ್ತು ಇತರೆ ವಸ್ತು ಖರೀದಿಗೆ ತಕ್ಷಣಕ್ಕೆ 10 ಸಾವಿರ ತಕ್ಷಣಕ್ಕೆ ಪರಿಹಾರ ನೀಡುತ್ತೇವೆ ಎಂದರು.

ನಂತರ ಮನೆ ಹಾನಿಗೆ ಪರಿಹಾರ ನೀಡುತ್ತೇವೆ. ರೇಷ್ಮೆ ಹಾನಿ ಬಗ್ಗೆ ಎಸ್ಟಿಮೇಟ್ ಮಾಡಲು ಹೇಳಿದ್ದೇನೆ. ರಾಜ್ಯ ಸರ್ಕಾರ ಆ ನಷ್ಟ ಭರಿಸೊ ಕೆಲಸ ಮಾಡುತ್ತೆ. ತಡೆಗೋಡೆ ಕಟ್ಟಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಪುರಸಭೆ ವ್ಯಾಪ್ತಿಯಲ್ಲಿ ನೀರು ನುಗ್ಗಿ ಹಾಳಾಗಿರೊ ರಸ್ತೆ ಕೂಡ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಮನಗರದ ಟ್ರೂಪ್​ಲೈನ್ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಭಕ್ಷಿ ಕೆರೆ ಏರಿ ಒಡೆದು ಹಾನಿಯಾದ 100ರಿಂದ 150 ಮನೆಗಳಿಗೆ ಭೇಟಿ ನೀಡಿದರು. ನಂತರ ಗೌಸಿಯಾನಗರದಲ್ಲಿ ಹಾನಿ ಪರಿಶೀಲಿಸಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಸಿಎಂ ಬೊಮ್ಮಾಯಿ ಅವರಿಗೆ ಪರಿಸ್ಥಿತಿ ಬಗ್ಗೆ ವಿವರಿಸಿದರು.

ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯ ಕೆರೆ ಕೋಡಿ ಒಡೆದು ತಿಟ್ಟಮಾರನಹಳ್ಳಿ ಗ್ರಾಮ ಭಾಗಶಃ ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಕಾಳಜಿ ಕೇಂದ್ರ ನಿರ್ಮಾಣ ಮಾಡಲಾಗಿದೆ.

ರಾಮನಗರದ ಟ್ರೂಪ್​ ಲೈನ್​ ಬಡಾವಣೆ ಜಲಾವೃತಗೊಂಡಿದ್ದು, ನಿರಂತರ ಮಳೆಯಿಂದಾಗಿ ಟ್ರೂಪ್​ ಲೈನ್​ ಬಡಾವಣೆಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ರೇಷ್ಮೆ ತಯಾರಿಕಾ ಯಂತ್ರಗಳಿಗೆ ಹಾನಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಹೆಚ್​. ಡಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್, ಸಚಿವ ಆರ್ ಅಶೋಕ್ ಮತ್ತು ಕ್ಷೇತ್ರ ಶಾಸಕಿ ಅನಿತಾ ಕುಮಾರಸ್ವಾಮಿ, ಸಾಥ್​ ನೀಡಿದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ಕುಸಿತಗೊಂಡಿರುವ ಘಟನೆ ರಾಮನಗರ ತಾಲೂಕಿನ ಹರಿಸಂದ್ರ-ತಿಮ್ಮೇಗೌಡನದೊಡ್ಡಿ ನಡುವೆ ನಡೆದಿದೆ. ಹರಿಸಂದ್ರ ಸೇತುವೆ ಕುಸಿದಿದ್ದರಿಂದ ವಾಹನಗಳ ಸಂಚಾರ ವ್ಯತ್ಯಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Mon, 29 August 22