ರಾಮನಗರ, ಸೆಪ್ಟೆಂಬರ್ 7: ರಾಮನಗರದ ದುಸ್ಥಿತಿಗೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬವೇ ಕಾರಣ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ವಿಪಕ್ಷ ನಾಯಕನೇ ಇಲ್ಲ. ಬಿಜೆಪಿಗೆ ಇಂಥ ದುಸ್ಥಿತಿ ಯಾವ ಕಾಲಕ್ಕೂ, ಯಾವ ಪಕ್ಷಕ್ಕೂ ಬಂದಿರಲಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ವರ್ಷ ತುಂಬಿದ ಹಿನ್ನೆಲೆ ರಾಮನಗರದಲ್ಲಿ ಆಯೋಜಿಸಿದ್ದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮನಗರದ ಹಿಂದಿನ ಫೋಟೋ ನೋಡಿ ನನಗೆ ಭಯ ಆಗೋಗಿತ್ತು. 20 ವರ್ಷದಿಂದ ಅಧಿಕಾರದಲ್ಲಿದ್ದರೂ ರಾಮನಗರ ಸಂಪೂರ್ಣ ಕಡೆಗಣಿಸಿದ್ದರು. ಪ್ರಧಾನಿ ಮೋದಿಗೆ ವಿಧಾನಸಭೆ ಬೇಜಾರಾಗಿ ವಿಪಕ್ಷ ನಾಯಕರನ್ನೇ ನೇಮಿಸಿಲ್ಲ. ಬಿಜೆಪಿಗೆ ನಾಯಕತ್ವವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಜೆಡಿಎಸ್, ಬಿಜೆಪಿ ಜಂಟಿಯಾಗಿ ಬಂದ್ ಕರೆದಿದ್ದಾರಾ? ಯಾಕಪ್ಪ ಬಿಜೆಪಿ ಅಶ್ವತ್ಥ್ ನಾರಾಯಣ ವೈದ್ಯಕೀಯ ಕಾಲೇಜು ಮಾಡಲಿಲ್ಲ. ಇದೇ ಕುಮಾರಸ್ವಾಮಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ಘೋಷಿಸಿದ್ದರು. ಇದನ್ನು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡಿದ್ದು ಯಾರಪ್ಪ ಡಾ.ಕೆ.ಸುಧಾಕರ್. ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ. ರಾಮನಗರ, ಕನಕಪುರದಲ್ಲೂ ಅಗತ್ಯವಿದ್ದರೆ ವೈದ್ಯ ಕಾಲೇಜು ಸ್ಥಾಪಿಸುತ್ತೇವೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನಾಯಕರು ಭಾವನೆ ಮೇಲೆ ನಿಂತಿದ್ದಾರೆ. ನಾವು ಬದುಕಿನ ಮೇಲೆ ನಡೆಯುತ್ತಿದ್ದೇವೆ. ನಾವು ನಿಮ್ಮ ಸೇವಕ. ನಿಮ್ಮ ಬದುಕು ನಮ್ಮ ಬದುಕು, ನಿಮ್ಮ ಜೀವನದ ಬದಲಾವಣೆ ನಮ್ಮ ಬದಲಾವಣೆ.
ಇದನ್ನೂ ಓದಿ: ರಾಮನಗರ: ಭಾರತ್ ಜೋಡೋ ಯಾತ್ರೆಗೆ 1 ವರ್ಷ; ನೆನಪಿಗಾಗಿ ರಾಮನಗರ ಸೇರಿ ಹಲವು ಜಿಲ್ಲೆಗಳಲ್ಲಿ ಜರುಗಿದ ಪಾದಯಾತ್ರೆ
ಎಲ್ಲಾ ಜನರು ಒಟ್ಟಾಗಿ ಬದುಕೋಣ. ಸಿಎಂ ಇಲ್ಲೇ ಇದ್ದಾರೆ, ಕನಕಪುರಕ್ಕೆ 1 ರೂಪಾಯಿ ಅನುದಾನ ಬೇಡ. ರಾಮನಗರ, ಮಾಗಡಿ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಡಿ ಎಂದು ಸಿಎಂಗೆ ಬಹಿರಂಗವಾಗಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕಳೆದ 20 ವರ್ಷಗಳಿಂದ ಕೆಲವರು ರಾಮನಗರವನ್ನು ಮರೆತಿದ್ದರು. ರಾಮನಗರದಲ್ಲಿ ಕಾಂಗ್ರೆಸ್ ಗೆದ್ದ ಮೇಲೆ ಎಲ್ಲರನ್ನೂ ಭಾಯಿ ಭಾಯಿ ಅಂತಾರೆ. ರಾಮನಗರ ಒಡೆಯಲು ಪ್ರಯತ್ನ ಮಾಡಿದ್ದವರು ನೀವು. ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದವರು ನೀವು. ರಾಮನಗರ ಬಂದ್ಗೆ ಕರೆ ನೀಡುತ್ತೇವೆ ಅಂದವರಿಗೆ ಉತ್ತರಿಸಿದ್ದಾರೆ. ನಿಮ್ಮ ಸ್ಥಾನ ಏನು ಎನ್ನುವುದನ್ನು ರಾಮನಗರ ಜನರೇ ತೋರಿಸಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಮತ್ತು ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ಮಾಡಿದರು.
ಚನ್ನಪಟ್ಟಣದಲ್ಲಿ ಇಬ್ಬರು ಬೀದಿ ನಾಯಿಗಳ ತರಹ ಕಿತ್ತಾಡುತ್ತಿದ್ದರು. ಇಷ್ಟು ವರ್ಷ ಬಣ್ಣ ಹಚ್ಚಿಕೊಂಡು ನಾಟಕ ಮಾಡುವ ಕೆಲಸ ಮಾಡಿದರು. ನವರಂಗಿ ಆಟ ಆಡ್ತಾರೆ ಅಯ್ಯಯ್ಯಪ್ಪ. ಒಬ್ಬರು ಸರ್ಕಾರ ಬೀಳಿಸುತ್ತೇನೆ ಅಂತ ಓಡಾಡುತ್ತಿದ್ದಾರೆ. ಮತ್ತೊಬ್ಬರು ಆರೇ ತಿಂಗಳಲ್ಲಿ ಸರ್ಕಾರ ಬಿದ್ದೋಗುತ್ತೆ ಅಂತಿದ್ದಾರೆ. ಯಾರು ಏನೇ ಹೇಳಿದರೂ ನಮ್ಮ ಸರ್ಕಾರ 5 ವರ್ಷ ಸುಭದ್ರವಾಗಿರುತ್ತೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ವಿಚಾರದಲ್ಲಿ ಸದ್ದು ಮಾಡುತ್ತಿದ್ದೀರಿ. ಮೆಡಿಕಲ್ ಕಾಲೇಜು ಬಗ್ಗೆ ಬಿಜೆಪಿ, ಜೆಡಿಎಸ್ನವರು ಮಾತಾಡಿದ್ದಾರಾ? ಇಷ್ಟು ದಿನ ಭ್ರಮೆಯಲ್ಲಿದ್ದವರಿಗೆ ಜನರು ಬುದ್ಧಿ ಕಲಿಸಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.