ರಾಮನಗರ: IPS ಅಧಿಕಾರಿ ಡಿ ರೂಪಾ (D Roopa), IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಇವರ ಇಬ್ಬರ ಜಗಳದಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ (DK Ravi) ಅವರ ಹೆಸರು ಎಳೆದು ತಂದಿದ್ದು, ಈ ವಿಚಾರವಾಗಿ ಡಿ.ಕೆ.ರವಿ ತಾಯಿ ಗೌರಮ್ಮ ನಿಮ್ಮ ಗಲಾಟೆ ವಿಚಾರದಲ್ಲಿ ನನ್ನ ಮಗನ ಹೆಸರು ಎಳೆದು ತರಬೇಡಿ ಎಂದು ಹೇಳಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕದರಮಂಗಳ ಗ್ರಾಮದಲ್ಲಿ ಮಾಧ್ಯಮ ಪ್ರಿನಿಧಿಗಳೊಂದಿಗೆ ಮಾತನಾಡಿದ ಅವರು ನೀವಿಬ್ಬರೂ ಏನಾದರೂ ಕಿತ್ತಾಡಿ, ಆದರೆ ನನ್ನ ಮಗನ ಹೆಸರು ತರಬೇಡಿ ಟಿವಿ 9 ಎದುರು ಕಣ್ಣೀರಿಟ್ಟಿದ್ದಾರೆ.
8 ವರ್ಷವಾಯ್ತು ನನ್ನನ್ನು ನೋಡಲು ಯಾರೂ ಬಂದಿಲ್ಲ. ಡಿ.ಕೆ.ರವಿಯನ್ನು ನಾನು ಸಾಕಿ ಬೆಳೆಸಿದ್ದೇನೆ. ಡಿ.ಕೆ.ರವಿ ಜತೆ ಕುಸುಮಾ 5 ವರ್ಷ ಅಷ್ಟೆ ಸಂಸಾರ ಮಾಡಿದ್ದಾಳೆ. ನನ್ನ ಮಗ ಇರುವವರೆಗೂ ಮಾತ್ರ ಆಕೆ ಸೊಸೆ. ಹೀಗಾಗಿ ನೀವ್ಯಾರೂ ನನ್ನ ಮಗನ ಹೆಸರನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ.
ರೂಪಾ ಅನ್ನೋರು ಯಾರು? ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಯಾವ್ಯಾವ ಅಧಿಕಾರಿಗಳಿಗೆ ಫೋಟೋ ಕಳುಹಿಸಿದ್ದಾರೆ ಮೊದಲು ಹೇಳಿ. ನಾನು ಹುಟ್ಟಿದ್ದು ಇಲ್ಲೇ, ನಾನು ಕನ್ನಡಿಗ. ಆಂಧ್ರಪ್ರದೇಶದಲ್ಲಿ ನಮ್ಮ ಸಂಬಂಧಿಕರು ಯಾರೂ ಇಲ್ಲ. ನಮ್ಮ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡುವುದು ಸರಿಯಲ್ಲ. ರೋಹಿಣಿ ಸಿಂಧೂರಿ ಸಾಮಾಜಿಕ ಜಾಲತಾಣ ಬಳಕೆ ಮಾಡುತ್ತಿಲ್ಲ. ಫೋಟೋಗಳನ್ನು ಅವರು ಹ್ಯಾಕ್ ಮಾಡಿ ತೆಗೆದುಕೊಂಡಿರಬಹುದು. ರೋಹಿಣಿ ಸಿಂಧೂರಿ ಯಾರಿಗೆ ಫೋಟೋ ಕಳಿಸಿದ್ದಾರೆ ಹೆಸರು ಹೇಳಿ. ನನ್ನ ತಂದೆ ಕಾಲದಿಂದಲೂ ರಿಯಲ್ ಎಸ್ಟೇಟ್ ಮಾಡುತ್ತಿದ್ದೇವೆ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಬೆಂಗಳೂರಿನಲ್ಲಿ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ವಾಗ್ದಾಳಿ ಮಾಡಿದ್ದಾರೆ.
IPS ಅಧಿಕಾರಿ ರೂಪಾ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಹೊಟ್ಟೆಕಿಚ್ಚಿನಿಂದ ಡಿ.ರೂಪಾ ಅವರು ಈ ರೀತಿ ಮಾಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಒಳ್ಳೆಯ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ಹಣಕಾಸು ವಿಚಾರದಲ್ಲಿ ನಾವು ಚೆನ್ನಾಗಿಯೇ ಇದ್ದೇವೆ. ಡಿ.ಕೆ.ರವಿ ಅವರ ವಿಚಾರವನ್ನು ಈಗ ಪ್ರಸ್ತಾಪಿಸುವುದು ಸರಿಯಲ್ಲ. ಹೋಗಿರುವವರ ಬಗ್ಗೆ ಏನನ್ನೂ ಮಾತನಾಡಬಾರದು. ಹೋಗಿರುವವರ ಬಗ್ಗೆ ಮಾತನಾಡುವ ಸಂಸ್ಕಾರ ರೂಪಾ ಅವರದ್ದು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Mon, 20 February 23