
ರಾಮನಗರ, ಜೂನ್ 16: ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತಿದೆ. ನಮಗೆ ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಮೊದಲು ಹೋಗುವುದೇ ವೈದ್ಯರ ಬಳಿ. ಆದರೆ, ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಹಣದಾಸೆಗೆ ಮುಗ್ದ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇದಕ್ಕೆ ಸ್ವಷ್ಟ ನಿದರ್ಶನವೆಂಬಂತೆ, ಮೂರು ದಿನಗಳ ಹಿಂದೆ ರಾಮನಗರದಲ್ಲಿ (Ramanagara) (ಬೆಂಗಳೂರು ದಕ್ಷಿಣ ಜಿಲ್ಲೆ) ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಶಿವರಾಜ್ ಎಂಬುವವರ ಆರು ತಿಂಗಳ ಶರಣ್ಯ ಎಂಬ ಕಂದಮ್ಮ ಸಾವನ್ನಪ್ಪಿದೆ. ವೈದ್ಯಕೀಯ ಕೋರ್ಸ್ ಮಾಡದೇ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಸಣ್ಣ ಕೋಣೆಯಲ್ಲಿ ಚಿಕಿತ್ಸೆ ನೀಡಿದ ನಕಲಿ ವೈದ್ಯ (Fake Doctor) ಮಹಮ್ಮದ್ ಸೈಫುಲ್ಲ ಎಂಬಾತನಿಂದಾಗಿ ಮಗು ಬಾರದ ಲೋಕಕ್ಕೆ ತೆರಳಿದೆ. ಇದು ಜಿಲ್ಲೆಯ ಜನರನ್ನು ಸಾಕಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಇದೊಂದು ಪ್ರಕರಣ ಅಷ್ಟೇ ಅಲ್ಲದೆ, ರಾಮನಗರದಲ್ಲಿ ಸಾಕಷ್ಟು ನಕಲಿ ಕ್ಲಿನಿಕ್ಗಳು ತಲೆ ಎತ್ತಿದ್ದು ಅವುಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯಾದ್ಯಂತ ಒಟ್ಟು 193 ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಮಾತ್ರ ಆರೋಗ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಆದರೆ ಕೆಲವರು ಹಣದಾಸೆಗೆ ನಕಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆ ಕಳೆದ ನಾಲ್ಕು ತಿಂಗಳಲ್ಲಿ ಆರು ನಕಲಿ ವೈದ್ಯರನ್ನು ಪತ್ತೆ ಮಾಡಿದೆ. ಇಬ್ಬರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೂ ಇನ್ನೂ ಕೆಲವರು ಹಣದಾಸೆಗೆ ನಕಲಿ ಕ್ಲಿನಿಕ್ ನಡೆಸುತ್ತಿದ್ದಾರೆ.
6 ತಿಂಗಳ ಮಗುವಿನ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮಕ್ಕೂ ಸೂಚನೆ ನೀಡಿದೆ.
ಇದನ್ನೂ ಓದಿ: ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ವಿಡಿಯೋ ವೈರಲ್
ನಕಲಿ ಕಲಿನಿಕ್ಗಳ ಬಗ್ಗೆ ಜನರು ಎಚ್ಚರಿದಿಂದ ಇರಬೇಕು. ಗಮನಕ್ಕೆ ಬಂದ ಕೂಡಲೇ ಅವುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ, ನಕಲಿ ವೈದ್ಯರ ಹಾವಳಿಯಿಂದ ಜಿಲ್ಲೆಯಲ್ಲಿ ಮುಗ್ದ ಜನರು ಜೀವ ಕಳೆದುಕೊಳ್ಳುವಂತಾಗುತ್ತಿದೆ. ಇನ್ನಾದರೂ ಇಂತಹ ನಕಲಿಗಳ ವಿರುದ್ಧ ಸರ್ಕಾರ ಸೂಕ್ತ ಹಾಗೂ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.