ರಾಮನಗರದಲ್ಲಿ ಆನೆ ದಾಳಿಗೆ ರೈತ ಬಲಿ; ಮೈಸೂರಿನಲ್ಲಿ ಹುಲಿ ದಾಳಿಗೆ ಹಸುಗಳ ಸರಣಿ ಸಾವು

ಕರ್ನಾಟಕದಲ್ಲಿ ಕಾಡು ಪ್ರಾಣಿಗಳ ಕಾಟ ಮಿತಿ ಮೀರಿದೆ. ರಾಮನಗರದಲ್ಲಿ ಜಮೀನಿನಲ್ಲಿ ನೀರು ಹಾಯಿಸಲು‌ ತೆರಳಿದ್ದ ರೈತ ಕಾಡಾನೆ ದಾಳಿಯಿಂದ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಉತ್ತರ ಕನ್ನಡದಲ್ಲಿ ಆನೆಯೊಂದು ಹೆದ್ದಾರಿ ತಡೆದಿದೆ. ಮೈಸೂರಿನಲ್ಲಿ ಹುಲಿಗಳು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಆನೆ ದಾಳಿಗೆ ರೈತ ಬಲಿ; ಮೈಸೂರಿನಲ್ಲಿ ಹುಲಿ ದಾಳಿಗೆ ಹಸುಗಳ ಸರಣಿ ಸಾವು
ಕಾಡಾನೆ ದಾಳಿಗೆ ಬಲಿಯಾದ ದುಂಡುಮಾದ

Updated on: Dec 14, 2025 | 11:13 AM

ಬೆಂಗಳೂರು, ಡಿಸೆಂಬರ್ 14: ರಾಜ್ಯದ ಹಲವೆಡೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಸಾಕು ಪ್ರಾಣಿಗಳು ಸೇರಿದಂತೆ ಮನುಷ್ಯರ ಜೀವಕ್ಕೂ ಕುತ್ತು ಬಂದಿದೆ. ಜಮೀನಿನಲ್ಲಿ ನೀರು ಹಾಯಿಸಲು‌ ತೆರಳಿದ್ದ ರೈತ, ಕಾಡಾನೆ ದಾಳಿಯಿಂದ ಮೃತಪಟ್ಟ ಘಟನೆ ರಾಮನಗರದ (Ramanagara)  ಹಾರೋಹಳ್ಳಿ‌ ತಾಲೂಕಿನ ದುನ್ನಸಂದ್ರದಲ್ಲಿ ನಡೆದಿದೆ. ಕಾಡು ಪ್ರಾಣಿಗಳ ಹಾವಳಿ ಕುರಿತು ನಿಗಾ ವಹಿಸದ ಅರಣ್ಯಾಧಿಕಾರಿಗಳ ಮೇಲೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಾಡಾನೆಯಿಂದ ದಾಳಿ?

ಬೆಂಗಳೂರು ದಕ್ಷಿಣ ಜಿಲ್ಲೆಯ ದುನ್ನಸಂದ್ರದ ರೈತ ದುಂಡಮಾದ (50) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ. ಬೆಳಗಿನ ಜಾವ ತನ್ನ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ರೈತನ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ದುಂಡಮಾದ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಜಮೀನಿಗೆ ತೆರಳಿದ ರೈತ ಸಾಕಷ್ಟು ಸಮಯವಾದರೂ ಮನೆಗೆ ಮರಳದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ಪರಿಶೀಲನೆ ನಡೆಸಿದಾಗ ಆತ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಕಾಡಾನೆ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದಿದೆ ಎಂದು ಹೇಳಲಾಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಹೆದ್ದಾರಿಯ ಮಧ್ಯೆ ಕಾಡಾನೆ ರಿಲ್ಯಾಕ್ಸ್

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕಾತೂರ ಗ್ರಾಮದ ಪಾಳಾ – ಕೊಡಂಬಿ ರಸ್ತೆಯಲ್ಲಿ ಒಂಟಿಸಲಗವೊಂದು ರಸ್ತೆಗೆ ಅಡ್ಡ ನಿಂತಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮಧ್ಯ ರಸ್ತೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಆನೆಯನ್ನು ಕಂಡ ಸವಾರರು ವಾಹನ ಮುಂದಕ್ಕೆ ಚಲಾಯಿಸಲಾಗದೆ ಪರದಾಡಿದರು.

ಇದನ್ನೂ ಓದಿ ರಾಜ್ಯದಲ್ಲಿ ನಿಲ್ಲದ ಕಾಡಾನೆ ಹಾವಳಿ; ಕೊಡಗಿನಲ್ಲಿ ಆನೆ ದಾಳಿಗೆ ಕಾರ್ಮಿಕ ಬಲಿ

ಮೈಸೂರಿನಲ್ಲಿ ಹುಲಿ ಕಾಟಕ್ಕೆ ಬೀಳದ ಬ್ರೇಕ್

ಮೈಸೂರಿನ ಹುಣಸೂರಿನ ವಿನೋಬಾ ಗ್ರಾಮದಲ್ಲಿ ಹಸು ಮೇಲೆ ಹುಲಿ ದಾಳಿ ಮಾಡಿದೆ. ಪ್ರಭಾಕರ್ ಎಂಬುವರಿಗೆ ಸೇರಿದ ಹಸು, ವ್ಯಾಘ್ರ ದಾಳಿಗೆ ಬಲಿಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಊರಿನಲ್ಲಿ ಹುಲಿಯ ಸಂಚಾರದಿಂದ ಗ್ರಾಮಸ್ಥರಲ್ಲಿಯೂ ಆತಂಕ ಹೆಚ್ಚಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ರಾತ್ರಿ ಗಸ್ತು ವಾಹನದ ಮೂಲಕ ಗ್ರಾಮದಲ್ಲಿ ಹುಲಿಯ ಸಂಚಾರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಹುಣಸೂರಿನ ನಾಗಮಂಗಲ ಗ್ರಾಮದಲ್ಲಿಯೂ ಇಂತದ್ದೇ ಘಟನೆ ನಡೆದಿದ್ದು, ಹುಲಿ ದಾಳಿಗೆ ಹರೀಶ್​ ಎಂಬುವರಿಗೆ ಸೇರಿದ ಹಸು ಬಲಿಯಾಗಿದೆ. ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸು ಮೇಲೆ ಹುಲಿ ದಾಳಿ ಮಾಡಿದ್ದು, ಜನರ‌ ಕೂಗಾಟದಿಂದ ಕಂಗಾಲಾದ ಹುಲಿ ಹಸುವನ್ನು ಎಳೆದುಕೊಂಡು ಕಾಡಿನತ್ತ ಓಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ ಮೈಸೂರಿನ ಸರಗೂರಲ್ಲಿ ನಿಲ್ಲದ ವ್ಯಾಘ್ರನ ಆರ್ಭಟ: ಹುಲಿ ದಾಳಿಗೆ ದನಗಾಹಿ ಸಾವು

ಗಡಿನಾಡಿನಲ್ಲಿ ಮುಂದುವರೆದ ಹುಲಿ ಹಾವಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೋಮ್ಮಲಾಪುರದಲ್ಲಿಯೂ ಹುಲಿ ದಾಳಿಯ ಆತಂಕ ಹೆಚ್ಚುತ್ತಿದ್ದು, ಮಠದ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಹುಲಿ ಬಲಿ ಪಡೆದಿದೆ. ಮಹದೇವಪ್ಪ ಎಂಬುವವರಿಗೆ ಸೇರಿದ ಹಸುವನ್ನು ಇಂದು (ಡಿ.14) ಬೆಳಗ್ಗೆ  ಹುಲಿ ಬೇಟೆಯಾಡಿದ್ದು, ಹಸುವಿನ ಮಾಲೀಕರು ಕಣ್ಣಿರು ಹಾಕುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 11 ಹಸುಗಳನ್ನು ಬಲಿ ಪಡೆದಿರು ಹುಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಗ್ರಾಮಸ್ಥರು ಬಂಡೀಪುರ ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.